ADVERTISEMENT

ಅಭಿವೃದ್ಧಿಗೆ ಕಾದಿರುವ ಮಹಿಳಾ ಕಾಲೇಜು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 8:05 IST
Last Updated 26 ಆಗಸ್ಟ್ 2011, 8:05 IST
ಅಭಿವೃದ್ಧಿಗೆ ಕಾದಿರುವ ಮಹಿಳಾ ಕಾಲೇಜು
ಅಭಿವೃದ್ಧಿಗೆ ಕಾದಿರುವ ಮಹಿಳಾ ಕಾಲೇಜು   

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ವಿಭಜನೆಗೆ ಮುಂಚಿನ ಮೊಟ್ಟ ಮೊದಲ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂಬ ಖ್ಯಾತಿ ಹೊತ್ತಿರುವ ನಗರದ ಕಾಲೇಜು ಈಗ ಇಕ್ಕಟ್ಟಿನಲ್ಲಿದೆ.

ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕೊಠಡಿಗಳಿಲ್ಲದೆ ಎರಡು ಪಾಳಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಇರುವ ಕೊಠಡಿಗಳಲ್ಲಿ ಹಲವು ಸೋರುತ್ತಿವೆ. ಕಿಟಕಿ ಗಾಜು ಒಡೆದಿವೆ. ರೆಕ್ಕೆ ಮುರಿದಿವೆ. ನೀರು, ಶೌಚಾಲಯದ ಕೊರತೆ ಕಾಡುತ್ತಿದೆ.

ಈ ನಡುವೆ ಕಾಲೇಜನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಕಾಲೇಜಿನ ಮೂಲಕ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆ ತೆವಳುತ್ತಲೇ ಇದೆ.

ಇತಿಹಾಸ: ಬಾಲಕರ ಸರ್ಕಾರಿ ಕಾಲೇಜಿನಿಂದ ಬೇರ್ಪಟ್ಟು 1984ರಲ್ಲಿ ಮಹಿಳಾ ಕಾಲೇಜು ಅಸ್ತಿತ್ವಕ್ಕೆ ಬಂತು. ಪದವಿ ಪೂರ್ವ ತರಗತಿ ವಿದ್ಯಾರ್ಥಿನಿಯರು, ಬಿ.ಎ, ಬಿ.ಎಸ್‌ಸಿ, ಬಿಕಾಂ ವಿಷಯ ಸೇರಿದಂತೆ ಆಗ ಸುಮಾರು 400 ವಿದ್ಯಾರ್ಥಿನಿಯರಿದ್ದರು. ತರಗತಿಗಳು ಹಳೇ ಮಾಧ್ಯಮಿಕ ಶಾಲಾ ಕಟ್ಟಡದಲ್ಲಿ ನಡೆಯುತ್ತಿದ್ದವು.

1989ರ ನವೆಂಬರ್‌ನಲ್ಲಿ ಸಾರ್ವಜನಿಕ ಅಲ್ಪಸಂಖ್ಯಾತರ ಪದವಿ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಗೊಂಡಾಗ 850 ವಿದ್ಯಾರ್ಥಿನಿಯರಿದ್ದರು. 2002ರಲ್ಲಿ ಪದವಿ ಪೂರ್ವ ತರಗತಿಗಳನ್ನು ಕಾಲೇಜು ಶಿಕ್ಷಣ ಇಲಾಖೆಯಿಂದ ಬೇರ್ಪಡಿಸಿದಾಗ 1 ಸಾವಿರ ಪದವಿ ವಿದ್ಯಾರ್ಥಿನಿಯರಿದ್ದರು. 2003ರಿಂದ ಬಿಬಿಎಂ, ಬಿಸಿಎ, ಜೈವಿಕ ತಂತ್ರಜ್ಞಾನ ತರಗತಿ ಆರಂಭಗೊಂಡು ವಿದ್ಯಾರ್ಥಿನಿಯರ ಸಂಖ್ಯೆ ಎರಡೂವರೆ ಸಾವಿರ ಮೀರಿತು. 2007-08ರಿಂದ ಅರ್ಥಶಾಸ್ತ್ರದ ಸ್ನಾತಕೋತ್ತರ ವಿಭಾಗವೂ ಆರಂಭವಾಗಿದೆ.

ಬೇಕಾಗಿರುವುದು: ಕಾಲೇಜು ಶಿಕ್ಷಣ ಇಲಾಖೆಗೆ ಕಾಲೇಜು ಕಳೆದ ವರ್ಷ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಈ ಕೆಳಗಿನ ಕೊರತೆಗಳ ಕಡೆಗೆ ಗಮನ ಸೆಳೆಯಲಾಗಿದೆ. ಸುಮಾರು 20 ಕೊಠಡಿ, ಪ್ರಯೋಗಾಲಯ, ಬಿಕಾಂ, ಬಿಬಿಎಂ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಕಂಪ್ಯೂಟರ್ ಪ್ರಯೋಗಾಲಯ, ವಾಚನಾಲಯ, ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿ, ಸಭಾಂಗಣ, ಸುಸಜ್ಜಿತ ಆಧುನಿಕ ತಂತ್ರಜ್ಞಾನದ ಶೌಚಾಲಯ, ಸಸ್ಯೋದ್ಯಾನ, ಒಳಾಂಗಣ ಕ್ರೀಡಾಂಗಣ ಕಾಲೇಜಿಗೆ ಅತ್ಯಗತ್ಯವಾಗಿದೆ.

3.04 ಕೋಟಿ ಪ್ರಸ್ತಾವನೆ: ಕಾಲೇಜಿಗೆ ಮೂಲ ಸೌಕರ್ಯ ಒದಗಿಸುವ ಸಂಬಂಧ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂಬ ಮನವಿ ಕುರಿತು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಕಳೆದ ವರ್ಷದ ಅಕ್ಟೋಬರ್ 6ರಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕರು ಸಿದ್ಧಪಡಿಸಿರುವ ಅಂದಾಜುಪಟ್ಟಿ ಪ್ರಕಾರ, ಕಟ್ಟಡ ಕಾಮಗಾರಿಗೆ ರೂ.3.04 ಕೋಟಿ ಅನುದಾನದ ಅಗತ್ಯವಿರವ ಕುರಿತು ಗಮನ ಸೆಳೆದಿದ್ದಾರೆ. 2010-11ನೇ ಸಾಲಿನಲ್ಲಿ ಸರ್ಕಾರ ಒದಗಿಸಿರುವ ಅನುದಾನ ಹೊಸ ಕಟ್ಟಡ ಮತ್ತು ವಿಸ್ತರಣಾ ಕಾಮಗಾರಿಗಳಿಗೆ ಮಾತ್ರ ಸಾಕಾಗುತ್ತಿರುವುದರಿಂದ ಅನುದಾನದ ಕೊರತೆ ಇದೆ ಎಂಬ ಅಂಶವನ್ನೂ ವಿವರಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಾಂಶುಪಾಲರು ಮತ್ತೆ, ಕಳೆದ ಜನವರಿಯಲ್ಲೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಬರೆದಿದ್ದಾರೆ.

ಬಾಡಿಗೆ ಕಟ್ಟಡವೂ ಇಲ್ಲ: ತಾತ್ಕಾಲಿಕ ಪರಿಹಾರವಾಗಿ, 25 ಕೊಠಡಿ ಬಾಡಿಗೆಗೆ ಪಡೆದು ಅಥವಾ ಸರ್ಕಾರಿ ಕಟ್ಟಡ ಗುರುತಿಸಿ ಅಲ್ಲಿ ತರಗತಿ ನಡೆಸುವಂತೆ ಕಳೆದ ಜ.10ರಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದರು. ಆದರೆ ನಗರದಲ್ಲಿ ಎಲ್ಲಿಯೂ ತರಗತಿ ನಡೆಸಲು ಯೋಗ್ಯವಾದ ಕೊಠಡಿ ದೊರಕಲೇ ಇಲ್ಲ.

ಹೀಗಾಗಿ ಎರಡು ಪಾಳಿಯಲ್ಲಿ ಕಾಲೇಜಿನಲ್ಲಿ ತರಗತಿ ನಡೆಸಲಾಗುತ್ತಿದೆ ಎಂದು ರಾಮೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ಕಳೆದ ಬಾರಿ ಮಾನ್ಯತೆ ನೀಡುವ ಸಲುವಾಗಿ ಕಾಲೇಜಿಗೆ ಭೇಟಿ ನೀಡಿದ್ದ ಯುಜಿಸಿಯ ನ್ಯಾಕ್ ತಂಡ ಸಿ ಪ್ಲಸ್ ಮಾನ್ಯತೆ ಮಾತ್ರ ನೀಡಿ ತೆರಳಿದೆ. ಮತ್ತೆ ನ್ಯಾಕ್ ಸಮಿತಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕಾಲೇಜನ್ನು ಅಭಿವೃದ್ಧಿಗೊಳಿಸುವುದು ಅತ್ಯಗತ್ಯ. 3.04 ಕೋಟಿಯ ಪ್ರಸ್ತಾವನೆ ಅಲ್ಲದೆ, ಗ್ರಂಥಾಲಯ, ಸಭಾಂಗಣ, ತರಗತಿ ಕೊಠಡಿ ನಿರ್ಮಾಣಕ್ಕೆಂದು ರೂ.2 ಕೋಟಿಯ ಮತ್ತೊಂದು ಪ್ರಸ್ತಾವನೆಯನ್ನೂ ಯುಜಿಸಿಗೆ (ಒನ್ ಟೈಂ ಕ್ಯಾಚ್ ಅಪ್ ಗ್ರಾಂಟ್ಸ್) ಸಲ್ಲಿಸಲಾಗಿದೆ. ಅನುದಾನ ಶೀಘ್ರವೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಾಲೇಜು ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಕೂಡಲೇ ಪ್ರಯತ್ನಿಸುವುದಾಗಿ ಸಚಿವ ಆರ್.ವರ್ತೂರು ಪ್ರಕಾಶ್ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.