ADVERTISEMENT

ಕಾಫಿ ತೋಟಕ್ಕಾಗಿ ಮರಗಳ ಬಲಿ?

ಮರ ಒಣಗುವಂತೆ ರಾಸಾಯನಿಕಗಳ ಬಳಕೆ; ಪರಿಸರ ನಾಶದ ಆತಂಕ

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:58 IST
Last Updated 22 ಮೇ 2019, 19:58 IST
ನಾಪೋಕ್ಲು ಸಮೀಪದ ಪಾಲಂಗಾಲ ಗ್ರಾಮದಲ್ಲಿ ಒಣಗಿರುವ ಮರ
ನಾಪೋಕ್ಲು ಸಮೀಪದ ಪಾಲಂಗಾಲ ಗ್ರಾಮದಲ್ಲಿ ಒಣಗಿರುವ ಮರ   

ನಾಪೋಕ್ಲು: ಜಿಲ್ಲೆಯ ನಾಪೋಕ್ಲು ಸಮೀಪದ ಪಾಲಂಗಾಲ ಗ್ರಾಮದಲ್ಲಿ ಕಾಫಿ ತೋಟದ ವಿಸ್ತರಣೆಗಾಗಿ, ಕಾಡು ಜಾತಿಯ ಬೃಹತ್‌ ಮರಗಳನ್ನು ನಿರ್ಮೂಲನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ವ್ಯಕ್ತಿಯೊಬ್ಬರು, ಗ್ರಾಮದಲ್ಲಿ ಕಾಫಿ ತೋಟ ಮಾಡಲು ಖರೀದಿಸಿದ್ದ ಅಂದಾಜು 50 ಎಕರೆ ಪ್ರದೇಶದಲ್ಲಿ ಮರಗಳನ್ನು ನಾಶಪಡಿಸುವ ಕೃತ್ಯ ನಿರಂತರವಾಗಿ ಸಾಗುತ್ತಿದೆ. ಮರವನ್ನು ಕತ್ತರಿಸಿ ಬೀಳಿಸದೇ, ಅವುಗಳನ್ನು ನಿಧಾನವಾಗಿ ಸಾಯಿಸುವ ಉಪಾಯ ವನ್ನು ಮಾಲೀಕರು ಹಾಗೂ ಅಲ್ಲಿನ ಕಾರ್ಮಿಕರು ಕಂಡುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಸಾಕ್ಷಿ ಎಂಬಂತೆ, ಹಸಿರಾಗಿದ್ದ ಹಲವು ಮರಗಳು ಒಣಗಿ ನಿಂತಿವೆ.

‘ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ಹೀಗಾಗಿ, ತೋಟದ ಮಾಲೀಕರು ಮರದ ಕಾಂಡವನ್ನು ತುಸು ಕತ್ತರಿಸಿ ಅಲ್ಲಿಗೆ ರಾಸಾಯನಿಕಗಳನ್ನು ಹಾಕುತ್ತಿದ್ದಾರೆ. ಇದರಿಂದ ಮರಗಳು ನಿಧಾನವಾಗಿ ಒಣಗುತ್ತಿವೆ. ಹೀಗೆ ನೂರಾರು ಮರಗಳು ಒಣಗುತ್ತಿದ್ದರೂ ಅರಣ್ಯ ಇಲಾಖೆಯವರು ಇತ್ತ ಗಮನ ಹರಿಸಿಲ್ಲ‌’ ಎಂಬುದು ಗ್ರಾಮಸ್ಥರ ದೂರು.

ADVERTISEMENT

ಸ್ಥಳೀಯರಿಗೆ ಮಾಹಿತಿ ಇಲ್ಲ: ಮರ ಒಣಗಿಸಲು ಯಾವ ವಿಧದ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸ್ಥಳೀಯರಿಗೆ ಇಲ್ಲ. ಆದರೆ, ಅವರು ಹೇಳುವ ಪ್ರಕಾರ, ರಾತ್ರೋರಾತ್ರಿ ಮರಗಳಿಗೆ ಯಾರೋ ರಾಸಾಯನಿಕ ಸಿಂಪಡಿಸಿ ಅದರ ಬಾಟಲಿಗಳನ್ನು ಬಿಸಾಡದೇ ತೆಗೆದುಕೊಂಡು ಹೋಗುತ್ತಿದ್ದಾರೆ. ‘ಅರಣ್ಯ ನಾಶ ಸದ್ದಿಲ್ಲದೇ ನಡೆಯುತ್ತಿದೆ. ಸ್ಥಳೀಯರು ಹೊರಗಿನ ವ್ಯಕ್ತಿಗಳೊಂದಿಗೆ ಕೈಜೋಡಿಸಿ ಮರಗಳ ಹನನ ಮಾಡುತ್ತಿದ್ದಾರೆ’ ಎಂದು ಗ್ರಾಮದ ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ದೂರಿದರು.

ಈ ರೀತಿ ಕಾಡು ನಾಶ ಮಾಡುತ್ತಿರುವುದದಕ್ಕಾಗಿಯೇ ಕಾಡಾನೆ ಗಳು ಕೃಷಿ ಭೂಮಿಗೆ ದಾಳಿ ಮಾಡುತ್ತಿವೆ. ಸಂಜೆಯಾಗುತ್ತಿದ್ದಂತೆ ತೋಟಗಳಿಗೆ ದಾಳಿಯಿಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಮರಗಳಿಂದ ಕಾಫಿ ತೋಟಕ್ಕೆ ಪ್ರಯೋಜನ

ಕಾಡು ಮರಗಳನ್ನು ಹನನ ಮಾಡುವುದು ಸರಿಯಲ್ಲ. ಜಮೀನು ಖರೀದಿಸಿರುವ ವ್ಯಕ್ತಿ ಯಾವ ಕಾರಣಕ್ಕೆ ಈ ಕೃತ್ಯ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಮರ ಉಳಿಸಿಕೊಳ್ಳುವುದರಿಂದ ಕಾಫಿ ತೋಟಕ್ಕೂ ಹಾಗೂ ಪರಿಸರಕ್ಕೂ ಪ್ರಯೋಜನ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.