ಮಹಾಶಿವರಾತ್ರಿಯ ಜಾಗರಣೆಯನ್ನು ತಾಲ್ಲೂಕಿನ ಎಲ್ಲೆಡೆ ಭಕ್ತರು ಶಿವಪೂಜೆ, ಭಜನೆಗಳಲ್ಲಿ ತಲ್ಲೆನರಾಗಿ ಕಳೆದರೆ, ಮಂಗಸಂದ್ರದಲ್ಲಿ ಮಾತ್ರ ಭಿನ್ನ ಸಂಭ್ರಮ ಮೈ ತಳೆದಿತ್ತು. ಅಲ್ಲಿ ಆಟಗಳೇ ಭಜನೆಗಳಾಗಿದ್ದವು. ಭೇದ ಮರೆತ ಜನರ ಖುಷಿಯ ಕೇಕೆಗಳೇ ಪ್ರಾರ್ಥನೆಯಾಗಿತ್ತು!
ಅಂದು ಇಡೀ’ ಹಳ್ಳಿಗೆ ಹಳ್ಳಿಯೇ ಜಾಗರಣೆ ಇತ್ತು. ಹಳ್ಳಿಯ ಜನ ಒಂದೆಡೆ ಸೇರಲು ಅಲ್ಲಿ ಶಿವನೆಂಬ ದೇವರು ನೆಪವಾಗಿತ್ತಷ್ಟೆ. ಬೀದಿಗಳಲ್ಲಿ ಬಾಲಕಿಯರು, ತರುಣಿಯರು, ಗೃಹಿಣಿಯರು ರಂಗೋಲಿ ಬಿಡಿಸಿಟ್ಟರು. ಹಳ್ಳಿ ಸೇರುವ ಜಾಗದಲ್ಲಿ ನೆಟ್ಟ ಜಾರು ಕಂಬ ಏರಲು ಯುವಕರ ಪಡೆ ಪ್ರಯತ್ನಿಸಿ ಸೋಲುತ್ತಿತ್ತು. ಮಕ್ಕಳಿಗೆ ರಸಪ್ರಶ್ನೆ, ಮರ ಹತ್ತುವ ಸ್ಪರ್ಧೆ ಇತ್ತು.
ಬಹುಮಾನಗಳ ಝಲಕ್ ಇತ್ತು! ಉನ್ನತ ಶಿಕ್ಷಣ, ಉದ್ಯೋಗಕ್ಕೆಂದು ಹಳ್ಳಿಯಿಂದ ದೂರವಿರುವ ಹಲವರು ಈ ಕಾರ್ಯಕ್ರಮಕ್ಕೆಂದೇ ಬಂದು ಖುಷಿಪಟ್ಟಿದ್ದು ಮತ್ತೊಂದು ವಿಶೇಷವಾಗಿತ್ತು.
ಅಲ್ಲಿ ಸಾಮೂಹಿಕ ಆಟಗಳು ಶಿವಭಕ್ತಿಯನ್ನು ಮರೆಸಿದ್ದವು. 15ರಿಂದ 50 ವರ್ಷ ವಯಸ್ಸಿನ ಸುಮಾರು 25-30 ಮಹಿಳೆಯರು ಹಳ್ಳಿಯ ಗಾರೆ ರಸ್ತೆಯುದ್ದಕ್ಕೂ ರಂಗೋಲಿ ಚಿತ್ತಾರ ಬಿಡಿಸಿಸುವುದನ್ನು ನೋಡಲು ನೆರೆದವರ ಕಣ್ಣಗಳಲ್ಲಿ ಅಪರಿಮಿತ ಸಂತಸವಿತ್ತು. ನಿಂಬೆಹಣ್ಣುಳ್ಳ ಚಮಚವನ್ನು ಬಾಯಲಿಟ್ಟು ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಹಿಳೆಯರ ಸಂತಸ ಮೇರೆ ಮೀರಿತ್ತು.
ಮತ್ತೊಂದೆಡೆ, ಹೊಸದಾಗಿ ಕತ್ತರಿಸಿ ನೆಟ್ಟ 25 ಅಡಿಯ ನೀಲಿಗಿರಿ ಕಂಬಕ್ಕೆ ಗ್ರೀಸ್, ಎಣ್ಣೆ ಮೆತ್ತಲಾಗಿತ್ತು. ಬರೀ ಚಡ್ಡಿಯಲ್ಲಿ ಕಂಬವೇರುವವರ ಸಾಹಸ- ಜಾರುವಾಟವನ್ನು ನೋಡಲು ನೆರೆದವರ ಕಣ್ಣುಗಳಲ್ಲಿ ಕುತೂಹಲ ಮತ್ತು ತಮಾಷೆಯ ಜೋರು ನಗುವಿತ್ತು. ಸಣ್ಣ ಮೈಯವರು, ದಪ್ಪ ಹೊಟ್ಟೆಯವರೆಲ್ಲರೂ ನೆರೆದವರಿಗೆ ಭರ್ತಿ ಮನರಂಜನೆ ಕೊಟ್ಟರು. 5-10ನೇ ತರಗತಿಯವರು ಮತ್ತು 10ನೇ ತರಗತಿ ಮೇಲ್ಪಟ್ಟವರಿಗೆಂದೇ ರಸಪ್ರಶ್ನೆ ಸ್ಪರ್ಧೆಯೂ ಇತ್ತು. ಎಲ್ಲರಿಗೂ ಮನೆಬಳಕೆಯ ವಸ್ತುಗಳನ್ನು ಬಹುಮಾನವಾಗಿ ಕೊಟ್ಟಿದ್ದು ಗಮನ ಸೆಳೆಯಿತು. ಒಟ್ಟಾರೆ ಇಡೀ ಶಿವರಾತ್ರಿಯ ಜಾಗರಣೆ ಎಂಬುದು ಮಂಗಸಂದ್ರದ ನಿವಾಸಿಗಳಿಗೆ ಮರೆಯಲಾಗದ ನೆನಪುಗಳನ್ನು ಕೊಟ್ಟಿತ್ತು.
‘ಜಾಗತೀಕರಣದ ದಟ್ಟ ಪ್ರಭಾವದ ನೆರಳಲ್ಲಿ ಯಾಂತ್ರಿಕ ಜೀವನ ನಡೆಸುತ್ತಿರುವ ಕಾಲದಲ್ಲಿ, ನಮ್ಮ ಹಳ್ಳಿಯ ಜನ ಶಿವರಾತ್ರಿ ಜಾಗರಣೆ ನೆಪದಲ್ಲಿ ಎಲ್ಲ ಭೇದ ಮರೆತು ಒಟ್ಟಾಗಿದ್ದು ಅಪರಿಮಿತ ಖುಷಿ ತಂದಿತು’ ಎನ್ನುತ್ತಾರೆ ಗ್ರಾಮದ ಯುವಕ ನಾ.ನವೀನಕುಮಾರ. ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ದ್ವಿತೀಯ ಎಂ.ಎ ಓದುತ್ತಿರುವ ಅವರು ಈ ಜಾಗರಣೆಯಲ್ಲಿ ಪಾಲ್ಗೊಳ್ಳಲೆಂದೇ ಮೈಸೂರಿನಿಂದ ಬಂದಿದ್ದರು!
‘ಹಿಂದೆ ಹಬ್ಬವೆಂದರೆ ಎರಡು ಮೂರು ದಿನದ ಸಡಗರ. ಆದರೆ ಈಗ ಹಬ್ಬಗಳ ಅರ್ಥ ನಶಿಸುತ್ತಿದೆ. ಹಬ್ಬಗಳಿಗೆ ಸಮುದಾಯದ ಜೀವಧಾರೆ ಬೇಕಾಗಿದೆ. ಅದಕ್ಕೆ, ಈ ರೀತಿಯ ಕಾರ್ಯಕ್ರಮ ಮುಖ್ಯ. ಜನ ಭೇದ-ಭಾವ ಮರೆತು ಸಂತೋಷದಿಂದ ಕೊಂಚ ಕಾಲ ಕಳೆಯುವಂತಾದರೆ ಯಾವುದೇ ಹಬ್ಬಕ್ಕೆ ವಿಶೇಷ ಮೆರುಗು ಬರುತ್ತದೆ.ಪ್ರತಿ ಹಳ್ಳಿಯಲ್ಲೂ ಇಂಥ ಕಾರ್ಯಕ್ರಮಗಳು ನಡೆಯಬೇಕಾಗಿದೆ’ ಎಂಬುದು ಗ್ರಾಮದ ಮತ್ತೊಬ್ಬ ಯುವಕ ಎಂ.ಆನಂದ್ ಅವರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.