ಕೋಲಾರ: ಹಲವು ತಿಂಗಳಿಂದ ಕಾದು ಬಳಲಿದ್ದ ಜಿಲ್ಲೆಗೆ ಭರಣಿ ಮಳೆಯ ಪ್ರವೇಶವಾಗಿದೆ. ಮಂಗಳವಾರ ಸಂಜೆಯಿಂದಲೇ ಗುಡುಗು, ಆಲಿಕಲ್ಲು, ಬಿರುಗಾಳಿ ಜೊತೆಗೆ ಬಂದ ಮಳೆ ಸ್ವಲ್ಪ ಮಟ್ಟಿಗೆ ಸಂತಸದಾಯಕವಾಗಿದ್ದರೂ, ರೈತರು, ಬೆಳೆಗಾರರಿಗೆ ಕಷ್ಟವನ್ನೇ ತಂದಿದೆ.
ನಗರದ ತಗ್ಗಿನ ಪ್ರದೇಶದಲ್ಲಿದ್ದವರ ಮನೆಗಳಿಗೆ ನೀರ ನುಗ್ಗಿ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಯ ಮೇಲ್ಛಾವಣಿಗಳು ಹಾರಿಹೋಗಿ ನಾಲ್ವರು ಗಾಯಗೊಂಡಿರುವ ಘಟನೆಯೂ ನಡೆದಿದೆ. ಬುಧವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಬಂಗಾರಪೇಟೆ, ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ಜೋರು ಮಳೆ ಸುರಿದಿದೆ.
ಮಂಗಳವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಜಿಲ್ಲೆಯ ಅಲ್ಲಲ್ಲಿ ನಷ್ಟವನ್ನು ಸೃಷ್ಟಿಸಿದೆ. ತಾಲ್ಲೂ ಕಿನ ಕೆಂಚಾಪುರದಲ್ಲಿ 5 ಎಕೆರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ ನೆಲಕಚ್ಚಿದೆ.
ಟೊಮೆಟೊ ಬೆಳೆಯೂ ಹಾನಿಯಾಗಿದೆ. ಮುಳಬಾಗಲು ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಮಾವು ಉದುರಿದ್ದು ಅಪಾರ ನಷ್ಟ ಸಂಭವಿಸಿದೆ. ಬಂಗಾರಪೇಟೆ ಪಟ್ಟಣದ ಹಲವೆಡೆ ತಗ್ಗುಪ್ರದೇಶದಮನೆಗಳಿಗೆ ನೀರು ನುಗ್ಗಿದೆ. ವಟ್ರಕುಂಟೆಯಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಮನೆಯ ಮೇಲ್ಛಾವಣಿಗಳು ಹಾರಿಹೋಗಿ ನಾಲ್ವರು ಗಾಯಗೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಸಂಜೆ ಜೋರುಗಾಳಿ ಬೀಸಿ ಮಳೆ ಸುರಿಯುವ ಸನ್ನಿವೇಶ ನಿರ್ಮಾಣವಾಗಿತ್ತು. ಆದರೆ ನಾಲ್ಕಾರು ಹನಿ ಬಿತ್ತಷ್ಟೆ. ಹೊರವಲಯದ ಟಮಕದ ಸುತ್ತಮುತ್ತ ನೆಲ ನೆನೆಯುವಷ್ಟು ಮಾತ್ರ ಮಳೆ ಸುರಿದಿತ್ತು. ಆದರೆ ಬುಧವಾರ ಮಧ್ಯಾಹ್ನ 2.30ಯಿಂದ ಸುಮಾರು ಒಂದೂವರೆ ಗಂಟೆಕಾಲ ಜೋರು ಮಳೆ ಸತತವಾಗಿ ಸುರಿಯಿತು. ಪರಿಣಾಮವಾಗಿ ಚರಂಡಿಗಳು ಉಕ್ಕಿ ಹರಿದವು. ಮಣ್ಣಿನ ರಸ್ತೆಯಲ್ಲಿದ್ದ ಹಳ್ಳಗಳಲ್ಲಿ ನೀರು ತುಂಬಿತ್ತು. ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಬಂಗಾರಪೇಟೆ ವರದಿ: ತಾಲ್ಲೂಕಿನ ವಟ್ರಕುಂಟೆಯಲ್ಲಿ ಬಿದ್ದ ಮೊದಲ ಮಳೆ ರಭಸವಾದ ಗಾಳಿಯಿಂದ ಕೂಡಿದ್ದು ಊರ ಮಧ್ಯದಲ್ಲಿರುವ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಗಾಳಿಯ ರಭಸಕ್ಕೆ ಊರಿನ ಗ್ರಾಮಸ್ಥ ನನ್ನಾಸಾಬ್ ಎಂಬುವವರ ಮನೆ ಸೇರಿದಂತೆ ಮೂರು ಮನೆಗಳ ಛಾವಣಿಗೆ ಹಾಕಲಾಗಿದ್ದ ಶೀಟುಗಳು ಕಿತ್ತು ಹೋಗಿವೆ.
ನಾಲ್ವರಿಗೆ ಗಾಯಗಳಾಗಿವೆ. ಘಟನೆ ಹಿನ್ನೆಲೆಯಲ್ಲಿ ಶಾಸಕ ಎಂ.ನಾರಾಯಣಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಸಾಂತ್ವನ ಹೇಳಿದರು. ವಟ್ರಕುಂಟೆ ಪಕ್ಕದ ಹನುಮಂತನ ದಿನ್ನೆ ಗ್ರಾಮದಲ್ಲಿಯೂ ಸಹ ಗಾಳಿಯ ರಭಸಕ್ಕೆ ರೈತರೊಬ್ಬರ ಮನೆಯ ಛಾವಣಿ ಹಾಳಾಗಿದೆ. ಅದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಶಾಸಕರನ್ನು ಆಗ್ರಹಿಸಿದರು.
ಸ್ಪಂದಿಸಿದ ಶಾಸಕರು, ಒಂದು ವಾರದೊಳಗೆ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗಾಯಾಳುಗಳಿಗೆ ತಲಾ 2 ಸಾವಿರ ರೂಪಾಯಿ ವಿತರಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ್ ಮತ್ತು ಬೆಸ್ಕಾಂ ಬೆಸ್ಕಾಂ ಎಇಇ ಲಕ್ಷ್ಮೀನಾರಾಯಣಮೂರ್ತಿ ಉಪಸ್ಥಿತರಿದ್ದರು.
ಮನೆಗೆ ನೀರು: ಪಟ್ಟಣದಲ್ಲಿ ಬುಧವಾರ ಬಿದ್ದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮಧ್ಯಾಹ್ನ 2 ಗಂಟೆಯಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಒಂದೇ ಸಮನೆ ಸುರಿದ ಆಲಿಕಲ್ಲು ಸಹಿತ ಮಳೆ ನಾಗರಿಕರಿಗೆ ಸಂತಸ ಉಂಟು ಮಾಡಿತು.
ಮಳೆಯ ರಭಸಕ್ಕೆ ಬಿದ್ದ ಆಲಿಕಲ್ಲುಗಳನ್ನು ಆರಿಸಿಕೊಳ್ಳಲು ಮಕ್ಕಳು ಮಳೆಯಲ್ಲಿಯೇ ನುಗ್ಗುತ್ತಿದ್ದ ದೃಶ್ಯ ಕಂಡು ಬಂದವು.
ವಿಜಯನಗರದ ಶ್ರೀನಿವಾಸಗೌಡ ಬಡಾವಣೆ, ಸೇಟ್‌ಕಾಂಪೌಂಡ್ ಮೊದಲಾದ ತಗ್ಗು ಪ್ರದೇಶದಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದೆ. ಅನಿರೀಕ್ಷಿತವಾಗಿ ಬಿದ್ದ ಮಳೆ ಯಿಂದಾಗಿ ಅಲ್ಲಿನ ನಾಗರಿಕರು ಕಕ್ಕಾಬಿಕ್ಕಿಯಾಗಿ ಮನೆ ಯಲ್ಲಿದ್ದ ಸಾಮಾನುಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡು ತ್ತಿದ್ದರು. ದೊಡ್ಡಕೆರೆ ಕೋಡಿ ಹಳ್ಳದಲ್ಲಿ ಬಿರುಸಿನಿಂದ ನೀರು ಹರಿದು ಕೊಪ್ಪದ ಕೆರೆಗೆ ಸಾಗುತ್ತಿತ್ತು.
ಮುಳಬಾಗಲು ವರದಿ: ಮಳೆಯ ನಿರೀಕ್ಷೆಯಲ್ಲಿದ್ದ ತಾಲ್ಲೂಕಿನ ರೈತರಿಗೆ ಮಂಗಳವಾರ ಸಂಜೆ ಬರಸಿಡಿಲು ಬಡಿದಂತಾಗಿದೆ. ಹಲವು ತಿಂಗಳಿಂದ ಕಾಪಾಡಿಕೊಂಡು ಬಂದಿದ್ದ ಮಾವಿನ ಬೆಳೆ ಬಿರುಗಾಳಿಯಿಂದಾಗಿ ಧರೆಗೆ ಬಿದ್ದು ಸಾವಿರಾರು ಟನ್‌ಗಳ ಬೆಳೆ ನಷ್ಟವಾಗಿದೆ.
ತಾಲ್ಲೂಕಿನ ದುಗ್ಗಸಂದ್ರ ಹೋಬಳಿಯ ಕುರುಡುಮಲೆ, ಅರಹಳ್ಳಿ, ಚಾಕೇತಿಮ್ಮನಳ್ಳಿ,ಚಿಕ್ಕನಹಳ್ಳಿ, ಬಿಸನಹಳ್ಳಿ ಹಾಗೂ ಶ್ರೀನಿವಾಸಪುರ ಗಡಿ ಭಾಗದ ಅಗರ ಮುಂತಾದ ಸುತ್ತಮುತ್ತಲ ಗ್ರಾಮಗಳಲ್ಲಿ ಕಟಾವಿಗೆ ಸಿದ್ಧವಾದ ಮಾವು ಹಾನಿಯಾಗಿದೆ. ಸುಮಾರು 10ರೂ ಲಕ್ಷ ಮೌಲ್ಯದ 1200 ಟನ್ ಬೆಳೆ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.
ತಮ್ಮ ತೋಟದಲ್ಲಿ 6 ಟನ್ ಮಾವಿನ ಬೆಳೆ ನೆಲಕ್ಕುರುಳಿದೆ ಎನ್ನುತ್ತಾರೆ ತಾಲ್ಲೂಕಿನ ಅರಹಳ್ಳಿ ಗ್ರಾಮದ ಎ.ವಿ.ಶ್ರೀನಿ ವಾಸಗೌಡ. ದಿನಪೂರ್ತಿ ಕೆಲಸದವರ ಸಹಾಯದಿಂದ ನೆಲಕ್ಕೆ ಬಿದ್ದ ಮಾವಿನ ಮರಗಳನ್ನು ಹೊರಹಾಕಲಾಗಿದೆ ಎಂದು ಅವರು ತಿಳಿಸಿದರು.
ನಿವೃತ್ತ ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ವೆಂಕಟಪ್ಪ ಅವರ ಸುಮಾರು 20 ಎಕರೆಗೂ ಹೆಚ್ಚಿನ ಮಾವಿನ ತೋಪಿ ನಲ್ಲಿ ಅರ್ಧಭಾಗ ನಷ್ಟವಾಗಿದೆ.
ಸುಮಾರು ನೂರಕ್ಕೂ ಹೆಚ್ಚಿನ ಮಾವಿನ ಬೆಳೆಗಾರರು ನಷ್ಟ ಪರಿಹಾರಕ್ಕೆ ನಷ್ಟವಾಗಿರುವ ಫಸಲಿನ ಪೋಟೊದೊಂದಿದೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸರ್ಕಾರ ಕೊಡುವ ಹಣ ಸಾಲದು ಎನ್ನುತ್ತಾರೆ ಅವರು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಶೀಘ್ರ ಸ್ಥಳಕ್ಕೆ ಬಂದು ಅಧಿಕೃತವಾಗಿ ಮಾವಿನ ಫಸಲಿನ ನಷ್ಟವನ್ನು ಅಂದಾಜಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.