ADVERTISEMENT

ಕೌಶಲ್ಯ ಅಭಿವೃದ್ಧಿಗೆ ಗಮನ ಕೊಡಿ: ಮೀನಾ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 9:05 IST
Last Updated 13 ಜನವರಿ 2011, 9:05 IST

ಕೋಲಾರ: ವಿದ್ಯಾರ್ಥಿ ದಿಸೆಯಲ್ಲೇ ಕೌಶಲ್ಯ ಅಭಿವೃದ್ಧಿಗೆ ಗಮನಕೊಟ್ಟರೆ ಉದ್ಯೋಗದ ಅವಕಾಶಗಳನ್ನು ಸುಲಭವಾಗಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಕರೆ ನೀಡಿದರು.

ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲಕರ ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಬುಧವಾರ 22ನೇ ಬೃಹತ್ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೇ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳನ್ನು ನಡೆಸಬೇಕು. ಆಗ ಮಾತ್ರ ಉದ್ಯೋಗ ಮೇಳಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಬಹುದು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಕೌಶಲ್ಯ ಬೆಳವಣಿಗೆಗಳ ಕಡೆಗೂ ಗಮನ ನೀಡಬೇಕು ಎಂದರು.ಉದ್ಯೋಗ ಮೇಳದಿಂದ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ವಾಗಲಿದೆ. ಹಿಂದುಳಿದ ಜಿಲ್ಲೆಯಾಗಿರುವ ಕೋಲಾರದಲ್ಲಿ ಉದ್ಯೋಗ ಮೇಳ ನಡೆಯುತ್ತಿರುವುದು ಒಂದು ಉತ್ತಮ ಕಾರ್ಯ. ಜಿಲ್ಲೆಯ ನಿರುದ್ಯೋಗಿಗಳು ಮೇಳದ ಉಪಯೋಗ ಪಡೆಯಬೇಕು ಎಂದರು.

ಮೇಳದಲ್ಲಿ ಉದ್ಯೋಗ ಸಿಗದವರು ನಿರಾಸೆಪಡಬೇಕಾಗಿಲ್ಲ. ಮುಂದಿನ ದಿನಗಳಿಗೆ ಇಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಮುಂದಿನ ಉದ್ಯೋಗ ಮೇಳದಲ್ಲಿ ಖಂಡಿತ ಉದ್ಯೋಗ ಸಿಗಲಿದೆ ಎಂದರು.ವಿವಿಧ ಭಾಗಗಳಿಂದ ಸುಮಾರು 6453 ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿ ಹೆಸರು ನೋಂದಾಯಿಸಿದರು. ಎಸ್‌ಎಸ್‌ಎಲ್‌ಸಿ ಗಿಂತ ಕಡಿಮೆ ವಿದ್ಯಾರ್ಹತೆಯುಳ್ಳ 250 ಮಂದಿ,  ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ 2400 ಮಂದಿ, ಪಿಯುಸಿ ವಿದ್ಯಾರ್ಹತೆ 1850 ಮಂದಿ, ಐಟಿಐ, ಡಿಪ್ಲೊಮಾ ಮತ್ತು ಜೆಒಸಿ ವಿದ್ಯಾರ್ಹತೆಯ 1900 ಮಂದಿ, 53 ಅಂಗವಿಕಲರು ಪಾಲ್ಗೊಂಡಿದ್ದರು.

1314 ಮಂದಿಗೆ ಉದ್ಯೋಗದ ಅವಕಾಶ ದೊರೆಯಿತು. 454 ಮಂದಿಗೆ ಸ್ಥಳದಲ್ಲೆ ನೇಮಕಾತಿ ಆದೇಶ ದೊರೆಯಿತು. 2955 ಮಂದಿಯನ್ನು ತರಬೇತಿಗಾಗಿ ಆಯ್ಕೆ ಮಾಡಲಾಯಿತು. ಮೇಳದಲ್ಲಿ 77 ಉದ್ಯೋಗದಾತ  ಸಂಸ್ಥೆಗಳು ಭಾಗವಹಿಸಿದ್ದವು. ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಡಾ: ವಿಷ್ಣುಕಾಂತ್ ಚಟಪಲ್ಲಿ, ನಿಗಮದ ರಾಜ್ಯ ದಕ್ಷಿಣ ವಲಯದ ವಿಶೇಷಾಧಿಕಾರಿ ಎಸ್.ಜೆ. ಹೇಮಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಶಾಂತಪ್ಪ, ಜಿಲ್ಲಾ ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್, ಜಿ.ಎನ್. ಶಿವಮೂರ್ತಿ, ಕೃಷ್ಣಸ್ವಾಮಿ, ವೇಣುಗೋಪಾಲ್ ಉಪಸ್ಥಿತರಿದ್ದರು.

ಸ್ಥಳ ಬದಲಾವಣೆ: ಜ.13ರಂದು ಮಧ್ಯಾಹ್ನ 3ಕ್ಕೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಉದ್ಯೋಗಪತ್ರ ವಿತರಣಾ ಕಾರ್ಯಕ್ರಮವನ್ನು ಬಾಲಕರ ಸರ್ಕಾರಿ ಕಾಲೇಜಿನ ಆವರಣದಲ್ಲೆ ನಡೆಸಲಾಗುವುದು ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳದ ಸಂಚಾಲಕ ಎಂ.ಸಾದಾತ್ ಉಲ್ಲಾಬೇಗ್ ತಿಳಿಸಿದ್ದಾರೆ. ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಉದ್ಯೋಗಪತ್ರ ವಿತರಿಸಲಿದ್ದಾರೆ. ಶಾಸಕ ಆರ್.ವರ್ತೂರು ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎ. ನಾರಾಯಣಸ್ವಾಮಿ, ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲೆಯ ಎಲ್ಲ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.