ADVERTISEMENT

ರಂಗಭೂಮಿಗೆ ಅಪ್ಪಚ್ಚಕವಿ ಕೊಡುಗೆ ಅಪಾರ

ಕನಕದಾಸರು– ಅಪ್ಪಚ್ಚಕವಿ ತೌಲನಿಕ ಅಧ್ಯಯನ ವಿಚಾರ ಸಂಕಿರಣದಲ್ಲಿ ಕಾ.ತ.ಚಿಕ್ಕಣ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 17:16 IST
Last Updated 4 ಜನವರಿ 2019, 17:16 IST
ವಿರಾಜಪೇಟೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವನ್ನು ಕಾ.ತ.ಚಿಕ್ಕಣ್ಣ ಉದ್ಘಾಟಿಸಿದರು
ವಿರಾಜಪೇಟೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವನ್ನು ಕಾ.ತ.ಚಿಕ್ಕಣ್ಣ ಉದ್ಘಾಟಿಸಿದರು   

ವಿರಾಜಪೇಟೆ: ಕನ್ನಡ ರಂಗಭೂಮಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲಘಟ್ಟಕ್ಕಿಂತ ಹಿಂದೆಯೇ ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚ ಕವಿ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದರು ಎಂದು ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಹೇಳಿದರು.

ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಶುಕ್ರವಾರ ನಡೆದ ‘ಕನಕದಾಸರು ಮತ್ತು ಅಪ್ಪಚ್ಚಕವಿ ತೌಲನಿಕ ಅಧ್ಯಯನ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಪರಿಸ್ಥಿತಿಯಲ್ಲಿ ಯೇಸು, ಅಲ್ಲಾ, ಹರಿ ಎಲ್ಲಾ ಒಂದೇ ಎಂದು ತೋರಿಸಲು ಚಿಂತನಾ ತತ್ವಗಳನ್ನು ಸಮಾಜದ ಮುಂದಿಡಬೇಕು. ಅಸಮಾನತೆಯ ಸಮಾಜದಲ್ಲಿ ಹುಟ್ಟಿದ ಕನಕದಾಸರು ಸಂಗೀತ, ಸಾಹಿತ್ಯ, ಕೀರ್ತನೆಗಳ ಮೂಲಕ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದ್ದರು. ನಾಟಕಕಾರ, ಕವಿಯಾಗಿದ್ದ ಅಪ್ಪಚ್ಚ ಕವಿ ಕೊಡವ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕೊಡವ ಸಾಹಿತ್ಯ ಇತರ ಯಾವುದೇ ಸಾಹಿತ್ಯಕ್ಕೂ ಕಡಿಮೆ ಇಲ್ಲ. ಆದರೆ, ನಮಗೆ ಅದರ ಮಹತ್ವದ ಬಗ್ಗೆ ಅರಿವಿಲ್ಲ’ ಎಂದರು.

ADVERTISEMENT

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಮಾತನಾಡಿ, ‘15–16ನೇ ಶತಮಾನದಲ್ಲಿದ್ದ ಕನಕದಾಸರು ಮತ್ತು 150 ವರ್ಷದ ಹಿಂದಿನ ಅಪ್ಪಚ್ಚ ಕವಿಯ ಸಾಮ್ಯತೆ ಸೋಜಿಗವಾದದ್ದು. ಕನಕದಾಸರು ವಿಜಯನಗರದ ದಂಡನಾಯಕನಾಗಿ ಸಾವು– ನೋವುಗಳನ್ನು ಕಂಡು ದಾಸರಾದರು. ಅಪ್ಪಚ್ಚಕವಿ ಮುಜರಾಯಿ ಇಲಾಖೆಯ ನೌಕರರಾಗಿ ಕೊಡವ ಮತ್ತು ಕನ್ನಡ ಭಾಷೆಯಲ್ಲಿ ಕೃತಿಗಳನ್ನು ರಚಿಸಿದರು. ಅವರ ಕೊನೆಗಾಲದಲ್ಲಿ ಮನೆಗೆ ಯಾರೋ ಬೆಂಕಿ ಹಚ್ಚಿದ್ದರು’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಕೆ.ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದಲ್ಲಿ ಮಡಿಕೇರಿಯ ಪ್ರೊ.ಸಿದ್ದರಾಜು, ಡಾ.ಎಂ.ಕೆ.ಮಾಧವ, ನಾಗೇಶ್ ಕಾಲೂರು, ಡಾ.ಎಂ.ಪಿ.ರೇಖಾ ವಿಚಾರ ಮಂಡಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಿ.ಕೆ.ಉಷಾ, ಅಮ್ಮುಣಿಚಂಡ ಪ್ರವೀಣ್, ಸ್ಮಿತಾ ಅಮೃತರಾಜ್, ಚೇಂದಿರ ನಿರ್ಮಲಾ ಬೋಪಣ್ಣ, ಡಾ.ಕಾವೇರಿ ಪ್ರಕಾಶ್, ಕಿಗ್ಗಾಲು ಗಿರೀಶ್, ಡಾ.ಡಿ.ಕೆ.ಸರಸ್ವತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.