ADVERTISEMENT

ನೆರೆ ಸಂತ್ರಸ್ತರಿಂದ ಅಹವಾಲು ಸಲ್ಲಿಕೆ

ಮೂರು ದಿನಗಳ ಕಾಲ ನಡೆಯುವ ಅದಾಲತ್‌

​ಪ್ರಜಾವಾಣಿ ವಾರ್ತೆ
Published 27 ಮೇ 2019, 13:02 IST
Last Updated 27 ಮೇ 2019, 13:02 IST
ಮಡಿಕೇರಿಯಲ್ಲಿ ನಡೆದ ಸಂತ್ರಸ್ತರ ಪರಿಹಾರ ಅದಾಲತ್‌ನಲ್ಲಿ ಪಾಲ್ಗೊಂಡಿದ್ದ ಸಂತ್ರಸ್ತರು
ಮಡಿಕೇರಿಯಲ್ಲಿ ನಡೆದ ಸಂತ್ರಸ್ತರ ಪರಿಹಾರ ಅದಾಲತ್‌ನಲ್ಲಿ ಪಾಲ್ಗೊಂಡಿದ್ದ ಸಂತ್ರಸ್ತರು   

ಮಡಿಕೇರಿ: ಪ್ರಕೃತಿ ವಿಕೋಪದಿಂದ ಉಂಟಾದ ಮನೆ ಹಾಗೂ ಬೆಳೆ ಹಾನಿ ಸಂತ್ರಸ್ತರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಪರಿಹಾರ ಅದಾಲತ್‌ನಲ್ಲಿ ನೂರಾರು ಸಂತ್ರಸ್ತರು ಪಾಲ್ಗೊಂಡು ತಮ್ಮ ಅಹವಾಲು ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದ 2ನೇ ಮಹಡಿಯ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅದಾಲತ್‌ನಲ್ಲಿ ನೂರಾರು ಸಂತ್ರಸ್ತರು ತಮ್ಮ ಹೆಸರು ನೋಂದಾಯಿಸಿಕೊಂಡು ಪರಿಹಾರದ ಸಮಸ್ಯೆ ನಿವಾರಣೆ ಮಾಡಿಕೊಂಡರು.

ಜಾನುವಾರು, ಬೆಳೆ, ಮನೆ ಹಾನಿಯಾದವರಿಗೆ ಜಿಲ್ಲಾಡಳಿತ ಶೇ 90 ಪರಿಹಾರ ವಿತರಿಸಿದೆ. ಆದರೂ, ಸಹ ಯಾರಿಗಾದರೂ ಪರಿಹಾರ ನೀಡಲು ಬಿಟ್ಟು ಹೋಗಿದ್ದಲ್ಲಿ ಪರಿಹಾರ ಭರಿಸುವಂತಾಗಲು ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ADVERTISEMENT

ಪರಿಹಾರ ವಿತರಣೆಯ ಎಲ್ಲ ಮಾಹಿತಿಯನ್ನೂ http://parihara.karnataka.gov.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಂತ್ರಸ್ತರಿಗೆ ಪರಿಹಾರ ತಲುಪದಿದ್ದಲ್ಲಿ ಅಂತಹ ಸಂತ್ರಸ್ತರು ಮೇ 29ರವರೆಗೆ ನಡೆಯುವ ಪರಿಹಾರ ಅದಾಲತ್‌ನಲ್ಲಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಮನವಿ ಮಾಡಿದರು.

ಪ್ರಕೃತಿ ವಿಕೋಪದಿಂದ ಅನೇಕ ಮನೆಗಳ ಹಾನಿ ಇನ್ನು ಗದ್ದೆ, ತೋಟಗಳು ಮಣ್ಣು ತುಂಬಿಕೊಂಡಿದೆ. ಕೆಲವು ಭಾಗಗಳಲ್ಲಿ ಅತಿಯಾದ ಮಳೆಯಿಂದ ಫಸಲು ಕೊಳೆತು ಹೋಗಿ ಅಪಾರ ಬೆಳೆಹಾನಿ ಸಂಭವಿಸಿತ್ತು. ಸರಿಯಾದ ದಾಖಲಾತಿಗಳನ್ನು ನೀಡಿ ಅದಾಲತ್‌ನಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಮನೆಹಾನಿ ಪ್ರಕರಣಗಳಲ್ಲಿ ಪೂರ್ಣ, ತೀವ್ರ ಮನೆಹಾನಿ ಸಂತ್ರಸ್ತರನ್ನು ಮೊದಲ ಪಟ್ಟಿಯಲ್ಲಿ ಮತ್ತು ವಾಸಿಸಲು ಯೋಗ್ಯವಲ್ಲದ ಪ್ರದೇಶದಲ್ಲಿರುವ ಹಾಗೂ ಅಪಾಯ ಪ್ರದೇಶದಲ್ಲಿರುವ ಮನೆಗಳ ಸಂತ್ರಸ್ತರನ್ನು 2ನೇ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್‌ ತಿಳಿಸಿದರು.

ನವೆಂಬರ್ 2018ರಿಂದ ಬಾಡಿಗೆ ಹಣವನ್ನು ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರ ಉಪಸ್ಥಿತಿಯಲ್ಲಿ ಪರಿಹಾರ ಅದಾಲತ್ ನಡೆಯಿತು. ತಹಶೀಲ್ದಾರ್ ನಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.