ADVERTISEMENT

ಎಲ್ಲೆಲ್ಲೂ ಹೊಲಸೊಪ್ಪಿನ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:35 IST
Last Updated 10 ಸೆಪ್ಟೆಂಬರ್ 2011, 10:35 IST

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಈಗ ಹೊಲ ಸೊಪ್ಪಿನ ಸುಗ್ಗಿ. ಮಾರುಕಟ್ಟೆಗೆ ಬರುವ ಈ ನೈಸರ್ಗಿಕ ಸೊಪ್ಪುಗಳು ಸೊಪ್ಪು ಪ್ರಿಯರ ಬಾಯಲ್ಲಿ ನೀರೂರಿಸು ತ್ತಿವೆ. ಕೆಲವು ಮಹಿಳೆಯರು ಮನೆ ಮನೆಗೆ ಸೊಪ್ಪನ್ನು ಕೊಂಡೊಯ್ದು ಮಾರಿ ಜೀವನ ನಿರ್ವಹಿಸುತ್ತಿದ್ದಾರೆ.

ಹೊಲ ಸೊಪ್ಪು ಎಂದರೆ ಬೆರಕೆ ಸೊಪ್ಪು. ಸಾಮಾನ್ಯ ವಾಗಿ ಬೆಳೆಯುವ ದಂಟು ಸೊಪ್ಪಗಿಂತ ಭಿನ್ನವಾದ ರುಚಿ ಯನ್ನು ಹೊಂದಿರುವ ಹೊಲ ಸೊಪ್ಪು ಈ ಕಾಲದಲ್ಲಿ ಮಾತ್ರ ಸಿಗುತ್ತದೆ.

ವಿಶೇಷವಾಗಿ ಸಾಂಪ್ರದಾಯಿಕ ರಾಗಿ ಹೊಲಗಳಲ್ಲಿ ಈ ಸೊಪ್ಪುಗಳು ಕಂಡುಬರುತ್ತವೆ. ಸಂಚಿಲಿ ಸೊಪ್ಪು, ಬದ್ದಿ ಸೊಪ್ಪು, ನಸೆ ಸೊಪ್ಪು, ಗುರುಗ ಸೊಪ್ಪು, ಚಿಲಿಸೊಪ್ಪು ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಹೊಲ ಸೊಪ್ಪುಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಗ್ರಾಮೀಣ ಪ್ರದೇಶದಲ್ಲಿ ಹೊಲಗಳಲ್ಲಿ ಕಳೆ ತೆಗೆಯುವ ಕಾಲ ಬಂದರೆ ಹೊಲಸೊಪ್ಪಿನ ಸಾರೇ ಪ್ರಧಾನ. ಹುಳಿಸೊಪ್ಪಾಗಲಿ, ಬಸ್ಸಾರಾಗಲಿ ಹೊಲಸೊಪ್ಪಿನ ಘಮಲು ಸಾಮಾನ್ಯ. ಕಳೆ ತೆಗೆಯುವ ಮಹಿಳೆಯರು ಸಂಜೆ ಮನೆಗೆ ಹಿಂದಿರುಗುವಾಗ ಹೊಲದಲ್ಲಿ ಸಂಗ್ರಹಿಸಿದ ಸೊಪ್ಪನ್ನು ತರುವುದು ಹಿಂದಿನಿಂದಲೂ ನಡೆದು ಬಂದಿರುವ ರೂಢಿ.

ತಾಲ್ಲೂಕಿನಲ್ಲಿ ಆವಲಕುಪ್ಪ, ನಾಗದೇನಹಳ್ಳಿ ಮತ್ತು ಸುತ್ತಮುತ್ತಲಿನ ಕೆಲವು ಗ್ರಾಮಗಳು ಹೊಲ ಸೊಪ್ಪಿಗೆ ಪ್ರಸಿದ್ಧಿ ಪಡೆದಿವೆ. ಆ ಗ್ರಾಮಗಳ ಸುತ್ತಮುತ್ತಲಿನ ಜಮೀನಲ್ಲಿ ಬೆಳೆಯುವ ಸೊಪ್ಪು ಹೆಚ್ಚು ರುಚಿ ಎಂಬ ನಂಬಿಕೆ ಇದೆ. ಆದ್ದರಿಂದ ಆ ಗ್ರಾಮಗಳ ಸೊಪ್ಟಾದರೆ ಕಟ್ಟಿನ ಮೇಲೆ ಇನ್ನೂ ಒಂದೆರಡು ರೂ. ಹೆಚ್ಚಾಗಿ ಕೊಡಲು ಜನ ಹಿಂದೆ ಮುಂದೆ ನೋಡುವುದಿಲ್ಲ. ಮಧ್ಯವರ್ತಿಗಳು ಬೇರೆ ಕಡೆಯ ಸೊಪ್ಪನ್ನು ಖರೀದಿಸಿ, ಆ ಗ್ರಾಮಗಳ ಹೆಸರು ಹೇಳಿ ಹೆಚ್ಚಿನ ಬೆಲೆಗೆ ಮಾರುವುದೂ ಉಂಟು.

ಗ್ರಾಮೀಣ ಪ್ರದೇಶದಲ್ಲಿ ಹೊಲಸೊಪ್ಪಿನ ಬಗ್ಗೆ ಜಾನಪದ ಗೀತೆಗಳೂ ಹಾಡಲ್ಪಡುತ್ತವೆ. ಹೊಲಗಳಲ್ಲಿ ಸೊಪ್ಪನ್ನು ಕೀಳುತ್ತಾ ಆ ಹಾಡುಗಳನ್ನು ಹಾಡುವುದುಂಟು. ಅವುಗಳಲ್ಲಿ ಹೊಲಸೊಪ್ಪುಗಳಲ್ಲಿ ಯಾವುದು ಉತ್ಕೃಷ್ಟ, ಯಾವುದು ಹೆಚ್ಚು ರುಚಿ ಎಂಬ ಮಾಹಿತಿ ಇದೆ. ಜಾನಪದ ಗೀತೆಗಳಲ್ಲಿ ಬದ್ದಿಸೊಪ್ಪಿಗೆ ಹೆಚ್ಚಿನ ಮಾನ್ಯತೆ ನೀಡಿದ್ದರೆ, ಗುರುಗ ಸೊಪ್ಪಿಗೆ ಕೊನೆ ಸ್ಥಾನವನ್ನು ಕೊಡಲಾಗಿದೆ. ಸಂಚಿಲಿ ಸೊಪ್ಪು ದ್ವಿತೀಯ ಸ್ಥಾನದಲ್ಲಿದೆ. ಉಳಿದ ಸೊಪ್ಪುಗಳು ಸಾಮಾನ್ಯ ಸ್ಥಾನಕ್ಕೆ ತಳ್ಳಲ್ಪಟ್ಟಿವೆ.

ಈ ಕಾಲದಲ್ಲಿ ಮಾತ್ರ ಹೆಚ್ಚಾಗಿ ಸಿಗುವ ನಸೆ ಸೊಪ್ಪನ್ನು ಹುಳಿ ಸೊಪ್ಪು ಮಾಡಿ ಸವಿಯುತ್ತಾರೆ. ಅದರ ಗಡ್ಡೆಯನ್ನು ಅಗೆದು ಸಂಸ್ಕೃರಿಸಿ ರುಚಿಯಾದ ಕಡಬನ್ನು ಮಾಡಿ ತಿನ್ನುವುದು ಗ್ರಾಮೀಣ ಪ್ರದೇಶದಲ್ಲಿ ಒಂದು ವಿಶೇಷ. ಇವಷ್ಟೇ ಅಲ್ಲದೆ ಕೆರೆಗಳಲ್ಲಿ ದೊರೆಯುವ ನಾಟಿ ಮೀನು ಸೊಪ್ಪಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಕೆರೆಗಳ ನಾಶದೊಂದಿಗೆ ಮೀನು ಸೊಪ್ಪಿಗೆ ಸಂಚಕಾರ ಬಂದಿದೆ. ಅದರೊಂದಿಗೆ ಕೆರೆಯ ಇನ್ನೊಂದು ಉತ್ಪನ್ನವಾದ ಗೊಟ್ಟಿಗಡ್ಡೆ ಸಿಗುವುದು ಅಪರೂಪವಾಗುತ್ತಿದೆ.

ಸಾಂಪ್ರದಾಯಿಕ ಹೊಲ ಪದ್ದತಿ ನೇಪಥ್ಯಕ್ಕೆ ಸರಿಯುತ್ತಿದ್ದಂತೆ ಹೊಲ ಸೊಪ್ಪುಗಳ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ. ಕಳೆ ನಾಶಕಗಳ ಬಳಕೆ ಹೆಚ್ಚಿದಂತೆ ಅವುಗಳ ಅಸ್ತಿತ್ವಕ್ಕೆ ಕುತ್ತು ಬಂದಿದೆ. ರೈತರು ಈ ಹೊಲ ಸೊಪ್ಪಿನ ಬೀಜವನ್ನು ಸಂಗ್ರಹಿಸಿ ಬಿತ್ತುವುದಿಲ್ಲ. ಇದು ಅವುಗಳ ವಿನಾಶಕ್ಕೆ ದಾರಿಮಾಡಿಕೊಟ್ಟಿದೆ. ಹೈಬ್ರೀಡ್ ಸೊಪ್ಪುಗಳ ಭರಾಟೆಯ ನಡುವೆ ಹೆಚ್ಚು ರುಚಿಕರವಾದ ನೈಸರ್ಗಿಕ ಸೊಪ್ಪುಗಳಿಗೆ ಹಿನ್ನಡೆ ಉಂಟಾಗಿರುವುದು ವಿಷಾದದ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.