ADVERTISEMENT

ಕುಸ್ಮಾ ಬಂದ್‌ಗೆ ಬೆಂಬಲ: ಶಾಲೆ ರಜೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 9:50 IST
Last Updated 17 ಜುಲೈ 2012, 9:50 IST

ಬಂಗಾರಪೇಟೆ: ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ (ಕುಸ್ಮಾ) ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ತಾಲ್ಲೂಕಿನ ಎಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಬಂಗಾರಪೇಟೆ, ಬೂದಿಕೋಟೆಯಲ್ಲಿ ಬಂದ್‌ಗೆ ಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಶಾಲಾ ಮಕ್ಕಳು ಬೀದಿಗಳಲ್ಲಿ ಆಡುತ್ತಾ ಸಂಭ್ರಮಿಸುತ್ತಿದ್ದರು.

ಎರಡು ದಿನದಿಂದ ಬಹುತೇಕ ಸಮಯ ಜಿಟಿ-ಜಿಟಿ ಮಳೆ ಬೀಳುತ್ತಿದ್ದರಿಂದ ಶಾಲೆಗೆ ರಜೆ ಘೋಷಣೆ ಮಾಡಿದ್ದು ಮಕ್ಕಳಿಗೆ ವರವಾಗಿ ಪರಿಣಮಿಸಿತು. ಅನಿರೀಕ್ಷಿತವಾಗಿ ಸಿಕ್ಕ ರಜೆಯನ್ನು ಮಕ್ಕಳು ಸಂತಸದಿಂದ ಅನುಭವಿಸಿದರು. ಎರಡು ದಿನದಿಂದ ಶಾಲೆ ಇಲ್ಲದ ಕಾರಣ ಮಕ್ಕಳು ಪಟ್ಟಣದಲ್ಲಿ ಅಲ್ಲಲ್ಲಿ ಆಟವಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಎಲ್ಲಾ ಶಾಲೆಗಳು ಎರಡು ದಿನ ರಜೆ ಘೋಷಣೆ ಮಾಡಿದ್ದು, ಮೊದಲ ದಿನ ಎಲ್ಲಾ ಶಾಲೆಗಳು ಸಂಪೂರ್ಣವಾಗಿ ಬಂದ್ ಆಚರಿಸಿವೆ. ಎರಡನೇ ದಿನವಾದ ಮಂಗಳವಾರವೂ ಬಂದ್ ಮುಂದುವರಿಯಲಿದೆ ಎಂದು ಕುಸ್ಮಾ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಸತ್ತಾರ್ ತಿಳಿಸಿದ್ದಾರೆ.

ಆತುರದ ನಿರ್ಧಾರ: ಆಕ್ಷೇಪ
ಕೋಲಾರ: ಕರ್ನಾಟಕ  ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ಕುಸ್ಮಾ) ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ನ್ಯೂನ್ಯತೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಕರೆ ನೀಡಿದ್ದ ಒಂದು ವಾರಗಳ ಶಿಕ್ಷಣ ಸಂಸ್ಥೆಗಳ ಬಂದ್‌ಗೆ ಬಂಗಾರಪೇಟೆ ಹೊರತುಪಡಿಸಿ ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಕಂಡು ಬರಲಿಲ್ಲ.

ಸೋಮವಾರದಿಂದ ನೀಡಿರುವ ಎರಡು ದಿನದ ಬಂದ್ ಕರೆಗೆ ಬಂಗಾರಪೇಟೆ ತಾಲ್ಲೂಕಿನಾದ್ಯಂತ ಶಾಲೆಗಳು ಮುಚ್ಚಿದ್ದವು. ಬಂದ್ ಮಂಗಳವಾರಕ್ಕೂ ಮುಂದುವರಿಯಲಿದೆ. ಶ್ರೀನಿವಾಸಪುರ, ಮಾಲೂರು, ಕೋಲಾರ, ಮುಳಬಾಗಲು ತಾಲ್ಲೂಕಿನಲ್ಲಿ ಮತ್ತು ಕೆಜಿಎಫ್ ಶೈಕ್ಷಣಿಕ ವಲಯದಲ್ಲಿ ಬಂದ್ ನಡೆಸಲು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಒಲವು ತೋರಲಿಲ್ಲ.

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಈಗಷ್ಟೇ ಜಾರಿಗೆ ಬಂದಿದೆ. ಅದರ ಸಾಧಕ ಬಾಧಕ ಕುರಿತು ಇನ್ನೂ ಅಧ್ಯಯನ ನಡೆಸಬೇಕಾಗಿದೆ ಂದು ಶ್ರೀನಿವಾಸಪುರ ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿ ಗೋಪಾಲಗೌಡ ಹೇಳಿದ್ದಾರೆ.

ಕೆಜಿಎಫ್‌ನಲ್ಲಿ ಅಲ್ಪ ಸಂಖ್ಯಾತ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಅವುಗಳು ಬಂದ್‌ಗೆ ಸಹಕಾರ ನೀಡುವ ಸಂಭವ ಕಡಿಮೆ. ಕುಸ್ಮಾದ ಹೋರಾಟಕ್ಕೆ ಬೆಂಬಲ ಇದ್ದರೂ ಈಗಿನ ಪರಿಸ್ಥಿತಿಯಲ್ಲಿ ಶಾಲೆಗಳ ಬಂದ್ ಅವಶ್ಯಕತೆ ಇರಲಿಲ್ಲ ಎಂಬ ಕಾರಣದಿಂದ ಕೆಜಿಎಫ್ ವಲಯದಲ್ಲಿ ಬಂದ್ ಆಚರಣೆ ಮಾಡಲಿಲ್ಲ ಎಂದು ಖಾಸಗಿ ಶಾಲೆಗಳ ಸಂಸ್ಥೆಯ ಕಾರ್ಯದರ್ಶಿ ಗೋಪಿನಾಥ್ ತಿಳಿಸಿದರು.

ಜಿಲ್ಲೆಯ ಬಹುತೇಕ ತಾಲ್ಲೂಕುಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಬಂದ್ ತಕ್ಷಣಕ್ಕೆ ಅಗತ್ಯವಿಲ್ಲ. ಈಗಷ್ಟೇ ಶಾಲೆಗಳು ಪ್ರಾರಂಭವಾಗಿದೆ. ಇದೇ ಸಂದರ್ಭದಲ್ಲಿ ಬಂದ್ ನಡೆಸುವುದು ಬೇಡ ಎಂಬ ತೀರ್ಮಾನವನ್ನು ಹೇಳಿದ್ದರು. ಆದ್ದರಿಂದ ಬಂದ್ ಆಚರಣೆ ನಡೆಯಲಿಲ್ಲ ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುನಿಯಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.