ADVERTISEMENT

ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 8:20 IST
Last Updated 22 ಜನವರಿ 2011, 8:20 IST

ಕೋಲಾರ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಮಟ್ಟ ಹೆಚ್ಚಿಸುವ ಸಲುವಾಗಿ ವಿಶೇಷ ಪ್ರಯತ್ನ ಕೈಗೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ನಡೆದ ಮೊದಲ ಪೂರ್ವಭಾವಿ ಪರೀಕ್ಷೆಯಲ್ಲಿ ಮಾಲೂರು, ಬಂಗಾರಪೇಟೆ ತಾಲ್ಲೂಕಿನ ಶಾಲೆಗಳು ಅತಿ ಕಡಿಮೆ ಫಲಿತಾಂಶ ಪಡೆದಿವೆ.

ಪರೀಕ್ಷೆ ಎದುರಿಸಿದ ಜಿಲ್ಲೆಯ 21,820 ವಿದ್ಯಾರ್ಥಿಗಳ ಪೈಕಿ 11,817 ಮಂದಿ ಮಾತ್ರ ಉತ್ತೀರ್ಣರಾಗಿದ್ದು, ಶೇ 54.16ರಷ್ಟು ಫಲಿತಾಂಶ ದೊರೆತಿದೆ. ಶ್ರೀನಿವಾಸಪುರ ಮೊದಲ ಸ್ಥಾನ-ಶೇ 74.63, ಮುಳಬಾಗಲು ದ್ವಿತೀಯ ಸ್ಥಾನ, 59.96, ಕೋಲಾರ-ಶೇ 59.68, ಕೆಜಿಎಫ್-ಶೇ 50.54 ಪಡೆದರೆ, ಮಾಲೂರು- ಶೇ.35.73 ಪಡೆದು ಕೊನೆ ಸ್ಥಾನಗಳಿಸಿದೆ.ನಂತರ ಸ್ಥಾನವನ್ನು ಬಂಗಾರಪೇಟೆ ಶೇ.39.29 ಗಳಿಸಿದೆ.

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮುಖ್ಯಶಿಕ್ಷಕರ 5ನೇ ಸಭೆಯಲ್ಲಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್ ಅವರು ಪವರ್‌ಪಾಯಿಂಟ್ ಮೂಲಕ ತಾಲ್ಲೂಕುವಾರು ಪ್ರಗತಿ ವಿಶ್ಲೇಷಿಸುವ ಸಂದರ್ಭದಲ್ಲಿ ಈ ಅಂಶ ವಿವರಿಸಿದರು.

ಕ್ರಮ ವಹಿಸಿ: ನಂತರ ಮಾತನಾಡಿದ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ, ಬಂಗಾರಪೇಟೆ ಮತ್ತು ಮಾಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯಶಿಕ್ಷಕರು ಫಲಿತಾಂಶ ಉತ್ತಮಗೊಳಿಸುವಲ್ಲಿ ವಿಶೇಷ ಪ್ರಯತ್ನ ನಡೆಸಿ ಎಂದು ಸೂಚಿಸಿದರು.

ಕಳೆದ ಸಾಲಿನ ಮುಖ್ಯ ಪರೀಕ್ಷೆಯಲ್ಲಿ 8 ಸಾವಿರ ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಈಗ ನಡೆಸಿರುವ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ 10 ಸಾವಿರ ಮಕ್ಕಳು ಫೇಲಾಗಿರುವುದು ಗಂಭೀರವಾದ ವಿಷಯ. ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರದೆ ಅವರ ನೈತಿಕ ಶಕ್ತಿ ಹೆಚ್ಚಿಸಲು ಯತ್ನಿಸಿ. ಪರೀಕ್ಷೆಯಲ್ಲಿ ಅಕ್ರಮಗಳಿಗೆ ಅವಕಾಶ ನೀಡಬಾರದು. ಅಕ್ರಮ ನಡೆಸಿ ಉತ್ತಮ ಫಲಿತಾಂಶ ಪಡೆಯುವುದು ಬೇಕಿಲ್ಲ ಎಂದು ನುಡಿದರು.

3ನೇ ಸ್ಥಾನಕ್ಕೆ ತನ್ನಿ: ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆ 30ನೇ ಸ್ಥಾನದಲ್ಲಿದೆ. ಅದನ್ನು 3ನೇ ಸ್ಥಾನಕ್ಕೆ ತರಬೇಕು. ಶಿಕ್ಷಕ-ಅಧಿಕಾರಿಗಳ ನಡುವೆ ಗೌರವ ಭಾವನೆ ಇರಬೇಕು. ಇಲಾಖೆಯ ಅಧಿಕಾರಿಗಳು ಕಡತ ಬಾಕಿ ಉಳಿಸಿಕೊಂಡು ಶಿಕ್ಷಕರನ್ನು ಕಚೇರಿಗೆ ಅಲೆದಾಡಿಸಬಾರದು. ಜಿಲ್ಲಾಧಿಕಾರಿಗಳು ಆ ಕಡೆಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿ ವೇತನ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿನಿಯರಿಗೆ ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿ ವೇತನದ ಚೆಕ್ ವಿತರಿಸಲಾಯಿತು. 30.20ಲಕ್ಷ ರೂಪಾಯಿ ಮಂಜೂರಾಗಿದ್ದು, ಇಲಾಖೆಯೇ ವಿದ್ಯಾರ್ಥಿಗಳ ಹೆಸರಿಗೆ ಚೆಕ್ ನೀಡಿದೆ. ಶೀಘ್ರದಲ್ಲೆ ಎಲ್ಲರಿಗೂ ವಿತರಿಸಲಾಗುವುದು ಎಂದು ಇಲಾಖೆ ಉಪ ನಿರ್ದೇಶಕ ಪ್ರಹ್ಲಾದಗೌಡ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ,  ಎಲ್ಲ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, 75 ಶಾಲೆಗಳ ಮುಖ್ಯಶಿಕ್ಷಕರು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ತಾಲ್ಲೂಕು ಮಟ್ಟದಲ್ಲಿ ಫಲಿತಾಂಶದ ಕುರಿತು ಚರ್ಚೆ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.