ADVERTISEMENT

‘ಕೊಡವ ಸ್ವಾತಂತ್ರ್ಯ ಯೋಧರ ಕಡೆಗಣನೆ’– ಜಿಲ್ಲೆಯಾದ್ಯಂತ ಆಕ್ರೋಶ

ಜಿಲ್ಲೆಯಾದ್ಯಂತ ಆಕ್ರೋಶ l ರಾಜ್ಯ ಸರ್ಕಾರದ ಕ್ಷಮೆಗೆ ಆಗ್ರಹ l ಪ್ರತಿಭಟನೆಗೂ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 3:08 IST
Last Updated 18 ಆಗಸ್ಟ್ 2022, 3:08 IST

ಗೋಣಿಕೊಪ್ಪಲು: ‘ರಾಜ್ಯ ಸರ್ಕಾರ ಸ್ವಾತಂತ್ರ್ಯ ಅಮೃತ ಮಹೊತ್ಸ ವದ ಅಂಗವಾಗಿ ನೀಡಿದ ಜಾಹೀರಾತಿ ನಲ್ಲಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರ ರನ್ನು ಕಡೆಗಣಿಸಿದೆ’ ಎಂಬ ವಿಚಾರ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

‘ಇದು ಕೊಡಗಿನ ಜನತೆಗೆ ಉದ್ದೇಶ ಪೂರ್ವಕವಾಗಿ ಮಾಡಿದ ಅಪಮಾನವಾಗಿದೆ. ಈ ಮೂಲಕ ತಮ್ಮ ಅವಿವೇಕತನವನ್ನು ಇಲ್ಲಿನ ಜನಪ್ರತಿನಿಧಿ ಗಳು ಹಾಗೂ ಮುಖ್ಯಮಂತ್ರಿಗಳು ತೋರ್ಪಡಿಸಿದ್ದಾರೆ’ ಎಂದು ‘ಯುಕೊ’ (ಯುನೈಟೆಡ್ ಆರ್ಗನೈಜೇಸಷನ್ ಆಫ್ ಕೊಡವ) ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

‘ಸ್ವಾತಂತ್ರ್ಯ ಚಳವಳಿಗೆ ಕೊಡಗಿನ ಕೊಡುಗೆ ಮಹತ್ವದ್ದಾಗಿದೆ. ದೇಶಪ್ರೇಮಿ ಕೊಡಗಿನ ಯಾವುದೇ ಹೋರಾಟಗಾರರ ಹೆಸರನ್ನು ಹೆಸರಿಸಿಲ್ಲ. ಈ ಬಗ್ಗೆ ಇಲ್ಲಿನ ಮೂವರು ಶಾಸಕರು ಯಾವುದೇ ಪ್ರತಿಕ್ರಿಯೆ ತೋರದೆ ಜಾಣಕುರುಡು ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಕ್ಷಮೆಯಾಚಿಸಬೇಕು ಹಾಗೂ ಜಾಹೀರಾತನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕೊಡಗು ಒಂದು ಅಳಿಸಲಾಗದ ಅಧ್ಯಾಯ ಎಂಬುದನ್ನು ಈ ರಾಜ್ಯ ಸರ್ಕಾರ ಮರೆತಂತಿದೆ. ಇದು ಅವರ ರೋಗಗ್ರಸ್ಥ ಮನಸ್ಥಿತಿಗೆ ಮತ್ತು ಹೊಣೆಗೇಡಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘‘ಕೊಡಗಿನ ಗಾಂಧಿ’ ಎಂದೇ ಪರಿಚಿತರಾದ ಪಂದ್ಯಂಡ ಬೆಳ್ಯಪ್ಪ ಹಾಗೂ ಸೀತಾ ಬೆಳ್ಯಪ್ಪ ದಂಪತಿ, ‘ಹುಬ್ಬಳ್ಳಿ ಹುಲಿ’ ಎಂದೇ ಖ್ಯಾತರಾಗಿದ್ದ ಚೆಕ್ಕೇರ ಮೊಣ್ಣಯ್ಯ, ಮಲ್ಲೇಂಗಡ ಚಂಗಪ್ಪ, ಕೊಳ್ಳಿಮಾಡ ಕರುಂಬಯ್ಯ ಮುಂತಾದವರ ನಾಯಕತ್ವದಲ್ಲಿ ಇಲ್ಲಿನ, ಅಮ್ಮಕೊಡವ, ಹೆಗ್ಗಡೆ, ಕೋಯವ, ಐರಿ ಜನಾಂಗದವರು ಸೇರಿದಂತೆ ಮುಸ್ಲಿಮರು, ಎರವರು ಕುಡಿಯರಾದಿಯಾಗಿ ಇಲ್ಲಿನ ಮೂಲ ನಿವಾಸಿಗಳು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದರು’ ಎಂದು ಅವರು ಸ್ಮರಿಸಿದರು.

‘ಕೊಡಗಿನ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೇ ಬದಲಿಸಿ, ಕಳೆದ ಐದಾರು ವರ್ಷಗಳಿಂದ ಪೂರ್ವಾಗ್ರಹ ಪೀಡಿತರಾಗಿ ದಿಢೀರನೆ ಕೊಡವ ಮುಖಂಡರ ಜಾಗಕ್ಕೆ ಅನಾಮಧೇಯರ ಹೆಸರನ್ನು ತಂದು ತಮ್ಮ ವಸಾಹತು ಸ್ಥಾಪಿಸಲು ಹೊರಟಿರುವ ಒಂದು ವರ್ಗಕ್ಕೆ, ಇಲ್ಲಿನ ಜನಪ್ರತಿನಿಧಿಗಳೂ ಸಹ ಬೆಂಬಲ ನೀಡುತ್ತಿರುವುದನ್ನು ಸಹಿಸಲಾಗದು’ ಎಂದರು.

‘ಸರ್ಕಾರದ ಈ ಅವಿವೇಕಿತನ, ಲಜ್ಜೆಗೇಡಿತನದ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳ ಜಾಣ ಮೌನದ ಹಿಂದಿನ ಮರ್ಮವನ್ನು ಕೊಡವರು ಅರ್ಥಮಾಡಿಕೊಳ್ಳದಿದ್ದರೆ ಕೊಡವರನ್ನು ಇತಿಹಾಸದ ಪುಟಗಳಿಂದ ಶಾಶ್ವತವಾಗಿ ಅಳಿಸಿಹಾಕುವ ದಿನಗಳು ದೂರವಿಲ್ಲ. ರಾಜಕೀಯ ಬದಿಗಿಟ್ಟು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ’ ಎಂದರು.

ಡಾಟಿ ಪೂವಯ್ಯ ಅಸಮಾಧಾನ

ಮಡಿಕೇರಿ: ನಗರದಲ್ಲಿ ಬುಧವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಹಾಗೂ ತಿರಿ ಬೊಳ್ಚ ಕೊಡವ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಸಹ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

‘ಕೊಡಗಿನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರೂ, ಅವರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಹೀರಾತಿನಲ್ಲಿ ಉಲ್ಲೇಖವಿಲ್ಲ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಸಾಹಿತ್ಯ ರಚನೆಯಾಗದೆ ಇರುವುದೇ ಆಗಿದೆ’ ಎಂದು ಅವರು ಹೇಳಿದರು.

22ರಂದು ಉಪವಾಸ ಸತ್ಯಾಗ್ರಹ

ಸರ್ಕಾರದ ವಿರುದ್ಧ ಆ. 22 ರಂದು ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ‘ಯುಕೊ’ (ಯುನೈಟೆಡ್ ಆರ್ಗನೈಜೇಸಷನ್ ಆಫ್ ಕೊಡವ) ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದರು.

ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟವನ್ನು ರೂಪಿಸಲಾಗುವುದು. ಅವಶ್ಯಕತೆ ಬಂದರೆ ಕಾನೂನು ಹೋರಾಟವನ್ನೂ ಸಹ ನಡೆಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.