ADVERTISEMENT

ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ ಒದಗಿಸುವ ಚಿಂತನೆ

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಜಿಲ್ಲಾಧ್ಯಕ್ಷ ಕೊಡಂದೇರ ಪಿ ಗಣಪತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:22 IST
Last Updated 26 ಜೂನ್ 2025, 13:22 IST
ಶನಿವಾರಸಂತೆ ಡಿಸಿಸಿ ಬ್ಯಾಂಕ್ ಗ್ರಾಹಕರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೊಡಂದೇರ ಪಿ ಗಣಪತಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದರು.
ಶನಿವಾರಸಂತೆ ಡಿಸಿಸಿ ಬ್ಯಾಂಕ್ ಗ್ರಾಹಕರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೊಡಂದೇರ ಪಿ ಗಣಪತಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದರು.   

ಶನಿವಾರಸಂತೆ: ‘ಮುಂದಿನ ದಿನಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣಗಳ ಮೇಲಿನ ಸಾಲವನ್ನು ಒದಗಿಸಲು ಚಿಂತನೆ ಮಾಡಿದ್ದೇವೆ’ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಜಿಲ್ಲಾಧ್ಯಕ್ಷ ಕೊಡಂದೇರ ಪಿ ಗಣಪತಿ ತಿಳಿಸಿದರು.

ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಕಚೇರಿಯಲ್ಲಿ ಬುಧವಾರ ನಡೆದ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು.

ಶನಿವಾರಸಂತೆ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಮರುಪಾವತಿ ಮಾಡದಿರುವ ಗ್ರಾಹಕರಿಗೆ ತಿಳುವಳಿಕೆ ನೀಡಿ ಸಾಲ ಮರುಪಾವತಿ ಮಾಡಲು ಅವಕಾಶ ನೀಡಿದ್ದೇವೆ. ಅದರಂತೆ ಸಾಲ ಮರುಪಾವತಿಯಾಗಿದೆ. ಇನ್ನು ಕೆಲವೇ ಸಾಲಗಳು ಮಾತ್ರ ಬ್ಯಾಂಕಿಗೆ ಮರುಪಾವತಿ ಆಗಬೇಕಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ವಹಿಸಿ ಸಾಲ ವಸೂಲಾತಿ ಮಾಡಲಾಗುವುದು ಎಂದರು.

ADVERTISEMENT

ಮಾಜಿ ಮತ್ತು ಹಾಲಿ ಸೈನಿಕರಿಗೆ ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಟ್ಟಿದ್ದಲ್ಲಿ ಶೇ 0.2ರಷ್ಟು ಹೆಚ್ಚು ಬಡ್ಡಿಯನ್ನು ನೀಡಲಾಗುವುದು. ರೈತರಿಗೆ ನೀಡಲಾಗುವ ಕೆಸಿಸಿ ಸಾಲ ಸರ್ಕಾರದ ಆದೇಶದಂತೆ ₹ 5 ಲಕ್ಷ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ವಿತರಿಸಲಾಗುತಿದೆ. ಈ ₹ 5 ಲಕ್ಷ ಮೊತ್ತವನ್ನು ರಾಜ್ಯದ ಕೊಡಗು ಜಿಲ್ಲೆಯಲ್ಲಿ ಮಾತ್ರ ವಿತರಿಸಲಾಗಿದೆ ಎಂದು ಹೇಳಿದರು.

ಜುಲೈ ತಿಂಗಳಿನಿಂದ ಶನಿವಾರಸಂತೆ ಶಾಖೆಗೆ ಇಬ್ಬರು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು.

ವಕೀಲರಾದ ಜಗದೀಶ್ ಮಾತನಾಡಿ, ‘ಬ್ಯಾಂಕಿನಲ್ಲಿ ಸಾಲ ಸೌಲಭ್ಯ ಪಡೆಯಲು ₹ 60 ಲಕ್ಷದವರೆಗೆ ಮಿತಿ ಇರುವ ಕಾರಣ ದೊಡ್ಡ ಮಟ್ಟದ ಉದ್ಯಮವನ್ನು ಸ್ಥಾಪಿಸಲು ಇನ್ನಷ್ಟು ಆರ್ಥಿಕ ಸಹಾಯ ಬ್ಯಾಂಕಿನಿಂದ ಬೇಕಾಗಿರುತ್ತದೆ. ಇದರ ಬಗ್ಗೆ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ಇನ್ನಷ್ಟು ಹೆಚ್ಚು ಸಾಲ ಸೌಲಭ್ಯವನ್ನು ನೀಡುವ ವ್ಯವಸ್ಥೆಯಾಗಬೇಕು’ ಎಂದು ಮನವಿ ಮಾಡಿದರು.

ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎನ್.ರಘು ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ವಾಸವಾಗಿದ್ದು, ರೈತರು ಹಾಸನ ಗಡಿ ಭಾಗದ ಗ್ರಾಮಗಳಲ್ಲಿ ತಮ್ಮ ತೋಟಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇವರಿಗೆ ಬ್ಯಾಂಕಿನಿಂದ ಕಾಫಿ ಗೋದಾಮು ನಿರ್ಮಾಣ, ವಾಹನ ಖರೀದಿ ಇತರೆ ಸಾಲ ಸೌಲಭ್ಯವನ್ನು ಒದಗಿಸಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ಶರತ್ ಶೇಖರ್, ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ಭೋಜಮ್ಮ, ಶನಿವಾರಸಂತೆ ಶಾಖೆಯ ವ್ಯವಸ್ಥಾಪಕ ಎಸ್.ಎಂ.ಭರತ್, ಗ್ರಾಹಕರಾದ ಸಿ.ಜೆ.ಗಿರೀಶ್, ಡಿ.ಬಿ.ಧರ್ಮಪ್ಪ, ರವಿ, ಅಶೋಕ್, ಸಾಗರ್ ಚಿನ್ನಳ್ಳಿ, ಅಪ್ಪಶೆಟ್ಟಳ್ಳಿ ಆನಂದ್, ಆಲೂರು ಸಿದ್ದಾಪುರದ ಪ್ರಸನ್ನ, ಬ್ಯಾಂಕಿನ ಸಿಬ್ಬಂದಿ ಇಂದ್ರೇಶ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.