ADVERTISEMENT

ಕೆಜಿಎಫ್: ಟ್ಯಾಂಕರ್ ನೀರೆ ಗತಿ!

ಕೃಷ್ಣಮೂರ್ತಿ
Published 8 ಏಪ್ರಿಲ್ 2013, 9:47 IST
Last Updated 8 ಏಪ್ರಿಲ್ 2013, 9:47 IST

ಕೆಜಿಎಫ್: ಏಳು ವರ್ಷಗಳಿಂದ ಕುಡಿಯುವ ನೀರಿನ ಬರಗಾಲ ಎದುರಿಸುತ್ತಿರುವ ತಾಲ್ಲೂಕಿನ ಜನತೆಗೆ ಪ್ರಸ್ತುತ ಸುಡುವ ಬಿಸಿಲು ಮತ್ತಷ್ಟು ನೀರಿನ ಬೇಗೆ ಹೆಚ್ಚಿಸುತ್ತಿದೆ.

ಸಂಜೆಯಾದರೆ ಸಾಕು ಆಗಸದಲ್ಲಿ ಬರುವ ಕಪ್ಪನೆ ಮೋಡ, ಮಳೆ ಬರುವ ಮುನ್ಸೂಚನೆ ನೀಡಿ ಹಾಗೆಯೇ ಹಾರಿ ಹೋಗುತ್ತಿದೆ. ತಾಲ್ಲೂಕಿನಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗಿದ್ದರೂ; ಕಾದ ಭೂಮಿಯಲ್ಲಿ ಅದು ಅಷ್ಟೇ ವೇಗವಾಗಿ ಇಂಗಿ ಹೋಗಿದೆ.

ಕ್ಯಾಸಂಬಳ್ಳಿ ಹೋಬಳಿಯ ಕೆಲ ಕೆರೆಗಳನ್ನು ಹೊರತುಪಡಿಸಿದರೆ ಬಹುತೇಕ ಕೆರೆಗಳು ಬತ್ತಿವೆ. ಕೆಜಿಎಫ್ ನಗರಕ್ಕೆ ಕುಡಿಯುವ ನೀರಿನ ಆಸರೆಯಾದ ಬೇತಮಂಗಲ ಜಲಾಶಯದಲ್ಲಿ ಕೊಂಚ ನೀರಿದ್ದರೂ, ಅದನ್ನು ಸರಬರಾಜು ಮಾಡಲಾಗದ ಸ್ಥಿತಿಯಲ್ಲಿ ಜಲಮಂಡಳಿ ಇದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಹಲ ಕೊಳವೆಬಾವಿಗಳು ಬತ್ತುತ್ತಿವೆ. ಮಳೆ ಇನ್ನೂ ಕೊಂಚ ದಿನ ಕೈಕೊಟ್ಟು ಇದೇ ರೀತಿ ಬಿಸಿಲು ಮುಂದುವರೆದರೆ ಪರಿಸ್ಥಿತಿ ಮತ್ತುಷ್ಟು ಶೋಚನೀಯವಾಗಲಿದೆ.

ಕೆಜಿಎಫ್ ನಗರದಲ್ಲಿ ಟ್ಯಾಂಕರ್‌ಗಳೇ ಕುಡಿಯುವ ನೀರಿಗೆ ಮೂಲವಾಗಿದೆ. ನಗರದ ಪಾರಾಂಡಹಳ್ಳಿ ಸುತ್ತಮುತ್ತಲಿನ ಪ್ರದೇಶ ಮತ್ತು ಬಾಣಗಿರಿ ಸುತ್ತಮುತ್ತಲಿನ ಪ್ರದೇಶದಿಂದ ನೀರನ್ನು ತುಂಬಿಸಿಕೊಂಡು ಬರುವ ನೂರಾರು ಟ್ಯಾಂಕರ್‌ಗಳು ನಗರದ ಜನತೆಯ ಜಲದಾಹ ತೀರಿಸುತ್ತಿವೆ.

ಪ್ರತಿ ಮನೆಯೂ ನೀರನ್ನು ಕೊಳ್ಳಲು ಪ್ರತ್ಯೇಕ ಬಜೆಟ್ ಅನ್ನು ಮೀಸಲಿಟ್ಟಿವೆ. ಒಂದು ಬಿಂದಿಗೆಗೆ ಒಂದೂವರೆ ರೂಪಾಯಿಯಿಂದ ಮೊದಲ್ಗೊಂಡು ಎರಡು ರೂಪಾಯಿವರೆವಿಗೂ ನಿಗದಿ ಮಾಡಲಾಗಿದೆ. ಟ್ಯಾಂಕರ್‌ಗಳಿಗೂ ಸಹ ಈಗ ಬಹು ಬೇಡಿಕೆ. ವಿದ್ಯುತ್ ಸಮಸ್ಯೆಯಿಂದ ಟ್ಯಾಂಕರ್‌ಗಳು ಸಹ ಒಂದೆರಡು ಟ್ಯಾಂಕ್ ನೀರನ್ನು ಸಹ ಸರಬರಾಜು ಮಾಡಲು ಹರಸಾಹಸ ಮಾಡುತ್ತಿವೆ.

ನಗರದಲ್ಲಿ 165 ಕೊಳವೆ ಬಾವಿಗಳ ಮೂಲಕ ಜಲಮಂಡಳಿ ನೀರು ಪೂರೈಕೆ ಮಾಡುತ್ತಿವೆ. ಬೇತಮಂಗಲ ಜಲಾಶಯದಿಂದ ನೀರು ಸರಬರಾಜು ನಿಂತು ಹೋಗಿ ಎರಡು ತಿಂಗಳು ಆಗಿದೆ. ಗೋಸಿನ ಕೆರೆಯಲ್ಲಿ ಕೊರೆಯಲಾಗಿರುವ ಕೊಳವೆಬಾವಿಗಳ ನೀರನ್ನು ಮೊದಲು ಕೆಜಿಎಫ್ ನಗರಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ ಸಿಗುತ್ತಿರುವ ನೀರು ಬೇತಮಂಗಲಕ್ಕೆ ಮಾತ್ರ ಸಾಕಾಗುತ್ತಿದೆ. ಬೇಸಿಗೆಯ ಬಿಸಿಲು ಬಿರುಸಾಗುತ್ತಿರುವ ಕಾರಣ ಈಗಾಗಲೇ 35 ಕೊಳೆವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

ನಿತ್ಯ ಕೆಜಿಎಫ್ ನಗರಕ್ಕೆ ಸುಮಾರು 63 ಲಕ್ಷ ಲೀಟರ್ ಕುಡಿಯುವ ನೀರಿನ ಅವಶ್ಯಕತೆ ಇದೆ. ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆ ಮತ್ತು ವಿದ್ಯುತ್ ಕೊರತೆಯಿಂದ ಪ್ರಸ್ತುತ ತಿಂಗಳಿಗೆ 2-3 ಬಾರಿ ಮಾತ್ರ ಕುಡಿಯುವ ನೀರನ್ನು ಜಲಮಂಡಳಿ ಸರಬರಾಜು ಮಾಡುತ್ತಿದೆ. ಜಲಮಂಡಳಿ, ನಗರಸಭೆಗಳಿಂದ ಅಲ್ಲಲ್ಲಿ ಕೊರೆದಿರುವ ಕೊಳವೆಬಾವಿಗಳು ಸ್ಥಳೀಯ ಜನರ ಸಮಸ್ಯೆಯನ್ನು ಕೊಂಚ ಕಡಿಮೆ ಮಾಡಿದ್ದರೂ, ಸಿಹಿ ನೀರು ಬೇಕಾದಲ್ಲಿ ಟ್ಯಾಂಕರ್ ನೀರೇ ಗಟ್ಟಿ.

ಬೆಮಲ್ ಕಾರ್ಖಾನೆ ಸಹ ಐವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆದು ಅದನ್ನು ನಗರಸಭೆಗೆ ಹಸ್ತಾಂತರಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT