ADVERTISEMENT

ಗುಲಾಬಿ ನಡುವೆ ರೈತ ಮಿತ್ರ ಬೀನ್ಸ್ ಬೆಳೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 5:00 IST
Last Updated 4 ಜುಲೈ 2012, 5:00 IST

ಮಾಲೂರು: ಮಿಶ್ರ ಬೆಳೆ ಪದ್ಧತಿ ಅಳವಡಿಸಿ ಅತಿ ಕಡಿಮೆ ಬಂಡವಾಳ ಮತ್ತು ನೀರು ಬಳಸಿ ಹೆಚ್ಚು ಲಾಭ ಪಡೆಯುವಲ್ಲಿ ಎಚ್.ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಮಂಗಲದ ರೈತ ಮಂಜುನಾಥರೆಡ್ಡಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಎಚ್.ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಮಂಗಲ ಗ್ರಾಮದ ರೈತ ಮಂಜುನಾಥರೆಡ್ಡಿ 2 ಎಕರೆ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆ ಪದ್ಧತಿ ಅಳವಡಿಸಿ ಗುಲಾಬಿ ಗಿಡ ನಾಟಿ ಮಾಡಿ, ಗಿಡಗಳ ಮದ್ಯೆ ಖಾಲಿ ಜಾಗದಲ್ಲಿ  ಬೀನ್ಸ್ ಬಿತ್ತನೆ ಮಾಡಿದ್ದಾರೆ.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ತಮ್ಮ ಸಂಬಂಧಿ ಎಂ.ಆರ್.ರೆಡ್ಡಿ ಅವರ ಸಲಹೆ ಮೇರೆಗೆ 2 ಎಕರೆ  ಕೃಷಿ ಭೂಮಿಯಲ್ಲಿ ಗೋಲ್ಡ್ ಆರೆಂಜ್ ತಳಿ ಗುಲಾಬಿ ಗಿಡದ ಕಡ್ಡಿಗಳನ್ನು ನಾಟಿ ಮಾಡಿದ್ದಾರೆ. ಬದಿಯಿಂದ ಬದಿಗೆ 3 ಅಡಿ  ಅಂತರವಿದ್ದು, ಖಾಲಿ ಇರುವ ಭೂಮಿಯಲ್ಲಿ ಅನುಪಮ ತಳಿ ಬೀನ್ಸ್ ಬೀಜ ಬಿತ್ತನೆ ಮಾಡಲಾಗಿದೆ.
 
ಅದರಿಂದ  ಗುಲಾಬಿ ಗಿಡ ಪೂರ್ಣ ಪ್ರಮಾಣದಲ್ಲಿ ಹೂವು ಬಿಡಲು 3 ತಿಂಗಳ ಅವಧಿ ಬೇಕಾಗುತ್ತದೆ. ಈ ಅವಧಿಯಲ್ಲಿ ಅಂತರ ಬೆಳೆಯಾಗಿ ರೈತನ ಮಿತ್ರ ಎಂದು ಹೆಸರು ಪಡೆದಿರುವ ಬೀನ್ಸ್ ಬೆಳೆಯನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಲಾಗಿದೆ. ಬಿತ್ತನೆ ಮಾಡಿದ 1 ತಿಂಗಳಿಗೆ ಬೀನ್ಸ್ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಬೀನ್ಸ್ ಯಾವುದೇ ಕಾಲದ ಮಿತಿಯಿಲ್ಲದೆ ವರ್ಷ ಪೂರ್ತಿ ಬೆಳೆಯಬಹುದ ಬೆಳೆ.

ತಾಲ್ಲೂಕಿನಾದ್ಯಂತ ಜಲಕ್ಷಾಮ ಆವರಿಸಿರುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗಿ ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ. ಇಂಥ ಸಂದರ್ಭದಲ್ಲಿ ಮಂಜುನಾಥರೆಡ್ಡಿ  ತಮ್ಮ ಭೂಮಿಯಲ್ಲಿರುವ ಕೊಳವೆ ಬಾವಿಯಲ್ಲಿನ ಅಲ್ಪ ಸ್ವಲ್ಪ ನೀರನ್ನೇ ಬಳಸಿ ಹನಿ ನಿರಾವರಿ ಪದ್ಧತಿ ಮೂಲಕ ಗುಲಾಬಿ ಮತ್ತು ಬೀನ್ಸ್ ಬೆಳೆದಿದ್ದಾರೆ. ಜಮೀನಿನಲ್ಲಿ ಮಲ್ಚಿಂಗ್ ಪೇಪರ್ ಅಳವಡಿಸಿರುವುದರಿಂದ ಕಳೆ ಕಡಿಮೆಯಾಗಿದೆ. ತೇವಾಂಶ ಬಿಸಿಲಿಗೆ ಆವಿಯಾಗಿ ವ್ಯರ್ಥವಾಗುವುದೂ ತಪ್ಪಿದೆ.
 
ಅಷ್ಟೇ ಅಲ್ಲ, ಬೆಳೆಗಳಿಗೆ ನೀಡುವ  ಪೌಷ್ಟಿಕಾಂಶ ವ್ಯತ್ಯಯವಾಗದೆ ಪೂರ್ಣ ಪ್ರಮಾಣದಲ್ಲಿ ಗಿಡಕ್ಕೆ ದೊರಕುವುದರಿಂದ ಇಳುವರಿ ಹೆಚ್ಚಾಗಿ ಉತ್ತಮ ಫಸಲು ಸಿಗುತ್ತದೆ ಎನ್ನುತ್ತಾರೆ ಅವರು.
ಹುರುಳಿ ಕಾಯಿಗೆ ವರ್ಷದ ಎಲ್ಲಾ ಕಾಲದಲ್ಲೂ ಬೆಲೆ ಇರುತ್ತದೆ. ಜೂನ್ ತಿಂಗಳಲ್ಲಿ ಕೆ.ಜಿಗೆ 25 ರಿಂದ 30 ರೂಪಾಯಿ ದೊರಕಿದೆ. 1 ಕ್ವಿಂಟಲ್ ಬೀನ್ಸ್ ಸಾವಿರದ ಐನೂರು ರೂಪಾಯಿಯಿಂದ 2 ಸಾವಿರದವರೆಗೆ ಮಾರಾಟವಾಗುತ್ತಿದ್ದು, ನಗುವಿನ ಗೆರೆ ಮೂಡಿದೆ.

ಬೆಂಗಳೂರು ಸೇರಿದಂತೆ ತಮಿಳುನಾಡಿನ ಚೆನೈ ಮಾರುಕಟ್ಟೆಗೆ ಲಾರಿಗಳ ಮೂಲಕ  ಬೀನ್ಸ್ ರವಾನೆಯಾಗುತ್ತದೆ. ಬೀನ್ಸ್ ಮುಗಿಯುವ ವೇಳೆಗೆ ಗುಲಾಬಿ ಹೂವಿನ ಇಳುವರಿ ಆರಂಭವಾಗುತ್ತದೆ.

`ಮಿಶ್ರ ಬೆಳೆ ಪದ್ಧತಿ ಅಳವಡಿಸುವ ಮೊದಲು 2 ಎಕರೆ ಭೂಮಿಯಲ್ಲಿ  ಕ್ಯಾಪ್ಸಿಕಮ್(ದೊಣ್ಣೆ ಮೆಣಸಿನಕಾಯಿ) ಬೆಳೆದಿದ್ದೆ. ಅದು ಉತ್ತಮ ಇಳುವರಿ ಬಂದು ಉತ್ತಮ ಧಾರಣೆ ದೊರಕಿತ್ತು. ಈಗ ಹುರುಳಿ ಕಾಯಿಗೂ ಬೆಲೆ ಇದ್ದು, ಹೆಚ್ಚು ಲಾಭ ಸಿಗಲಿದೆ~ ಎನ್ನುತ್ತಾರೆ ಮಂಜುನಾಥರೆಡ್ಡಿ.

ಒಂದು ಹೆಕ್ಟೇರ್‌ನಲ್ಲಿ ಹುರುಳಿ ಕಾಯಿ ಬೆಳೆಯಲು ಸುಮಾರು  20 ರಿಂದ 30 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ 3 ರಿಂದ 4 ಲಕ್ಷ ರೂಪಾಯಿವರೆಗೂ ಲಾಭ ದೊರಕುತ್ತದೆ. ಆದ್ದರಿಂದಲೇ ಬೀನ್ಸ್ `ರೈತನ ಮಿತ್ರ~ನಂತಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ತಾಂತ್ರಿಕ ಅಧಿಕಾರಿ ಗಂಗಪ್ಪ. ಗುಲಾಬಿ ಬೆಳೆಯುವ ರೈತರಿಗೆ ಒಂದು ಹೆಕ್ಟೇರ್‌ಗೆ 23 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ.

ಮಲ್ಚಿಂಗ್ ಪೇಪರ್ ಬಳಸುವ ರೈತರಿಗೆ 1 ಹೆಕ್ಟೇರ್‌ಗೆ 10 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ. 25 ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗುವುದು. ಆಸಕ್ತ ರೈತರು ತಾಲ್ಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.