ADVERTISEMENT

₹ 546 ಕೋಟಿ: ಕೊಡಗಿಗೇ ಬಳಸಿ

ಬಿಜೆಪಿ ಜಿಲ್ಲಾ ಘಟಕದ ಆಗ್ರಹ, ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 14:26 IST
Last Updated 4 ಡಿಸೆಂಬರ್ 2018, 14:26 IST
ಹೂಳು ತುಂಬಿರುವ ಗದ್ದೆ
ಹೂಳು ತುಂಬಿರುವ ಗದ್ದೆ   

ಮಡಿಕೇರಿ: ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ₹ 546 ಕೋಟಿ ನೆರವನ್ನು ಕೊಡಗು ಜಿಲ್ಲೆಯ ಅಭಿವೃದ್ಧಿಗೇ ಬಳಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ನಾಲ್ಕು ತಿಂಗಳು ಕಳೆದರೂ ರಾಜ್ಯ ಸರ್ಕಾರ ನಿರಾಶ್ರಿತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಆರಂಭದಲ್ಲಿ ಸಾಕಷ್ಟು ಆಶ್ವಾಸನೆ ನೀಡಿದ್ದ ರಾಜ್ಯ ಸರ್ಕಾರ ಈಗ ವಿಳಂಬ ಧೋರಣೆ ಅನುಸರಿಸುತ್ತಿದೆ. ಪುನರ್ವಸತಿ ಕಾರ್ಯದಲ್ಲಿ ಆಸಕ್ತಿ ತೋರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿಸಚಿವ ಸಾ.ರಾ.ಮಹೇಶ್ ನೆಪಕೊಮ್ಮೆಭೇಟಿ ನೀಡಿದ್ದಾರೆ. ಸಾಂತ್ವನ ಹೇಳಲು ಜಿಲ್ಲೆಗೆ ಆಗಮಿಸುತ್ತಾರೆ. ಪರಿಹಾರ ವಿಷಯದಲ್ಲಿ ನಿರಾಶ್ರಿತರಲ್ಲಿ ಗೊಂದಲ ಸೃಷ್ಟಿ ಮಾಡಲಾಗುತ್ತದೆ ಎಂದು ದೂರಿದರು.

ಮುಖ್ಯಮಂತ್ರಿ ಪರಿಹಾರ ನಿಧಿಗೆ ದಾನಿಗಳಿಂದ ಸಾವಿರಾರು ಕೋಟಿ ಹಣ ಸಂಗ್ರಹವಾಗಿದೆ. ಆದರೆ, ಎಷ್ಟು ಹಣ ಸಂಗ್ರಹವಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸುತ್ತಿಲ್ಲ. ವಸತಿ, ಶಾಲೆ ನಿರ್ಮಾಣಕ್ಕೆ ಮುಂದಾಗಿರುವ ದಾನಿಗಳ ಬಳಿಯೂ ಜಿಲ್ಲಾಡಳಿತ ಮಾತುಕತೆ ನಡೆಸಲು ವಿಫಲವಾಗಿದೆ ಎಂದು ಆರೋಪಿಸಿದರು.

ಕೊಡಗು ಮರು ನಿರ್ಮಾಣಪ್ರಾಧಿಕಾರ ರಚಿಸುವುದಾಗಿ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ, ಈಗ ಆಸಕ್ತಿ ತೋರುತ್ತಿಲ್ಲ. ಎಲ್ಲ ಸಂದರ್ಭದಲ್ಲೂ ಕೇಂದ್ರ ಸರ್ಕಾರದತ್ತಲೇ ಬೊಟ್ಟು ಮಾಡುವುದಾದರೆ ರಾಜ್ಯ ಸರ್ಕಾರದ ಪಾತ್ರವೇನು? ಎಂದು ಪ್ರಶ್ನಿಸಿದರು.

ಇಲ್ಲಿಯ ರಸ್ತೆ, ಸೇತುವೆ, ಕುಡಿಯುವ ನೀರಿನ ಸಮಸ್ಯೆಗಳ ಜತೆಗೆ ಇಲ್ಲಿನ ಕೃಷಿಕರ, ಮನೆ ಕಳೆದುಕೊಂಡವರ ಬಗ್ಗೆಯೂ ಒಂದಷ್ಟು ಚಿಂತನೆ ಮಾಡಬೇಕಿದೆ. ಯಾವುದಕ್ಕೆ ಮೊದಲು ಆದ್ಯತೆನೀಡಬೇಕೋ ಅದಕ್ಕೆ ಅದಕ್ಕೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಲಾಗುವುದೆಂದು ಭರವಸೆ ನೀಡಿದ್ದ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾಗಿದೆ. ಯಾವ ಭರವಸೆಯೂ ಈಡೇರಿಲ್ಲ. ನಿರಾಶ್ರಿತರು ಮಾತ್ರ ಇಲಾಖೆ ಕಚೇರಿಗಳನ್ನು ಅಲೆದಾಡುವ ಸ್ಥಿತಿ ತಲುಪಿದೆ ಎಂದು ಭಾರತೀಶ್ ಅಸಮಾಧಾನವ್ಯಕ್ತಪಡಿಸಿದರು.

ಪುನರ್ವಸತಿಗಾಗಿ ಸರ್ಕಾರಿ ಜಾಗಗಳನ್ನು ಗುರುತಿಸುವಲ್ಲಿಜಿಲ್ಲಾಡಳಿತ ವಿಳಂಬಮಾಡುತ್ತಿದೆ. ಈ ಕಾರಣದಿಂದ ಪರಿಹಾರ ಕೇಂದ್ರದಲ್ಲಿ ಇನ್ನು ನಿರಾಶ್ರಿತರಾಗಿಯೇಉಳಿದಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಕುಮಾರಸ್ವಾಮಿ ಅವರೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಡೀನ್ ಬೋಪಣ್ಣ, ಅಪ್ಪಯ್ಯ, ಬಿ.ಕೆ. ಜಗದೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.