ADVERTISEMENT

ರುದ್ರಭೂಮಿಯಲ್ಲಿ ಬೃಹತ್ ಗುಂಡಿ ನಿರ್ಮಾಣ: ಖಂಡನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 14:39 IST
Last Updated 4 ನವೆಂಬರ್ 2019, 14:39 IST
ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಸೋಮವಾರ ನಾಪೋಕ್ಲುವಿನ ಬೇತು ಗ್ರಾಮದ ಹಿಂದೂ ರುದ್ರಭೂಮಿಗೆ ಭೇಟಿ ನೀಡಿದರು
ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಸೋಮವಾರ ನಾಪೋಕ್ಲುವಿನ ಬೇತು ಗ್ರಾಮದ ಹಿಂದೂ ರುದ್ರಭೂಮಿಗೆ ಭೇಟಿ ನೀಡಿದರು   

ನಾಪೋಕ್ಲು: ಸ್ಥಳೀಯ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿಗಾಗಿ ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಶವಗಳನ್ನು ಹೂತಿದ್ದ ಸ್ಥಳದಲ್ಲಿ ಜೆಸಿಬಿ ಸಹಾಯದಿಂದ ಬೃಹತ್ ಗುಂಡಿಯನ್ನು ನಿರ್ಮಾಣ ಮಾಡಿರುವುದನ್ನು ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗ ದಳ ಸೇರಿದಂತೆ ಹಿಂದೂ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ ಹಾಗೂ ಭಜರಂಗದಳದ ಜಿಲ್ಲಾ ಸಂಯೋಜಕ ಚೇತನ್ ಸೇರಿದಂತೆ ಮತ್ತಿತರ ಹಿಂದೂಪರ ಸಂಘಟನೆಗಳ ಪ್ರಮುಖರು, ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ ಮಾತನಾಡಿ ’ನಾಪೋಕ್ಲುವಿನ ಬೇತು ಗ್ರಾಮದ ರುದ್ರಭೂಮಿಯನ್ನು ಅತಿಕ್ರಮಣ ಮಾಡಿ, ಯಾರ ಗಮನಕ್ಕೂ ತಾರದೆ, ಟೆಂಡರ್ ಸಹ ಕರೆಯದೆ, ಅಲ್ಲಿದ್ದ ಮರಗಳನ್ನು ಕಡಿದು ಸಾಗಿಸಲಾಗಿದೆ. ಅಲ್ಲದೇ, ರುದ್ರಭೂಮಿಯಲ್ಲಿ ಬೃಹತ್ ಗುಂಡಿಯನ್ನು ತೋಡಿ ಅಲ್ಲಿ ಹೂತಿದ್ದ ಶವಗಳನ್ನು ಬೇರೆಡೆಗೆ ಎಸೆಯಲಾಗಿದೆ. ಈ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಅಮಾನುಷ ಕೃತ್ಯ ಖಂಡನೀಯ‘ ಎಂದರು.

ADVERTISEMENT

ಕಾವೇರಿ ನದಿತಟದ ಕೇವಲ 20ರಿಂದ 30 ಮೀಟರ್ ಅಂತರದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಬೃಹತ್ ಗುಂಡಿಯನ್ನು ನಿರ್ಮಿಸುವ ಮೂಲಕ ಸರ್ಕಾರದ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪರಿಶೀಲನೆ ನಡೆಸುವ ಮೂಲಕ ಹಿಂದೂ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮಯ್ಯ, ಭಜರಂಗದಳದ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ವಿನಯ್, ನಾಪೋಕ್ಲು ಸಂಚಾಲಕ ಪ್ರದೀಪ್, ಪ್ರಮುಖರಾದ ಅಂಬಿಕಾರ್ಯಪ್ಪ, ಕರವಂಡ ಲವ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.