ADVERTISEMENT

ಕನ್ನಡ ಸೊಗಡು ಹರಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:28 IST
Last Updated 17 ಡಿಸೆಂಬರ್ 2012, 6:28 IST

ಶ್ರೀನಿವಾಸಪುರ: ಕನ್ನಡ ಪರ ಸಂಘ ಸಂಸ್ಥೆಗಳು ಅನ್ಯ ಭಾಷೆಗಳ ಪ್ರಭಾವ ಇರುವ ಗಡಿ ಪ್ರದೇಶದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕನ್ನಡದ ಸೊಗಡು ಹರಡಬೇಕು ಎಂದು ಬಿಜೆಪಿ ಮುಖಂಡ ಇ.ಶಿವಣ್ಣ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಪ್ರಾಂತೀಯ ದಲಿತ ಹೋರಾಟ ಸಮಿತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಕನ್ನಡ ಗೀತೆಗಳ ಗಾಯನ, ಪ್ರಬಂಧ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು.

ಕನ್ನಡ ಸಾಹಿತ್ಯದ ಕಡೆಗೆ ಅವರ ಮನಸ್ಸನ್ನು ಸೆಳೆಯಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸುವಂತೆ ಮನವೊಲಿಸಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಜೆ.ನಾಗರಾಜ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ. ಅದನ್ನು ನಾಡಿನ ಎಲ್ಲರೂ ಸೇರಿ ಮುಂದುವರಿಸಿಕೊಂಡು ಹೋಗಬೇಕು. ಅದರಲ್ಲೂ ಗಡಿ ಭಾಗದ ಜನ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ವಿದ್ಯಾವಂತ ಸಮುದಾಯ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನಲ್ಲಿ ಈಗ ಕನ್ನಡ ವಾತಾವರಣ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದಲ್ಲೂ ವಿದ್ಯಾವಂತ ಪೋಷಕರು ತಮ್ಮ ಮಕ್ಕಳನ್ನು ಕನ್ನಡದಲ್ಲಿ ಮಾತನಾಡಿಸುತ್ತಿದ್ದಾರೆ. ಅದು ಇನ್ನಷ್ಟು ವಿಸ್ತಾರಗೊಳ್ಳಬೇಕು. ಕನ್ನಡ ಭಾಷೆ ಬಗ್ಗೆ ಅಭಿಮಾನ ಇದ್ದರೆ ಸಾಲದು, ನಾಲಗೆ ಮೇಲೆ ನಲಿದಾಡಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಾಂತೀಯ ದಲಿತ ಹೋರಾಟ ಸಮಿತಿ ಅಧ್ಯಕ್ಷ ಕೆ.ಪಿ.ನರಸಿಂಹಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸನ್ನಕುಮಾರ್, ಡಾ.ಎಂ.ನರಸಿಂಹಮೂರ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ರವಿಕುಮಾರ್, ಮುಖಂಡ ಮಂಜಲನಗರ ನಾರಾಯಣಸ್ವಾಮಿ, ಪುರಸಭಾ ಸದಸ್ಯ ಜಿ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.