ADVERTISEMENT

ಅರಣ್ಯಭೂಮಿ ಒತ್ತುವರಿ ತೆರವು:ಶ್ರೀನಿವಾಸಪುರ: ಮುಂದುವರಿದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2012, 5:20 IST
Last Updated 2 ಮೇ 2012, 5:20 IST

ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಗುಂಟೆ ಸುತ್ತಮುತ್ತ ವಿವಿಧೆಡೆ ಅರಣ್ಯ ಭೂಮಿಯ ಒತ್ತುವರಿ ತೆರವು ಕಾರ್ಯಾಚರಣೆ ಮಂಗಳವಾರವೂ ಮುಂದುವರಿಯಿತು.

ಬಾಬುರೆಡ್ಡಿ ಎಂಬುವರು ಒತ್ತುವರಿ ಮಾಡಿದ್ದ 6 ಎಕರೆ 68 ಗುಂಟೆ, ಭೂಮರೆಡ್ಡಿ ಒತ್ತುವರಿ ಮಾಡಿದ್ದ 5 ಎಕರೆ 5 ಗುಂಟೆ, ಕೆ.ಎಸ್.ರೆಡ್ಡಪ್ಪ ಒತ್ತುವರಿ ಮಾಡಿದ್ದ 31 ಎಕರೆ 33 ಗುಂಟೆ ಹಾಗೂ ವೆಂಕಟರಮಣರೆಡ್ಡಿ ಎಂಬುವರು ಒತ್ತುವರಿ ಮಾಡಿದ್ದ 2 ಎಕರೆ 5 ಗುಂಟೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ.

ಈ ಜಮೀನೆಲ್ಲವೂ ಮೀಸಲು ಅರಣ್ಯಕ್ಕೆ ಸೇರಿದ ಸ್ಥಳವೆಂಬ ಫಲಕವನ್ನು ಅಳವಡಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮುನೇಗೌಡ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಒತ್ತುವರಿ ಮಾಡಿದ್ದ 64 ಎಕರೆ 23 ಗುಂಟೆ ಜಮೀನನ್ನು ಸೋಮವಾರದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.

ಸೋಮವಾರ ಕಾರ್ಯಾಚರಣೆಯನ್ನು ಮಧ್ಯಾಹ್ನದ ಬಳಿಕ ಆರಂಭಿಸಿದ್ದರಿಂದ ಎಲ್ಲ ಒತ್ತುವರಿ ಭೂಮಿ ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.ರಮೇಶ್‌ಕುಮಾರ್ ಒತ್ತುವರಿ ಮಾಡಿದ್ದ ಸ್ಥಳದಿಂದ ಒಂದಾದ ಮೇಲೊಂದರಂತೆ ಐವರು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ 11.30ಕ್ಕೆ ಕಾರ್ಯಾಚರಣೆ ಆರಂಭಿಸಿ  ಮಧ್ಯಾಹ್ನ 3ರ ವೇಳೆಗೆ ಪೂರ್ಣಗೊಳಿಸಲಾಯಿತು.

ಇಲಾಖೆಗೆ ಸೇರಿದಷ್ಟು ಜಮೀನನ್ನು ಗುರುತಿಸಿ ವಶಕ್ಕೆ ಪಡೆದೆವು. ಮೀಸಲು ಅರಣ್ಯಕ್ಕೆ ಸೇರಿದ ಸ್ಥಳವೆಂದು ಸೂಚಿಸಿರುವ ಫಲಕ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.ವರದಿ: ಅರಣ್ಯ ಭೂಮಿ ವಶಕ್ಕೆ ಪಡೆದಿರುವ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಒತ್ತವರಿದಾರರ ನಡೆ ಗಮನಿಸಿ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.