ADVERTISEMENT

ಕ್ರೀಡಾ ಇಲಾಖೆ ಅವ್ಯವಹಾರ: ತಪಾಸಣೆಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 6:15 IST
Last Updated 3 ಮಾರ್ಚ್ 2012, 6:15 IST

ಕೋಲಾರ: ಅನುಮತಿ ಪಡೆಯದೆ ಕಾರ್ಯಕ್ರಮ ಗಳಿಗೆ ಖರ್ಚು ಮಾಡಲು ಸೆಲ್ಫ್ ಚೆಕ್ ಮೇಲೆ ಲಕ್ಷಾಂತರ ರೂಪಾಯಿ ಡ್ರಾ ಮಾಡಿರುವುದು, ಕೊಟೇಶನ್ ಪಡೆಯದೆ ಲಕ್ಷಾಂತರ ರೂಪಾಯಿ ಮೌಲ್ಯದ ಕ್ರೀಡಾ ಸಾಮಗ್ರಿ ಖರೀದಿಸಿರುವುದು, ನಗದು ಪುಸ್ತಕಗಳ ಅಸಮರ್ಪಕ ನಿರ್ವಹಣೆ...

ಇದು ನಗರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದಿರುವ ಅವ್ಯವಹಾರದ ನಿದರ್ಶನಗಳು. ಇಲಾಖೆಯ ಕೇಂದ್ರ ಕಚೇರಿಯಿಂದ ಬಂದಿದ್ದ ಜಂಟಿ ನಿರ್ದೇಶಕ ವೈ.ಆರ್.ಕಾಂತರಾಜೇಂದ್ರ ಅವರ ನೇತೃತ್ವದ ತಂಡ ಕಳೆದ ಡಿ. 2 ಮತ್ತು 3ರಂದು ಕಚೇರಿ ಲೆಕ್ಕ ತಪಾಸಣೆ ಮಾಡಿ ಸಲ್ಲಿಸಿರುವ ವರದಿ ಯಲ್ಲಿ ಈ ಅವ್ಯವಹಾರ ಬೆಳಕಿಗೆ ಬಂದಿದೆ. ವರದಿ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದ್ದು ಮಾಹಿತಿ ಹೀಗಿದೆ.

ಸೆಲ್ಪ್ ಚೆಕ್: 2009-10 ಮತ್ತು  2010-11ರ ಎರಡೂ ಸಾಲಿನಲ್ಲಿ ಸೆಲ್ಫ್ ಚೆಕ್ ಮೇಲೆ ಲಕ್ಷಾಂತರ ಹಣವನ್ನು ಡ್ರಾ ಮಾಡಿ ವಿನಿಯೋಗಿಸಲಾಗಿದೆ. ಇಲಾಖೆಯ ಸಹಾಯಕ ನಿರ್ದೇಶಕರ ಹೆಸರಿನಲ್ಲಿ ನಗರದ ವಿಜಯ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ (ನಂ. 112101010017875) ನಿರ್ವಹಣೆ ಯಾಗುತ್ತಿದೆ.

ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯಲ್ಲಿ ಮಂಡಿಸಿ ಅನುಮತಿ ಪಡೆಯದೆ, ಕಾರ್ಯಕ್ರಮಗಳಿಗೆ ಖರ್ಚು ಮಾಡಲು ಈ ಖಾತೆಯಿಂದ ಸೆಲ್ಫ್ ಚೆಕ್ ಮೇಲೆ ಹಣ ಡ್ರಾ ಮಾಡಿರುವುದು ನಿಯಮ ಬಾಹಿರವಾಗಿದೆ ಎಂದು ವರದಿ ತಿಳಿಸಿದೆ.

2010ರ ಜ. 20ರಂದು ನಿಯೋಜನೆ ಮೇರೆಗೆ ಅಧಿಕಾರ ವಹಿಸಿಕೊಂಡ ಸಹಾಯಕ ನಿರ್ದೇಶಕಿ ಕೆ. ಉಮಾಲಕ್ಷ್ಮಿ ಫೆ.2ರಿಂದಲೇ ಈ ರೀತಿ ಹಣ ಡ್ರಾ ಮಾಡಿದ್ದಾರೆ. ಫೆ. 2ರಂದು ರೂ 7,005, 4 ರಂದು ರೂ 15,500, 11ರಂದು ರೂ 1,500, 22ರಂದು ರೂ 7,200, ಅಂದೇ ರೂ 10 ಸಾವಿರ, ಮಾ.12ರಂದು ರೂ 10 ಸಾವಿರ, ಜೂ 18ರಂದು ರೂ 11,300, ಸೆ. 27ರಂದು ರೂ 6 ಸಾವಿರ ಡ್ರಾ ಮಾಡಿದ್ದಾರೆ. ಅದೇ ರೀತಿ, 2011ರ ಅ.8ರಂದು 1,280, ಏ.12ರಂದು ರೂ 60 ಸಾವಿರ, ಮೇ 19ರಂದು ರೂ 8 ಸಾವಿರ, ಜು.25ರಂದು ರೂ 13 ಸಾವಿರ ಡ್ರಾ ಮಾಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.

`ಈ ಖಾತೆಯಲ್ಲಿ 2011ರ ಅ.8ರಂದು ರೂ 6,796 ಅಂತಿಮ ಶುಲ್ಕವಿದ್ದು, ಸರ್ಕಾರಕ್ಕೆ ಸಂದಾಯವಾಗಬೇಕಾಗಿರುವ ಹಣವನ್ನು ಖಾತೆಯಲ್ಲಿ ಉಳಿಸಿಕೊಂಡು ಬಂದು, ಈ ಹಣದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೇ ಬೇಕೆನಿಸಿದಾಗ ಹಣ ಡ್ರಾ ಮಾಡಿರುವುದು ಮತ್ತು ಕಟ್ಟಿರುವುದು ನಡೆದುಕೊಂಡು ಬಂದಿದೆ.
 
ಅದನ್ನು ನಗದು ಪುಸ್ತಕದಲ್ಲಿ ನಮೂದಿಸದೆ ಕೇವಲ ಸ್ವಂತ ಖಾತೆಯನ್ನು ನಿರ್ವಹಿಸುವ ರೀತಿಯಲ್ಲಿ ನಿರ್ವಹಿಸಿ ರುವುದು ನಿಯಮ ಬಾಹಿರವಾಗಿದೆ~ ಎಂದು ವರದಿ ಸ್ಪಷ್ಟವಾಗಿ ಹೇಳಿದೆ.

ಕೊಟೇಶನ್ ಇಲ್ಲ: ಎರಡೂ ಸಾಲಿನಲ್ಲಿ ಕ್ರೀಡಾ ಸಾಮಗ್ರಿಗಳ ಖರೀದಿಗೆ ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡಿದ್ದು ಅದಕ್ಕೆ ಕೊಟೇಶನ್‌ಗಳನ್ನು ಪಡೆಯದಿರುವುದನ್ನೂ ವರದಿ ಬಹಿರಂಗಪಡಿಸಿದೆ.

ವಿವರ ಹೀಗಿದೆ: ಕ್ರೀಡಾ ಸಾಮಗ್ರಿ ಖರೀದಿ- ರೂ 19,982, ಕ್ರೀಡಾ ಶಾಲೆಗೆ ಸಾಮಗ್ರಿಗಳನ್ನು ಖರೀದಿಸಿದ್ದು- ರೂ 35,625, ಸಾಮಗ್ರಿಗಳ ಖರೀದಿ- ರೂ 6.820, ಜಿಲ್ಲಾ ಯುವಜನೋ ತ್ಸವ- ರೂ 25 ಸಾವಿರ, ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಸಲಕರಣೆಗಳನ್ನು ಖರೀದಿಸಿದ್ದು- ರೂ 49,900, ಕ್ರೀಡಾ ಶಾಲೆಗೆ ಸಾಮಗ್ರಿಗಳನ್ನು ಖರೀದಿಸಿದ್ದು- ರೂ 70,945, ಕಚೇರಿ ಅಲ್ಮೆರಾಗಳನ್ನು ಖರೀದಿಸಿದ್ದು- ರೂ 35,639. ಇವುಗಳಿಗೆ ಡಿ.ಸಿ ಬಿಲ್‌ಗಳಿವೆ.

ಆದರೆ ಇನ್ನೂ ಕೆಲವು ಖರ್ಚುಗಳಿಗೆ ಡಿಸಿ ಬಿಲ್‌ಗಳೂ ಇಲ್ಲವಾಗಿವೆ. ಅವುಗಳು ಹೀಗಿವೆ: ಕ್ರೀಡಾ ಸಾಮಗ್ರಿ ಖರೀದಿ- ರೂ 92,491, ಜಿಲ್ಲಾ ಮಟ್ಟದ ಯುವಜನೋತ್ಸವದ ಖರ್ಚು-ವೆಚ್ಚ- ರೂ 25 ಸಾವಿರ, ಕ್ರೀಡಾ ಸಾಮಗ್ರಿಗಳ ಖರೀದಿ- ರೂ 16, 760, ಕ್ರೀಡಾ ಸಾಮಗ್ರಿಗಳ ಖರೀದಿ- ರೂ 10 ಸಾವಿರ.

ಪಾರದರ್ಶಕವಾಗಿಲ್ಲ: ಶಿಕ್ಷಣ ಸಂಸ್ಥೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಖರೀದಿಸಿ ವಿತರಿಸಲಾಗಿದೆ. ರೂ 1 ಲಕ್ಷಕ್ಕಿಂತ ಕಡಿಮೆ ಇದ್ದರೂ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999  ಮತ್ತು 2000ದಲ್ಲಿ ಸೂಚಿಸಲಾಗಿರುವ ಎಲ್ಲ ನಿಯಮಗಳನ್ನು ಪಾಲಿಸ ಬೇಕಾಗಿದ್ದರೂ ಸಹಾಯಕ ನಿರ್ದೇಶಕರು ಕೇವಲ ಮೂರು ದರಪಟ್ಟಿಗಳನ್ನು ಪಡೆದು ಸಾಮಗ್ರಿ ಗಳನ್ನು ಖರೀದಿಸಿದ್ದಾರೆ. ದರಪಟ್ಟಿಗೆ ಯಾವುದೇ ಪ್ರಾಧಿಕಾರದಿಂದಲೂ ಅನುಮೋದನೆ ಪಡೆದಿಲ್ಲ. 

   ತಾಂತ್ರಿಕ ಸಿಬ್ಬಂದಿಯಾದ ತರಬೇತುದಾರರನ್ನು ಒಳಗೊಂಡ ಟೆಂಡರ್ ಮೌಲ್ಯಮಾಪನ ಸಮಿತಿಯನ್ನು ರಚಿಸಿಲ್ಲ ಎಂದು ವರದಿ ಹೇಳಿದೆ.

ಪ್ರತಿ ಬಾರಿಯೂ ಯಾವುದೇ ಪ್ರಚಾರ ನೀಡದೆ ಕೇವಲ ಮೂರು ದರಪಟ್ಟಿಗಳನ್ನು ಪಡೆದು ಕ್ರೀಡಾ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಇದು ನಿಯಮಬಾಹಿರ. ಅದಕ್ಕೆ ಸಂಬಂಧಪಟ್ಟ ಕಡತಗಳ ನಿರ್ವಹಣೆಯೂ ಆಗಿಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.