ADVERTISEMENT

ಅಡುಗೆ ಸರಿ ಇಲ್ಲ, ನೀರಿಲ್ಲ, ರಕ್ಷಣೆ ಇಲ್ಲ !

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 10:00 IST
Last Updated 13 ಸೆಪ್ಟೆಂಬರ್ 2011, 10:00 IST

ಕೋಲಾರ: ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಸರಿ ಇಲ್ಲ. ಹಾಜರಾತಿ ಪುಸ್ತಕವಿರುವುದಿಲ್ಲ. ಬಿಲ್ ಪುಸ್ತಕವೂ ಇರುವುದಿಲ್ಲ. ವಾರ್ಡನ್‌ಗಳೂ ಸ್ಥಳದಲ್ಲಿರುವುದಿಲ್ಲ. ದೂರವಾಣಿ ಮೂಲಕ ಸಂಪರ್ಕಕ್ಕೂ ಸಿಗುವುದಿಲ್ಲ.

-ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ ಅವರ ಅಸಮಾಧಾನದ ನುಡಿಗಳಿವು. ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಹಾಸ್ಟೆಲ್‌ಗಳ ಅಸಮರ್ಪಕ ವ್ಯವಸ್ಥೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಒಟ್ಟಾರೆಯಾಗಿ ಇಲಾಖೆಯ ಹಾಸ್ಟೆಲ್‌ಗಳನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೇ ಅಗತ್ಯವಿದೆ ಎಂದು ಮುನಿವೆಂಕಟಪ್ಪ ನುಡಿದರು.

ಕೆಜಿಎಫ್‌ನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ತಿಪ್ಪೆಯಲ್ಲಿ ಬಿಸಾಡಲಷ್ಟೆ ಅರ್ಹವಿದ್ದ ಹಾಸಿಗೆಗಳು. ಅಲ್ಲಿನ ಸೌರಶಕ್ತಿ ಸಾಮಗ್ರಿ ತಂದು 2 ವರ್ಷವಾದರೂ ಅಳವಡಿಸಿಲ್ಲ ಎಂದು ದೂರಿದರು.

ಮುಳಬಾಗಲಿನ ಮೆಟ್ರಿಕ್‌ಪೂರ್ವ ನಿಲಯವೊಂದರಲ್ಲಿ ಸಂಜೆ 6.30ರ ವೇಳೆಗೆ ಒಬ್ಬ ವಿದ್ಯಾರ್ಥಿಯೂ ಇರಲಿಲ್ಲ. 10 ಮಂದಿ ಅಡುಗೆಯವರು ಇದ್ದರು. ಅವರಲ್ಲಿ ಒಬ್ಬರು ಮದ್ಯಪಾನ ಮಾಡಿದ್ದರು.

ಅಡುಗೆಪಾತ್ರೆಗಳು ಮಾತ್ರ 30ರೊಂದ 40ಮಂದಿಗೆ ಅಡುಗೆ ಮಾಡುವ ಸಾಮರ್ಥ್ಯ ಉಳ್ಳವಾಗಿದ್ದವು. ದೇವರಾಯಸಮುದ್ರದ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ಅಡುಗೆ ಸರಿ ಇರಲಿಲ್ಲ. ಬಾಲಕ-ಬಾಲಕಿಯರು ಒಂದೇ ಸ್ಥಳದಲ್ಲಿದ್ದರು ಎಂದರು.

ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ನೀರಿಲ್ಲ, ಬಾಗಿಲುಗಳಿಲ್ಲ. ಅಂಥ ಅವ್ಯವಸ್ಥೆಯಲ್ಲಿ ರಾತ್ರಿವೇಳೆ ಅನಾಹುತ ನಡೆದರೆ ಬಾಲಕಿಯರ ಗತಿ ಏನು ಎಂದು ಮಂಜುಳಾ ಪ್ರಶ್ನಿಸಿದರು.

ನೀರಿನ ಸಮಸ್ಯೆಗಳ ಬಗ್ಗೆ ಉತ್ತರಿಸಿದ ಪ್ರಭಾರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾಲಕ್ಷ್ಮಿ, ಜಿಲ್ಲೆಯ ಎಲ್ಲಿಯೂ ಸ್ಥಳೀತ ಆಡಳಿತ ಸಂಸ್ಥೆಗಳು ನೀರನ್ನು ಪೂರೈಸುತ್ತಿಲ್ಲ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸಿಇಒ ಎನ್.ಶಾಂತಪ್ಪ, `ನಿಲಯಗಳಲ್ಲಿ ಆಹಾರಕ್ಕಿಂತಲೂ ಹೆಚ್ಚು ಹಣವನ್ನು ನೀರಿಗಾಗಿ ಖರ್ಚು ಮಾಡಲಾಗುತ್ತಿದೆ. ಅದನ್ನು ಒಪ್ಪಲಾಗುವುದಿಲ್ಲ. ಪ್ರತಿ ವಿದ್ಯಾರ್ಥಿಗೆ ಮೀಸಲಿಟ್ಟ 750 ರೂಪಾಯಿಯಲ್ಲಿ ಕೊಡಬೇಕಾದ ಆಹಾರ, ಸಾಮಗ್ರಿಗಳನ್ನು ಮೊದಲು ಕೊಡಿ. ನೀರಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದರೆ ಆಹಾರ ಪೂರೈಕೆಗೆ ಏನು ಮಾಡುವಿರಿ?~ ಎಂದು ಪ್ರಶ್ನಿಸಿದರು.

ಬಾಡಿಗೆ ಮನೆಗಳಲ್ಲಿ ನಿಲಯಗಳಿದ್ದರೆ ಅವುಗಳ ಮಾಲೀಕರು ನೀರು ಪೂರೈಸಬೇಕು. ಇಲ್ಲದಿದ್ದರೆ ಬಾಡಿಗೆ ಕೊಡುವುದಿಲ್ಲ ಎನ್ನಿ, ಬೇರೆ ಕಟ್ಟಡ ಹುಡುಕಿ ನಿಲಯಗಳನ್ನು ಸ್ಥಳಾಂತರಿಸಿ ಎಂದು ಶಾಂತಪ್ಪ ಸೂಚಿಸಿದರು.  ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಕಳೆದ ಸಭೆಯಲ್ಲಿ ನಡೆದ ಚರ್ಚೆ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮದ ಬಗ್ಗೆ ಕೇಳಿದಾಗ ಇಲಾಖೆ ಉಪನಿರ್ದೇಶಕರು ಆ ಕುರಿತು ಉಪನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ ಎಂದರು.

ಪಶುವೈದ್ಯಾಧಿಕಾರಿಗಳು ಹಳ್ಳಿಗಳಿಗೆ ಬಂದು ಪಶುಗಳಿಗೆ ಚಿಕಿತ್ಸೆ ನೀಡಲು ರೈತರಿಂದ ದುಬಾರಿ ಹಣ ವಸೂಲು ಮಾಡುತ್ತಿರುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ರೆಡ್ಡಿ ತಿಳಿಸಿದರು.

ವಸತಿ ಯೋಜನೆ ಅಡಿ  ಗ್ರಾಮ ಪಂಚಾಯಿತಿಯಲ್ಲಿ ರೂಪು ಗೊಳ್ಳುವ ಫಲಾನುಭವಿಗಳ ಪಟ್ಟಿಯನ್ನು ಶಾಸಕರ ನೇತೃತ್ವದಲ್ಲಿ ಬದಲಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ನಿಜವಾದ ಫಲಾನುಭವಿಗಳ ಆಯ್ಕೆ ಸಮಸ್ಯೆಯಾಗಿದೆ ಎಂದು ಕೋಲಾರ ತಾಪಂ ಅಧಿಕಾರಿ ತಿಳಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ನಿಗದಿಯಾಗಿರುವ ಎಲ್ಲ ಗ್ರಾಮ ಪಂಚಾಯಿತಿಗಳ ಫಲಾನುಭವಿಗಳ ಪಟ್ಟಿಯನ್ನು ಒಮ್ಮೆಗೇ ಅನುಮೋದನೆ ಮಾಡಬೇಕು. ಅಲ್ಲಿವರೆಗೂ, ಈಗಾಗಲೇ ಅನುಮೋದನೆಗೊಂಡಿರುವ ಪಟ್ಟಿಯನ್ನು ತಡೆ ಹಿಡಿಯಬೇಕು ಎಂದೂ ನಿರ್ಧಾರ ಕೈಗೊಳ್ಳಲಾಯಿತು.

ಹೋಳೂರು ಹೋಬಳಿಯ 23 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ನೀರು ಪೂರೈಕೆಗೆ ತೊಂದರೆಯಾಗಿರುವ ಕುರಿತು ಮುನಿವೆಂಕಟಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಬೆಸ್ಕಾಂ ಮತ್ತು ಪಂಚಾಯತ್ ಎಂಜಿನಿಯರಿಂಗ್ ವಿಭಾಗಗಳು ತದ್ವಿರುದ್ಧ ಹೇಳಿಕೆ ನೀಡುವುದರ ಕುರಿತು ಆಕ್ಷೇಪಿಸಿದರು. ಉಪಾಧ್ಯಕ್ಷ ಜಿ.ಸೋಮಶೇಖರ್, ಕೆ.ಆರ್.ಕಿಟ್ಟಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.