ADVERTISEMENT

ಕೆರೆ ಒತ್ತುವರಿ ತೆರವುಗೊಳಿಸಿ: ಖಾದರ್

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 11:22 IST
Last Updated 2 ಆಗಸ್ಟ್ 2013, 11:22 IST

ಕೋಲಾರ: ಜಿಲ್ಲೆಯಲ್ಲಿ ನಡೆದಿರುವ ಕೆರೆ ಒತ್ತುವರಿಯನ್ನು ಅಧಿಕಾರಿಗಳು ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ ದೂರುಗಳು ಹೆಚ್ಚಾಗಿವೆ. ಅಂತರ್ಜಲ ಸಮಸ್ಯೆ ಮಿತಿಮೀರುತ್ತಿರುವ ಸಂದರ್ಭದಲ್ಲಿ ಕೆರೆಗಳನ್ನು ಉತ್ತಮ ಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕಾಗಿದೆ.ಅದನ್ನು ಗಮನದಲ್ಲಿರಿಸಿಕೊಂಡು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಾನುವಾರುಗಳಿಗೆ ಮೇವು ಸಿಗದ ರೀತಿಯಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದು ಆತಂಕದ ಮತ್ತು ವಿಷಾದದ ಸಂಗತಿ. ಅಧಿಕಾರಿಗಳು ಕೆರೆ ಒತ್ತುವರಿಯನ್ನು ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಕೆರೆಗಳು ನಾಪತ್ತೆಯಾಗುತ್ತವೆ ಎಂದರು.

ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಕಾರಿಕೆಯೂ ವ್ಯಾಪಕವಾಗಿ ನಡೆಯುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು. ಅಕ್ರಮ ಮರಳು ದಂಧೆಯನ್ನು ತಡೆಯಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 72 ಜಲ್ಲಿ ಕ್ರಷರ್‌ಗಳಿದ್ದು ಹೊಸ ಕ್ರಷರ್‌ಗಳಿಗೆ ಪರವಾನಗಿಯನ್ನು ನೀಡದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆಗಳನ್ನು ನಡೆಸಬೇಕು.  ಗಣಿಗಾರಿಕೆಗಳಿಂದ ವಸತಿ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಪ್ರತ್ಯೇಕ ಸಭೆ: ಕೆರೆಗಳ ಒತ್ತುವರಿ ಸಂಬಂಧ ಹಲವು ದೂರುಗಳು ನನ್ನವರೆಗೂ ಬಂದಿವೆ.  ಈ ನಿಟ್ಟಿನಲ್ಲಿ ತನಿಖೆ ನಡೆಸಿ ವರದಿ ಪಡೆಯಲಾಗುವುದು. ನಂತರ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೆರೆಗಳ ಸ್ಥಿತಿ-ಗತಿ ಬಗ್ಗೆ ಇತ್ತೀಚೆಗಷ್ಟೆ `ಪ್ರಜಾವಾಣಿ' ಸರಣಿ ವರದಿಗಳನ್ನು ಪ್ರಕಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.