ADVERTISEMENT

ಅಪಘಾತ: ಇಬ್ಬರು ವಿದ್ಯಾರ್ಥಿಗಳ ಸಾವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 11:33 IST
Last Updated 23 ಮಾರ್ಚ್ 2018, 11:33 IST
ಕೋಲಾರ ತಾಲ್ಲೂಕಿನ ವಡಗೂರು ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿರುವ ಕಾರು.
ಕೋಲಾರ ತಾಲ್ಲೂಕಿನ ವಡಗೂರು ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿರುವ ಕಾರು.   

ಕೋಲಾರ: ತಾಲ್ಲೂಕಿನ ವಡಗೂರು ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕೆಂಬೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ನಾರಾಯಣಸ್ವಾಮಿ (13) ಮತ್ತು ಏಳನೇ ತರಗತಿ ವಿದ್ಯಾರ್ಥಿ ಸುದರ್ಶನ್‌ (12) ಮೃತಪಟ್ಟವರು. ವಿಜಯ್‌ಕುಮಾರ್ ಎಂಬ ವಿದ್ಯಾರ್ಥಿ, ವಡಗೂರು ಗ್ರಾಮದ ವೆಂಕಟಪ್ಪ ಹಾಗೂ ಸುಬ್ರಮಣಿ ಎಂಬುವರು ಗಾಯಗೊಂಡಿದ್ದಾರೆ.

ಮೃತ ವಿದ್ಯಾರ್ಥಿಗಳು ರಾಮಸಂದ್ರ ಗ್ರಾಮದವರಾಗಿದ್ದು, ಶಾಲೆ ಮುಗಿದ ನಂತರ ಸಂಜೆ ಊರಿಗೆ ಹಿಂದಿರುಗಲು ವಡಗೂರು ಗೇಟ್‌ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದರು. ವೆಂಕಟಪ್ಪ ಮತ್ತು ಸುಬ್ರಮಣಿ ಸಮೀಪದಲ್ಲೇ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದರು. ಆಗ ಅದೇ ಮಾರ್ಗವಾಗಿ ಬಂದ ಕಾರು ಪಾದಚಾರಿ ಮಾರ್ಗಕ್ಕೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ವೆಂಕಟಪ್ಪರ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ADVERTISEMENT

ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಚಾಲಕ ಮುಂದೆ ಹೋಗುತ್ತಿದ್ದ ವಾಹನವನ್ನು ಎಡ ಭಾಗದಿಂದ ಹಿಂದಿಕ್ಕುವ ಯತ್ನದಲ್ಲಿ ಈ ಅಪಘಾತ ಸಂಭವಿಸಿದೆ. ಘಟನಾ ಸಂದರ್ಭದಲ್ಲಿ ಸ್ಥಳದಲ್ಲಿ ಸುಮಾರು 80 ವಿದ್ಯಾರ್ಥಿಗಳಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಕಟಪ್ಪರ ಸ್ಥಿತಿ ಗಂಭೀರವಾಗಿದೆ. ಕಾರು ಆಂಧ್ರಪ್ರದೇಶದ ನೊಂದಣಿ ಸಂಖ್ಯೆ ಹೊಂದಿದ್ದು, ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ರಸ್ತೆ ತಡೆ: ಘಟನೆಯಿಂದ ಆಕ್ರೋಶಗೊಂಡ ವಡಗೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿ ವಾಹನ ಸಂಚಾರ ಸುಗಮಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.