ಮಡಿಕೇರಿ/ ಹುಬ್ಬಳ್ಳಿ: ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ಒಂದು ಗಂಟೆಗೂ ಅಧಿಕ ಕಾಲ ಗುಡುಗಿನಿಂದ ಕೂಡಿದ ಬಿರುಸಿನ ಮಳೆ ಸುರಿಯಿತು.
ಧಾರವಾಡ ತಾಲ್ಲೂಕಿನ ಉಪ್ಪಿನಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ. ಗರಗ ಗ್ರಾಮದೇವಿ ಮೆರವಣಿಗೆ, ರಥೋತ್ಸವಕ್ಕೆ ಕೆಲ ಹೊತ್ತು ಅಡ್ಡಿಯಾಗಿತ್ತು. ಸಿಡಿಲು ಬಡಿದು ಭಾನುವಾರ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಲಕಿ ಗ್ರಾಮದಲ್ಲಿ ಇಬ್ಬರು ಮತ್ತು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹುಣಸಿಹಳ್ಳಿ ಗ್ರಾಮದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಹಲಕಿ ನಿವಾಸಿ ಬಾಲನಾಯ್ಕ ಮರಿನಾಯ್ಕ ನಾಯ್ಕರ (65), ಬೈಲಹೊಂಗಲ ತಾಲ್ಲೂಕಿನ ಮೇಕಲಮರಡಿ ಗ್ರಾಮದ ಶಾನೂರ್ ಹುಸೇನ್‌ಸಾಬ್ ಶಾಬಾಯಿ (28) ಮೃತರು. ಮಳೆ ಬರುತ್ತಿದ್ದ ಕಾರಣ ಇಬ್ಬರೂ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ಹರಪನಹಳ್ಳಿ ತಾಲ್ಲೂಕಿನ ಹುಣಸಿಹಳ್ಳಿ ಗ್ರಾಮದಲ್ಲಿ ಪಿ.ಕೊಟ್ರೇಶಪ್ಪ (50) ಎಂಬುವರು ಮೃತಪಟ್ಟಿದ್ದಾರೆ.
ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲ ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ನದಿಯಲ್ಲಿ ಒಳಹರಿವಿನ ಪ್ರಮಾಣ 1,300 ಕ್ಯುಸೆಕ್ ಇದೆ. ಜಲಾಶಯದಲ್ಲಿ ಸದ್ಯ 8 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.