ADVERTISEMENT

ಗ್ರಾಮ ಪಂಚಾಯಿತಿ ಮುಂದೆಯೇ ಕಸದ ರಾಶಿ!

ಕಸ ಹಾಕಲು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಗೆ ಜಾಗವೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 13:19 IST
Last Updated 1 ಅಕ್ಟೋಬರ್ 2023, 13:19 IST
ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಆವರಣದಲ್ಲಿ ತುಂಬಿರುವ ಕಸದ ರಾಶಿ
ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಆವರಣದಲ್ಲಿ ತುಂಬಿರುವ ಕಸದ ರಾಶಿ   

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ನಗರಿಯಾಗಿ ಗೋಣಿಕೊಪ್ಪಲು ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಆದರೆ, ಇದೇ ವೇಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಇದುವರೆಗೂ ನಡೆದಿಲ್ಲ. ಇಲ್ಲಿನ ಗ್ರಾಮ ಪಂಚಾಯಿತಿ ಆವರಣವನ್ನೊಮ್ಮೆ ನೋಡಿದರೆ ಈ ಮಾತು ನಿಜ ಎಂಬುದು ತಿಳಿಯುತ್ತದೆ.

ಗ್ರಾಮ ಪಂಚಾಯಿತಿಯ ಮುಂದೆ ಉದ್ಯಾನ ಇರಬೇಕಾದ ಕಡೆ ತ್ಯಾಜ್ಯದ ರಾಶಿಯೇ ಇದೆ. ಪಟ್ಟಣದಲ್ಲಿ ಸಂಗ್ರಹಿಸಿದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದ ಪಂಚಾಯಿತಿ ತನ್ನ ಕಚೇರಿಯ ಮುಂದೆಯೇ ಸುರಿದುಕೊಂಡು, ವ್ಯವಸ್ಥೆಗೆ ಕನ್ನಡಿ ಹಿಡಿದಿದೆ.

ಬೆಳಿಗ್ಗೆ ನಿತ್ಯವೂ ನಿಯಮಿತವಾಗಿ ಕಸವನ್ನು ಮನೆಮನೆಯಿಂದ ಗ್ರಾಮ ಪಂಚಾಯಿತಿ ಸಂಗ್ರಹಿಸುತ್ತಿದೆ. ಆದರೆ, ಇದನ್ನು ಬೇರೆಲ್ಲೂ ಸುರಿಯದೇ ತನ್ನ ಚಿಕ್ಕ ಆವರಣದಲ್ಲಿಯೇ ಬೆಟ್ಟದಂತೆ ಗುಡ್ಡೆ ಹಾಕಿಕೊಂಡಿದೆ. ಇದು ನಗರದ ಸೌಂದರ್ಯಕ್ಕೆ ಕುಂದು ಉಂಟು ಮಾಡಿರುವುದು ಮಾತ್ರವಲ್ಲ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಭೀತಿಯನ್ನೂ ಸೃಷ್ಟಿಸಿದೆ.

ADVERTISEMENT

ಕೊಳೆತ ತ್ಯಾಜ್ಯದಿಂದ ನೊಣ, ಸೊಳ್ಳೆಗಳು ವಿಪರೀತ ಹೆಚ್ಚಿವೆ. ಎಲ್ಲ ಗ್ರಾಮ ಪಂಚಾಯಿತಿಗಳು ತಮ್ಮ ಕಚೇರಿ ಮುಂದೆ ಸುಂದರ ಉದ್ಯಾನ ನಿರ್ಮಿಸಿದ್ದರೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಕಸದ ರಾಶಿ ಹಾಕಿಕೊಂಡಿದೆ ಎಂದು ಸಾರ್ವಜನಿಕರು ಅಣಕವಾಡುತ್ತಿದ್ದಾರೆ.

ಹೆಚ್ಚಾದ ಕಸವನ್ನು ರಾತ್ರಿ ವೇಳೆ ಪಕ್ಕದಲ್ಲೇ ಹರಿಯುತ್ತಿರುವ ಕೀರೆಹೊಳೆ ದಡಕ್ಕೂ ತುಂಬಿಸುತ್ತಿದ್ದಾರೆ ಎಂದು ಕೆಲವು ಸಾರ್ವಜನಿಕರು ದೂರುತ್ತಾರೆ. ಇದಕ್ಕೆಲ್ಲ ಕಾರಣ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಗೆ ಕಸ ಹಾಕಲು ಎದುರಾಗಿರುವ ಜಾಗದ ಕೊರತೆ.

‘ಗ್ರಾಮ ಪಂಚಾಯಿತಿ ತನಗಾಗಿ ಸರ್ಕಾರಿ ಭೂಮಿಯನ್ನು ಉಳಿಸಿಕೊಳ್ಳದೆ ಸಂಘ ಸಂಸ್ಥೆಗಳಿಗೆಲ್ಲ ನೀಡಿದೆ. ಒಂದು ವೇಳೆ ಈ ಜಾಗಗಳನ್ನು ಉಳಿಸಿಕೊಂಡಿದ್ದರೆ ಕಸ ವಿಲೇವಾರಿಗೆ ಸಮಸ್ಯೆ ಕಾಡುತ್ತಿರಲಿಲ್ಲ. ಇದೀಗ ಗ್ರಾಮ ಪಂಚಾಯಿತಿ ಆವರಣವನ್ನೇ ಕಸ ವಿಲೇವಾರಿ ಘಟಕ ಮಾಡಿಕೊಂಡಿರುವುದು ನಾಚಿಕೆಗೇಡಿನ ವಿಷಯ’ ಎಂದು ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ಸದಸ್ಯ ಫಿಲಿಪೋಸ ಮ್ಯಾಥ್ಯು ಅಸಮಾಧಾನ ವ್ಯಕ್ತಪಡಿಸಿದರು.

ಜಾಗ ನಿಗದಿಪಡಿಸಲಾಗಿತ್ತು

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 8 ವಾರ್ಡ್‌ಗಳು, 12 ಬಡಾವಣೆಗಳಿವೆ. 8,280 ಜನಸಂಖ್ಯೆ ಇದೆ. ಇಲ್ಲಿ ನಿತ್ಯ ಮಾರುಕಟ್ಟೆ ಜತೆಗೆ ಪ್ರತಿ ಭಾನುವಾರ ಸಂತೆಯ ವಹಿವಾಟೂ ನಡೆಯುತ್ತದೆ. ಪ್ರತಿ ದಿನ 3ರಿಂದ 4 ಟ್ರಾಕ್ಟರ್‌ನಷ್ಟು ಕಸ ಸಂಗ್ರಹವಾಗುತ್ತದೆ. 15 ವರ್ಷಗಳ ಹಿಂದೆ ಪೊನ್ನಂಪೇಟೆ ಹಳ್ಳಿಗಟ್ಟು ಬಳಿಯ ಸೀತಾಕಾಲೋನಿಯಲ್ಲಿ 2 ಎಕರೆ ಜಾಗ ನಿಗದಿಪಡಿಸಿ ಅಲ್ಲಿಗೆ ತ್ಯಾಜ್ಯ ಸುರಿಯಲು ವ್ಯವಸ್ಥೆ ಮಾಡಲಾಗಿತ್ತು. ಅಂದಿನ ಶಾಸಕ ಕೆ.ಜಿ.ಬೋಪಯ್ಯ ಗೋಣಿಕೊಪ್ಪಲು ಜತೆಗೆ ಪೊನ್ನಂಪೇಟೆ, ಅರುವತ್ತೊಕ್ಕಲು ಗ್ರಾಮ ಪಂಚಾಯಿತಿಗಳಲ್ಲೂ ಕಾಡುತ್ತಿದ್ದ ತ್ಯಾಜ್ಯ ವಿಲೇವಾರಿ ಸಮಸ್ಯೆ ನೀಗಿಸಲು ಒಂದೇ ಕಡೆ ಕಸ ವಿಲೇವಾರಿ ಘಟಕ ನಿರ್ಮಿಸಿಕೊಟ್ಟಿದ್ದರು. ಆದರೆ ತ್ಯಾಜ್ಯ ಸುರಿಯುವುದರಿಂದ ಅಕ್ಕಪಕ್ಕದ ಜನತೆಗೆ ತೊಂದರೆ ಯಾಗಲಿದೆ. ಕುಡಿಯುವ ನೀರಿನ ಜಲಮೂಲವೂ ಕೆಡಲಿದೆ ಎಂದು ಹೇಳಿ ಸೀತಾಕಾಲೋನಿ ಮತ್ತು ಸುಮುತ್ತಲಿನ ಗ್ರಾಮಗಳ ಜನತೆ ತೀವ್ರ ಪ್ರತಿರೋಧ ಒಡ್ಡಿದರು.
ಇದರಿಂದ ಒಂದೆರಡು ತಿಂಗಳು ಗೋಣಿಕೊಪ್ಪಲಿನ ತ್ಯಾಜ್ಯ ಸುರಿದು ಬಳಿಕ ನಿಲ್ಲಿಸಲಾಯಿತು. ಅಲ್ಲಿಂದ ಗ್ರಾಮ ಪಂಚಾಯಿತಿ ಆವರಣದಲ್ಲಿಯೇ ಕಸ ಸುರಿದು ವಿಂಗಡಿಸಿ ಒಣ ಕಸವನ್ನು ಮೈಸೂರಿಗೆ ಕಳುಹಿಸಿ ಕೊಡಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ವ್ಯವಸ್ಥೆಯೂ ಕೂಡ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ, ಕಸದ ರಾಶಿ ಬೆಟ್ಟದಂತೆ ಬೆಳೆದು ನಿಂತಿದೆ. ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯಾವುದೇ ಭರವಸೆಗಳೂ ಈಡೇರುತ್ತಿಲ್ಲ.

(ಸರಣಿ ಮುಗಿಯಿತು)

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಆವರಣದಲ್ಲಿ ತುಂಬಿರುವ ಕಸದ ರಾಶಿ
ಗೋಣಿಕೊಪ್ಪಲು ಮಾರುಕಟ್ಟೆ ಬಳಿಯ ಕೀರೆಹೊಳೆ ಸೇತುವೆ ಕೆಳಗೆ ತುಂಬಿಸಿರುವ ತ್ಯಾಜ್ಯ.
ತಿಮ್ಮಯ್ಯ ಪಿಡಿಒ.
ಶಾಸಕ ಪೊನ್ನಣ್ಣ
ಒಣಕಸ ಹಸಿ ಕಸ ವಿಂಗಡಿಸಿ ಒಣಕಸವನ್ನು ಮರು ಉತ್ಪಾದನೆಗೆ ಮೈಸೂರಿಗೆ ಕಳುಹಿಸಿ ಕೊಡಲಾಗುತ್ತಿದೆ. ಹಸಿ ಕಸವನ್ನು ಗೋಣಿಕೊಪ್ಪಲಿನ ಖಾಸಗಿಯವರ ತೋಟಕ್ಕೆ ಹಾಕಲಾಗುತ್ತಿದೆ. ಕಸ ವಿಲೇವಾರಿಗೆ ಜಾಗದ ಸಮಸ್ಯೆ ಕಾಡುತ್ತಿದೆ. ಇದರ ಬಗ್ಗೆ ಶಾಸಕರೊಂದಿಗೆ ಮಾತುಕತೆ ನಡೆಸಲಾಗುವುದು.
- ತಿಮ್ಮಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.
ಗೋಣಿಕೊಪ್ಪಲು ಕಸದ ಸಮಸ್ಯೆ ನೆನ್ನೆ ಮೊನ್ನೆಯದಲ್ಲ. 20 ವರ್ಷಗಳಿಂದಲೂ ಈ ಸಮಸ್ಯೆ ಕಾಡುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಪಿಡಿಒ ಅವರೊಂದಿಗೆ ಚರ್ಚಿಸಿ ಕಸ ವಿಲೇವಾರಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಎ.ಎಸ್.ಪೊನ್ನಣ್ಣ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.