ADVERTISEMENT

ಅಭಿವೃದ್ಧಿ ಹರಿಕಾರ ರಾಜೀವ್‌ ಗಾಂಧಿ: ಕೆ.ಕೆ. ಮಂಜುನಾಥ್‌

28ನೇ ಪುಣ್ಯ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 21 ಮೇ 2019, 13:54 IST
Last Updated 21 ಮೇ 2019, 13:54 IST
ಮಡಿಕೇರಿಯ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ರಾಜೀವ್ ಗಾಂಧಿ 28ನೇ ಪುಣ್ಯ ಸ್ಮರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು 
ಮಡಿಕೇರಿಯ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ರಾಜೀವ್ ಗಾಂಧಿ 28ನೇ ಪುಣ್ಯ ಸ್ಮರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು    

ಮಡಿಕೇರಿ: ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಅಭಿವೃದ್ಧಿ ಪಡಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದ ಮಾಜಿ ಪ್ರಧಾನಿ ದಿ. ರಾಜೀವ್‌ ಗಾಂಧಿ ಅವರ ಆದರ್ಶ ಚಿಂತನೆಗಳನ್ನು ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಕರೆ ನೀಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ರಾಜೀವ್ ಗಾಂಧಿ ಅವರ 28ನೇ ಪುಣ್ಯ ಸ್ಮರಣೆಯಲ್ಲಿ ಅವರು ಮಾತನಾಡಿದರು.

‘ತಮ್ಮ 40ನೇ ವಯಸ್ಸಿನಲ್ಲಿ ದೇಶದ ಪ್ರಧಾನಿ ಆಗುವ ಮೂಲಕ ದೇಶದಲ್ಲಿ ಕ್ರಾಂತಿ ಮಾಡಿದ ರಾಜಕಾರಣಿ ರಾಜೀವ್‌ ಗಾಂಧಿ. ಟೆಲಿ ಕಮ್ಯುನಿಕೇಷನ್, ಕಂಪ್ಯೂಟರ್ ಕ್ರಾಂತಿ ಹಾಗೂ ಶಿಕ್ಷಣದ ಕ್ರಾಂತಿಯ ಜನಕ ರಾಜೀವ್ ಗಾಂಧಿ ಆಗಿದ್ದು ಪಂಚಾಯತ್ ರಾಜ್ ಯೋಜನೆಯನ್ನು ಜಾರಿಗೊಳಿಸಿದ ಮಹಾನ್ ವ್ಯಕ್ತಿತ್ವ ಅವರದ್ದು. ಅವರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಹೇಳಿದರು.

ADVERTISEMENT

ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಲು 21 ವರ್ಷ ನಿಗದಿಯಾಗಿದ್ದನ್ನು 18 ವರ್ಷಕ್ಕೆ ಇಳಿಸಿದ ಕೀರ್ತಿ ರಾಜೀವ್ ಗಾಂಧಿಗೆ ಸಲ್ಲುತ್ತದೆ ಎಂದು ಹೇಳಿದರು.

ಬಿಜೆಪಿಯವರು ಈ ದೇಶಕ್ಕಾಗಿ ಯಾವುದೇ ಯೋಜನೆಯನ್ನು ಜಾರಿಗೊಳಿಸಿಲ್ಲ. 5 ವರ್ಷದ ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಕ್ರಾಂತಿಯನ್ನು ಮಾಡಿಲ್ಲದಿದ್ದರೂ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ನಮ್ಮ ದೇಶದ ದುರಂತ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಮಾತನಾಡಿ, ಗಾಂಧಿ ಕುಟುಂಬ ದೇಶಕ್ಕಾಗಿ ಏನು ನೀಡಿದೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಆದರೆ, ಗಾಂಧಿ ಕುಟುಂಬ ನೀಡಿದ ತ್ಯಾಗ ನಾವು ಸದಾ ಸ್ಮರಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ರಾಜೀವ್ ಗಾಂಧಿ ಅವರು ಶ್ರೀಲಂಕಾದಲ್ಲಿ ಶಾಂತಿ ಸ್ಥಾಪಿಸಲು ಮುಂದಾದ ಸಂದರ್ಭದಲ್ಲಿ ಉಗ್ರರಿಂದ ಹತ್ಯೆ‌ಯಾಗಿದ್ದು, ದೇಶಕ್ಕೆ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜೀವ್ ಪ್ರಧಾನಿ ಆಗಿದ್ದಾಗ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಮೊದಲು ಜಾರಿಗೊಳಿಸಿದರು. ತಮ್ಮ ಅಲ್ಪಾವಧಿ ಆಡಳಿತಾವಧಿಯಲ್ಲಿ ಹೆಚ್ಚು ಸಾಧನೆ ಮಾಡಿರುವುದು ಮಾತ್ರವಲ್ಲದೇ ಕಾಂಗ್ರೆಸ್ ಅನ್ನು ಉಳಿಸಿ ಸಂಘಟಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭ ಗಣ್ಯರು ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಮಾಡಲಾಯಿತು.

ಕಾಂಗ್ರೆಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಸುರೇಶ್, ಕೆಪಿಸಿಸಿ ಸದಸ್ಯ ಹುಸ್ಮಾನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್, ಮಡಿಕೇರಿ ನಗರ ಅಧ್ಯಕ್ಷ ಅಬ್ದುಲ್ ರಜಾಕ್, ಜಿಲ್ಲಾ ವಕ್ತಾರ ಸುರೇಶ್, ಮುಖಂಡ ಚುಮ್ಮಿ ದೇವಯ್ಯ, ಮಹಿಳಾ ಘಟಕದ ನಗರ ಅಧ್ಯಕ್ಷೆ ಫ್ಯಾನ್ಸಿ ಮುತ್ತಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.