ADVERTISEMENT

ಮಡಿಕೇರಿ| ‘ನವಗ್ರಾಮ’ ನಿರ್ಮಾಣಕ್ಕೆ ಮರ ಹನನ

ಮರ ಕಡಿತಲೆ ಸ್ಥಗಿತಕ್ಕೆ ಆಗ್ರಹಿಸಿ ಕಾವೇರಿ ಸೇನೆಯಿಂದ ಡಿಸಿಎಫ್‌ಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 19:45 IST
Last Updated 22 ಜನವರಿ 2020, 19:45 IST
ಮಡಿಕೇರಿ ಅರಣ್ಯ ಭವನದಲ್ಲಿ ಬುಧವಾರ ಬಸವನಹಳ್ಳಿ ಗ್ರಾಮದಲ್ಲಿ ಮರಗಳನ್ನು ಕಡಿತಲೆ ವಿರೋಧಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌ ಅವರಿಗೆ ಕಾವೇರಿ ಸೇನೆ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು
ಮಡಿಕೇರಿ ಅರಣ್ಯ ಭವನದಲ್ಲಿ ಬುಧವಾರ ಬಸವನಹಳ್ಳಿ ಗ್ರಾಮದಲ್ಲಿ ಮರಗಳನ್ನು ಕಡಿತಲೆ ವಿರೋಧಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌ ಅವರಿಗೆ ಕಾವೇರಿ ಸೇನೆ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು   

ಮಡಿಕೇರಿ: ಕುಶಾಲನಗರದ ಬಸವನಹಳ್ಳಿ ಗ್ರಾಮದಲ್ಲಿ ನವ ಗ್ರಾಮ ನಿರ್ಮಾಣದ ಉದ್ದೇಶಕ್ಕೆ ನೂರಾರು ಮರಗಳ ಕಡಿತಲೆ ಮಾಡಲಾಗುತ್ತಿದೆ. ಅದನ್ನ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಬುಧವಾರ ಕಾವೇರಿ ಸೇನೆಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌ ಅವರಿಗೆ ಮನವಿ ಸಲ್ಲಿಸಲಾಯಿತು. ನಗರದ ಅರಣ್ಯ ಭವನದಲ್ಲಿ ಮನವಿ ಸಲ್ಲಿಸಲಾಯಿತು.

ಕಾವೇರಿ ಸೇನೆಯ ಅಧ್ಯಕ್ಷ ರವಿ ಚಂಗಪ್ಪ ಮಾತನಾಡಿ, ‘ಬಸವನಹಳ್ಳಿ ಸರ್ಕಾರಿ ಜಾಗದಲ್ಲಿ ನವ ಗ್ರಾಮ ನಿರ್ಮಾಣ ಹೆಸರಿನ್ಲಲಿ ಮರಗಳನ್ನು ಕಡಿಯುವುದು ಸರಿಯಲ್ಲ. ಈ ಜಾಗದಲ್ಲಿ ಮರಗಳನ್ನು ಕಡಿದರೆ ಅಲ್ಲಿ ಹರಿಯುವ ನೀರಿನ ಒರತೆಗೆ ಧಕ್ಕೆ ಉಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಈ ಜಾಗದಿಂದ ಹಾರಂಗಿ ಜಲಾಶಯಕ್ಕೆ ಕೇವಲ 3 ಕಿ.ಮೀ ಅಂತರವಿದ್ದು, ಕಾವೇರಿ ನದಿ ಪಾತ್ರದಲ್ಲಿ ಮರಗಳನ್ನು ಕಡಿಯುವ ಉದ್ದೇಶ ಸರಿಯಲ್ಲ. ಜಿಲ್ಲಾಡಳಿತ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಕೋರಿದರು.

ADVERTISEMENT

ಇನ್ನು ಗುರುತಿಸಿದ ಜಾಗವು ಆನೆಕಾಡು ಅರಣ್ಯ ಪ್ರದೇಶದಿಂದ ಈ ಸ್ಥಳಕ್ಕೆ 500 ಮೀಟರ್ ದೂರವಿದೆ. ಕಾಡುಪ್ರದೇಶ ಕೂಡ ನಾಶವಾಗಲಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಗಮನವಿದ್ದರೂ ಪರಿಸರ ರಕ್ಷಣೆಗೆ ಮುಂದಾಗುತ್ತಿಲ್ಲ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾಡುನಾಶಕ್ಕೆ ತೊಡಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನವ ಗ್ರಾಮ’ ಹೆಸರಿನಲ್ಲಿ ಮರಗಳನ್ನು ಕಡಿದು ಲಾಭ ಮಾಡಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಈ ಮರಗಳನ್ನು ಕಡಿಯಬಾರದು. ಮರ ಕಡಿಯಲು ಮುಂದಾದರೆ ವಿವಿಧ ಸಂಘಟನೆಗಳನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಕ್ರಮ ಮನೆಗಳು ಕಡಿವಾಣ ಹಾಕಿ:
ಜಿಲ್ಲೆಯಲ್ಲಿ ಸರ್ಕಾರಿ ಜಾಗ, ಅರಣ್ಯಕ್ಕೆ ಸೇರಿದ ನೂರಾರು ಎಕರೆ ಜಾಗದಲ್ಲಿ ಅಕ್ರಮ ಮನೆಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂದು ದೂರಿದರು.

ಮುಂದಿನ ದಿನಗಳಲ್ಲಿ ಸರ್ಕಾರಿ ಜಾಗದಲ್ಲಿ ಮರ ಕಡಿಯಲು ಮುಂದಾದರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರವಿ ಚಂಗಪ್ಪ ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು, ಬಸವನಹಳ್ಳಿ ಗ್ರಾಮದಲ್ಲಿ ಹಕ್ಕುಪತ್ರ ನೀಡಿರುವುದರಿಂದ ಮರಗಳನ್ನು ಕಡಿಯಲು ನಿರ್ಧರಿಸಲಾಗಿದೆ. ಈ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.