ADVERTISEMENT

ಉಗ್ರರ ದಾಳಿ: ಕೇಂದ್ರದ ದೊಡ್ಡ ವೈಫಲ್ಯ– ದಿನೇಶ್‌

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 16:08 IST
Last Updated 27 ಏಪ್ರಿಲ್ 2025, 16:08 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಮಡಿಕೇರಿ: ‘ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಖಂಡಿತವಾಗಿಯೂ ಕೇಂದ್ರ ಸರ್ಕಾರದ ದೊಡ್ಡ ವೈಫಲ್ಯ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್ ಆರೋಪಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಭದ್ರತಾ ವೈಫಲ್ಯವಾಗಿದೆ ಎಂದು ಕೇಂದ್ರವೇ ಒಪ್ಪಿಕೊಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುವ ಕಡೆ ರಕ್ಷಣೆಗೆ ಯಾರೂ ಇರಲಿಲ್ಲ ಎಂಬುದು ಗೊತ್ತಾಗಿದೆ. ದಾಳಿಯ ಸಾಧ್ಯತೆಯನ್ನು ಗ್ರಹಿಸುವಲ್ಲಿ ಕೇಂದ್ರ ಗುಪ್ತಚರ ಇಲಾಖೆಯೂ ಸೋತಿದೆ’ ಎಂದು ದೂರಿದರು.

‘ಈಗ ಮೊಸರಿನಲ್ಲಿ ಕಲ್ಲು ಹುಡುಕುತ್ತಾ, ಒಬ್ಬರ ಮೇಲೆ ಒಬ್ಬರು ದೂರುವುದು ಸರಿಯಲ್ಲ. ಒಗ್ಗಟ್ಟಿನಿಂದ ಇದನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಸರ್ಕಾರವೂ ಪಾರದರ್ಶಕವಾಗಿ ನಡೆದುಕೊಳ್ಳಬೇಕಾಗಿದೆ. ಸರ್ವಪಕ್ಷ ಸಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರಲಿಲ್ಲ. ಅವರು ಆಗ ಬಿಹಾರದ ಚುನಾವಣಾ ಪ್ರಚಾರದಲ್ಲಿದ್ದರು. ಪ್ರಧಾನಿಗೆ, ಗಂಭೀರ ವಿಚಾರಕ್ಕಿಂತ ಚುನಾವಣೆ ಪ್ರಚಾರವೇ ಮುಖ್ಯ ಆಗಬಾರದಿತ್ತು’ ಎಂದರು.

ADVERTISEMENT

‘ಒಗ್ಗಟ್ಟು ಮುರಿಯಲು ಅವಕಾಶ ನೀಡದಿರಿ’

ಮಂಗಳೂರು: ‘ದೇಶದ್ರೋಹಿಗಳು ಭಯೋತ್ಪಾದಕರ ಮುಖ್ಯ ಉದ್ದೇಶ ದೇಶವನ್ನು ದುರ್ಬಲಗೊಳಿಸುವುದು. ಈ ಕಾರಣದಿಂದಲೇ ಅವರು ನಮ್ಮ ಒಗ್ಗಟ್ಟನ್ನು ಮುರಿಯಲು ಸಂಚು ರೂಪಿಸುತ್ತಾರೆ. ಇದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು. ಪಹಲ್ಗಾಮ್‌ನಲ್ಲಿ ಈಚೆಗೆ ನಡೆದ ಭಯೋತ್ಪಾದಕರ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು ಕೃತ್ಯ ಎಸಗಿದರನ್ನು ಮತ್ತು ಬೆಂಬಲ‌ ನೀಡಿದವರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಯುದ್ಧದ ಸನ್ನಿವೇಶ ಸೃಷ್ಟಿಯಾದರೆ ಸರ್ವಪಕ್ಷ ಸಭೆ ನಡೆಯುತ್ತದೆ. ಅಗತ್ಯಕ್ಕೆ ತಕ್ಕಂತೆ ಅಧಿಕಾರಿಗಳು ಕೇಂದ್ರ ಸರ್ಕಾರ‌ ನಿರ್ಧಾರ ಮಾಡುತ್ತದೆ. ಈ ವಿಚಾರದಲ್ಲಿ ಇಡೀ‌ ದೇಶ ಒಗ್ಗಟ್ಟಾಗಿರಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.