ADVERTISEMENT

ಆರೋಗ್ಯಕರ ಪೌಷ್ಟಿಕ ಆಹಾರ ಬಳಸಲು ಸಲಹೆ

ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆ: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 5:26 IST
Last Updated 20 ಸೆಪ್ಟೆಂಬರ್ 2019, 5:26 IST
ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆಯಲ್ಲಿ ಪೌಷ್ಟಿಕ ಆಹಾರಗಳ ಪ್ರದರ್ಶನ ನಡೆಯಿತು 
ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆಯಲ್ಲಿ ಪೌಷ್ಟಿಕ ಆಹಾರಗಳ ಪ್ರದರ್ಶನ ನಡೆಯಿತು    

ಮಡಿಕೇರಿ: ಸ್ಥಳೀಯವಾಗಿ ಸಿಗುವ ಆರೋಗ್ಯಕರ ಪೌಷ್ಟಿಕ ಆಹಾರ ಬಳಸುವುದರಿಂದ ಅಪೌಷ್ಟಿಕತೆ ನಿವಾರಣೆ ಮಾಡಲು ಸಾಧ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ಸಲಹೆ ನೀಡಿದರು.

ನಗರದ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಅವರು ಮಾತನಾಡಿದರು.

ಪ್ರಾಕೃತಿಕ ಹಾಗೂ ಸ್ಥಳೀಯವಾಗಿ ದೊರೆಯುವಂಥ ಆಹಾರ ಹೆಚ್ಚು ಬಳಸುವುದರೊಂದಿಗೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದರೊಂದಿಗೆ ಅಪೌಷ್ಟಿಕತೆ ನಿವಾರಣೆಯಾಗಲು ಸಹಕಾರಿಯಾಗಿದೆ ಎಂದು ಹೇಳಿದರು.

ADVERTISEMENT

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಲೋಕೇಶ್ ಮಾತನಾಡಿ, ತಾಯಂದಿರ ಮತ್ತು ಮಕ್ಕಳ ಉತ್ತಮ ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಪೌಷ್ಟಿಕ ಆಹಾರವನ್ನು ಪ್ರತೀ ನಿತ್ಯ ನೀಡಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಸಮುದಾಯ ವೈದ್ಯಕೀಯ ಶಾಸ್ತ್ರದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮಾತನಾಡಿ, ಉತ್ತಮ ಆರೋಗ್ಯ ಹೊಂದಲು ಉತ್ತಮ ಆಹಾರ ಅವಶ್ಯವಾಗಿದೆ. ಇಂದು ರಾಸಾಯನಿಕ ಆಹಾರ ಪದಾರ್ಥಗಳ ಬಳಕೆಯಿಂದ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಆದ್ದರಿಂದ, ಆಹಾರ ಬಗ್ಗೆ ಗಮನಹರಿಸುವುದು ಅಗತ್ಯ ಎಂದರು.

ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಮಾತನಾಡಿ, ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆಯು ಸೆಪ್ಟೆಂಬರ್‌ನಿಂದ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಈ ಅವಧಿಯಲ್ಲಿ ತಾಯಿ ಮತ್ತು ಮಗುವಿಗೆ ಅವಶ್ಯವಿರುವ ಪೌಷ್ಟಿಕ ಆಹಾರದ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿರುವುದಾಗಿ ಅವರು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್, ಮಕ್ಕಳ ವಿಭಾಗದ ಡಾ.ವೀರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ.ಅಚ್ಚುತಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.