ಮಡಿಕೇರಿ: ಶೂನ್ಯ ಬಡ್ಡಿದರದ ಕೃಷಿ ಸಾಲ ವಿತರಣೆಗೆ ತೊಡಕಾಗಿರುವ ‘ಸಿಂಗಲ್ ಆರ್‌ಟಿಸಿ’ ಷರತ್ತನ್ನು ಸರಳೀಕರಿಸಬೇಕು ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು.
ಶೂನ್ಯ ಬಡ್ಡಿ ದರದ ಸಾಲ ವಿತರಣೆಗೆ ಸಿಂಗಲ್ ಆರ್‌ಟಿಸಿ, ಅಂದರೆ ಒಬ್ಬರ ಹೆಸರಿನಲ್ಲೆ ಮಾತ್ರ ಇರುವ ಆರ್‌ಟಿಸಿಯನ್ನಷ್ಟೆ ಪರಿಗಣಿಸಬೇಕೆನ್ನುವ ಆದೇಶವನ್ನು ಸರ್ಕಾರ 2021ರಲ್ಲೆ ಹೊರಡಿಸಿತ್ತು. ಹೀಗಿದ್ದರೂ ಕಳೆದ ಸಾಲಿನವರೆಗೂ ನಿಯಮಗಳ ಸರಳೀಕರಣದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಮೂಲಕ ಕೃಷಿಕರಿಗೆ ಸಾಲವನ್ನು ಒದಗಿಸಲಾಗಿದೆ. ಆದರೆ, ಈ ಸಾಲಿನಲ್ಲಿ ಸಿಂಗಲ್ ಆರ್‌ಟಿಸಿಯನ್ನು ಕಡ್ಡಾಯಗೊಳಿಸಿರುವುದರಿಂದ ಸಹಕಾರ ಸಂಘದಿಂದ ಸಾಲ ವಿತರಣೆಗೆ ತೊಡಕನ್ನು ಸೃಷ್ಟಿಸಿದೆ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಆಸ್ತಿಗಳು ಜಂಟಿ ಖಾತೆಯಲ್ಲೇ ಇವೆ. ಒಂದು ಜಾಗದ ಆರ್‌ಟಿಸಿಯಲ್ಲಿ ಕುಟುಂಬದ ಹಲವರ ಹೆಸರು ಇದೆ. ಪ್ರಸ್ತುತ ಇಂತಹ ಆರ್‌ಟಿಸಿ ಹೊಂದಿರುವವರು ತಮ್ಮೊಬ್ಬರದ್ದೇ ಹೆಸರಿನ ಆರ್‌ಟಿಸಿಯನ್ನು ಮಾಡಿಕೊಂಡಲ್ಲಿ ಮಾತ್ರ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ಆದರೆ, ಈ ಕೆಲಸ ಅಷ್ಟು ಸುಲಭವಾಗಿ ಆಗುತ್ತಿಲ್ಲ ಎಂದು ಅವರು ತಿಳಿಸಿದರು.
ಸರ್ಕಾರದ ಗಮನಕ್ಕೆ ತಂದು ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಸಾಲ ವಿತರಿಸಲು ಇರುವ ಷರತ್ತುಗಳನ್ನು ಒಂದು ವರ್ಷದ ಮಟ್ಟಿಗೆ ಸಡಿಲಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪೇರಿಯನ ಪೂಣಚ್ಚ, ನಿರ್ದೇಶಕರಾದ ಬಿ.ಎಂ.ಕಾಶಿ, ಅಕ್ಕಾರಿ ದಯಾನಂದ, ಕೊಂಗೇಟಿರ ವಾಣಿ ಕಾಳಪ್ಪ, ಮುಳ್ಳಂಡ ಮಾಯಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.