ಶ್ರೀನಿವಾಸಪುರ: ತಾಲ್ಲೂಕಿನ ಸಂತೆಗಳಲ್ಲಿ ಗುಡ್ಡೆ ತರಕಾರಿ ಮಾರಾಟ ಹೆಚ್ಚು ಆಕರ್ಷಕವಾಗುತ್ತಿದೆ. ಗ್ರಾಹಕರು ತಮಗೆ ಬೇಕಾದ ತರಕಾರಿಯನ್ನು ತಕ್ಕಡಿಯಲ್ಲಿ ತೂಕ ಮಾಡದೆ ಖರೀದಿಸಬಹುದಾಗಿದೆ.
ಕೆಲವು ತರಕಾರಿ ವ್ಯಾಪಾರಿಗಳು ಬೇರೆ ಬೇರೆ ತರಕಾರಿಗಳನ್ನು ಸಗಟು ಮಾರುಕಟ್ಟೆಯಲ್ಲಿ ಖರೀದಿಸಿ, ವಾರದ ಸಂತೆಗೆ ತಂದು ಚಿಕ್ಕ ಗುಡ್ಡೆಗಳಿಟ್ಟು, ಎಲ್ಲ ತರಕಾರಿಗು ಒಂದು ಸಾಮಾನ್ಯ ಬೆಲೆ ನಿಗದಿಪಡಿಸಿ ಮಾರುವುದು ಹೊಸ ಬೆಳವಣಿಗೆಯಾಗಿದೆ.
ಈ ಪದ್ಧತಿಯಲ್ಲಿ ಬದನೆ ಕಾಯಿ, ಹೀರೆಕಾಯಿ, ಬೆಂಡೆಕಾಯಿ, ಆಗಲಕಾಯಿ, ಟೊಮೆಟೊ, ಆಲೂಗಡ್ಡೆ, ಹಸಿ ಮೆಣಸಿನ ಕಾಯಿ, ಕ್ಯಾಪ್ಸಿಕಂ, ಬೀನ್ಸ್, ಚಪ್ಪರ
ಬದನೆ ಮುಂತಾದ ತರಕಾರಿಗಳನ್ನು ಒಂದೆರಡು ಹಿಡಿಯಷ್ಟು ಗುಡ್ಡೆಯಿಡುತ್ತಾರೆ, ಸಾಮಾನ್ಯವಾಗಿ ಗುಡ್ಡೆಯೊಂದಕ್ಕೆ ₨ 10 ಬೆಲೆ ನಿಗದಿಪಡಿಸುತ್ತಾರೆ. ಯಾವುದೇ ಕೊಸರಾಟವಿಲ್ಲದೆ ವ್ಯಾಪಾರ ನಡೆಯುತ್ತದೆ.
ಈಗ ತರಕಾರಿ ಬೆಲೆ ಗಗನಕ್ಕೇರಿದ್ದರಿಂದ ಗ್ರಾಹಕರು ಕೆ.ಜಿ.ಗಟ್ಟಲೆ ಕೊಳ್ಳಲು ಮುಂದಾಗುತ್ತಿಲ್ಲ. ಒಂದು ಕೆ.ಜಿ. ತರಕಾರಿಗೆ ₨ 40 ರಿಂದ 100 ನೀಡುವ ಬದಲು ಒಂದು ಗುಡ್ಡೆ ತರಕಾರಿಗೆ ₨ 10ರಂತೆ ಅಗತ್ಯವಿದ್ದಷ್ಟು ಗುಡ್ಡೆಗಳನ್ನು ಖರೀದಿಸಿ ಕೊಂಡೊಯ್ಯುತ್ತಾರೆ. ಕೊಳ್ಳುವ ತರಕಾರಿ ಪ್ರಮಾಣ ಕಡಿಮೆಯಾದರೂ, ತಾವು ಹೆಚ್ಚು ಹಣ ಕೊಡುತ್ತಿದ್ದೇವೆ ಅನಿಸುವುದಿಲ್ಲ ಎಂದು ತರಕಾರಿ ವ್ಯಾಪಾರಿ ಮುನಿಯಮ್ಮ ತಿಳಿಸಿದರು.
ಹಿಂದೆ ಎಲ್ಲ ತರಕಾರಿಗಳನ್ನೂ ತೂಕ ಮಾಡಿದರೆ, ಮೂಲಂಗಿಯನ್ನು ಮಾತ್ರ ಗುಡ್ಡೆಯಿಟ್ಟು ಮಾರಲಾಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ತರಕಾರಿಗಳನ್ನೂ ಗುಡ್ಡೆ ವ್ಯಾಪಾರಕ್ಕೆ ಇಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.