ADVERTISEMENT

ಕಮರುತಿದೆ ಕಮ್ಮಸಂದ್ರದ ಕುಂಟೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 5:05 IST
Last Updated 15 ನವೆಂಬರ್ 2012, 5:05 IST

ಕೆಜಿಎಫ್: ಏಳು ವರ್ಷದ ನಂತರ ಬಿದ್ದ ಮಳೆಯಿಂದ ನಗರದ ಸುತ್ತಮುತ್ತಲಿನ ಸಣ್ಣಪುಟ್ಟ ಕೆರೆಗಳು ಹಾಗೂ ಕುಂಟೆಗಳು ತುಂಬಿದ್ದವು. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೈಗೊಂಡ ತಪ್ಪು ನಿರ್ಧಾರದಿಂದ ಸಾಕಷ್ಟು ಜೀವಜಲ ಈ ಗ್ರಾಮದಲ್ಲಿ ವ್ಯರ್ಥವಾಗಿದೆ.

ಬೃಹತ್ ಲಿಂಗ ಸೇರಿದಂತೆ ಕೋಟಿ ಲಿಂಗಗಳ ದರ್ಶನಕ್ಕೆ ಪ್ರಸಿದ್ಧಿಯಾದ ಕಮ್ಮಸಂದ್ರ ಗ್ರಾಮದ ಬೃಹತ್ ಕುಂಟೆಯೊಂದರಲ್ಲಿ ಅಕ್ರಮವಾಗಿ ನಿರ್ಮಿಸಿದ ಕಾಲುವೆಯಿಂದ ಶೇಖರಣೆಗೊಂಡಿದ್ದ ನೀರೆಲ್ಲವೂ ವ್ಯರ್ಥವಾಗಿ ಹರಿದುಹೋಗಿದೆ. ಇಷ್ಟಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದ ಕುಂಟೆಯನ್ನು ಉತ್ತಮ ಪುಷ್ಕರಣಿ ಮಾಡಬೇಕೆಂದು ಗ್ರಾಮಸ್ಥರು ಬಹಳ ದಿನದಿಂದ ಆಸೆ ಹೊತ್ತುಕೊಂಡಿದ್ದರು. ಗ್ರಾಮದಲ್ಲಿ ಈಗಾಗಲೇ ಇದ್ದ ಎರಡು ಪುಷ್ಕರಣಿಗಳ ಪೈಕಿ ಒಂದು ಕಾಣೆಯಾಗಿದ್ದು, ಅದರ ಬದಲಿಗೆ ಈ ಕುಂಟೆಯನ್ನೇ ಪುಷ್ಕರಣಿ ಮಾಡಬೇಕೆಂದು ನಿರ್ಧರಿಸಿದ್ದರು.

ಈ ನಿರ್ಧಾರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಸೇರಿದಂತೆ ಹಲವು ಸದಸ್ಯರು ಕೂಡ ಸಮ್ಮತಿ ಸೂಚಿಸಿದ್ದರು. ಆದರೆ ಅದನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಅಧಿಕಾರಿಗಳು ವಿಫಲರಾಗಿ ಮಣ್ಣು ಮಾಫಿಯಗಳ ಜೊತೆ ಶಾಮೀಲಾಗಿದ್ದಾರೆ ಎನ್ನುವುದು ಇಲ್ಲಿನ ಗ್ರಾಮಸ್ಥರ ಆರೋಪ.

ಈ ಗ್ರಾಮದ ಕುಂಟೆಯಲ್ಲಿ ಉತ್ತಮ ಬಿಳಿ ಮಣ್ಣು ಸಿಗುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮಣ್ಣಿಗೆ ಉತ್ತಮ ಬೇಡಿಕೆ ಇದೆ. ಅದಕ್ಕಾಗಿಯೇ ಮಣ್ಣಿನ ಅಕ್ರಮ ಸಾಗಣೆ ಕೆಲಸ ಬಹುದಿನಗಳಿಂದ ನಡೆಯುತ್ತಲೇ ಇದೆ. ಅದನ್ನು ಪಂಚಾಯಿತಿ ಅಧಿಕಾರಿಗಳು ಮೂಕರಾಗಿ ಗಮನಿಸುತ್ತಿದ್ದರು. ಈಚೆಗೆ ಜಿಲ್ಲಾಧಿಕಾರಿ ಅವರು ನೀರು ಸಂರಕ್ಷಿಸುವ ದೃಷ್ಟಿಯಿಂದ ಜಿಲ್ಲೆಯ ಎ್ಲ್ಲಲ ಪುಷ್ಕರಣಿಗಳನ್ನು ದುರಸ್ತಿ ಮಾಡಬೇಕು ಎಂದು ಸೂಚಿಸಿದ್ದರು. ಆದರೆ ನೀರಿರುವ ಪುಷ್ಕರಣಿಗಳಲ್ಲಿ ನೀರು ತೆಗೆದು ದುರಸ್ತಿ ಮಾಡುವುದು ಬೇಡ ಎಂದು ಹೇಳ್ದ್ದಿದನ್ನು ಇಲ್ಲಿ ಸ್ಮರಿಸಬಹುದು.

ಆದರೆ ವ್ಯತಿರಿಕ್ತವಾದ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಕಮ್ಮಸಂದ್ರ ಗ್ರಾಮ ಪಂಚಾಯಿತಿ  ಕುಂಟೆಯಲ್ಲಿ ಶೇಖರವಾಗಿದ್ದ ನೀರನ್ನು ಕಾಲುವೆ ತೆಗೆದು ಸಮೀಪದ ಜಮೀನುಗಳ ಮೂಲಕ ಹರಿದು ಹೋಗಲು ಅನುವು ಮಾಡಿಕೊಟ್ಟಿತು. ಅಲ್ಲದೆ ಕುಂಟೆಯ ವ್ಯಾಪ್ತಿಯನ್ನು ಕೂಡ ಕಡಿಮೆ ಮಾಡಲಾಯಿತು. ಕುಂಟೆಗೆ ಹರಿದು ಬರುತ್ತಿದ್ದ ನೀರಿನ ಮೂಲವನ್ನು ಕೂಡ ಬಂದ್ ಮಾಡಲಾಯಿತು.
 
ಇದರಿಂದ ಕುಂಟೆಯಲ್ಲಿ ನೀರಿನ ಶೇಖರಣಾ ಸಾಮರ್ಥ್ಯ ಕೂಡ ಕಡಿಮೆಯಾಯಿತು. ಒಮ್ಮೆ ತುಂಬಿದರೆ ಸುಮಾರು ಒಂದು ವರ್ಷವಾದರೂ ಸದಾ ನೀರಿನಿಂದ ತುಂಬಿರುತ್ತಿದ್ದ ಕುಂಟೆ ಈಗ ನೀರಿಲ್ಲದೆ ಒಣಗಿ ನಿಂತಿದೆ. ಸುತ್ತಮುತ್ತಲಿನ ಎ್ಲ್ಲಲ ಪ್ರದೇಶಗಳ ಕುಂಟೆಗಳು ನೀರಿನಿಂದ ಆವೃತವಾಗಿ ಅಂತರ್ಜಲ ಹೆಚ್ಚಿಸಲು ಕಾರಣವಾಗಿದ್ದರೆ, ಕಮ್ಮಸಂದ್ರದ ಕುಂಟೆ ಮಾತ್ರ ಬರಿದಾಗಿ ಮಣ್ಣು ಮಾಫಿಯಾಗಳಿಗೆ ನೆರವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕುಂಟೆಯನ್ನು ಅಭಿವೃದ್ಧಿ ಪಡಿಸಲು ಗ್ರಾಮದ ಜನತೆ ಶ್ರಮದಾನ ಮಾಡಿದ್ದರು. ಆದರೆ ಕುಂಟೆಯಲ್ಲಿದ ನೀರನ್ನು ಅಕ್ರಮವಾಗಿ ಹೊರಹಾಕಿದ್ದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಮಾರಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.