ADVERTISEMENT

ಗೈರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 8:25 IST
Last Updated 11 ಅಕ್ಟೋಬರ್ 2012, 8:25 IST

ಮುಳಬಾಗಲು: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಬುಧವಾರ ನಡೆದ ತಾ.ಪಂ ಪ್ರಗತಿ ಪರಿಶೀಲನೆ ಮತ್ತು ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮಿ ಚಂದ್ರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯರು ತಾ.ಪಂ ಸಭೆಗೆ ತಡವಾಗಿ ಬಂದ ಅಕ್ಷರ ದಾಸೋಹ, ಬಿಸಿಎಂ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೈಗಾರಿಕೆ ಇಲಾಖೆ, ಎಸ್‌ಸಿ-ಎಸ್‌ಟಿ ನಿಗಮದ ಅಧಿಕಾರಿಗಳು ಸಭೆಗೆ ಬಾರದ ಬಗ್ಗೆ ಸದಸ್ಯರು ಅಸಮಾಧನ ವ್ಯಕ್ತಪಡಿಸಿದರು. ಎಸ್‌ಟಿ ಜನಾಂಗಕ್ಕೆ ಸರ್ಕಾರದಿಂದ ಬಂದಿರುವ ನೆರವು, ನೀಡಲಾದ ಹಾಗೂ ನೀಡಬಹುದಾದ ಸವಲತ್ತು ಕುರಿತು ಸಭೆಗೆ ಮಾಹಿತಿ ನೀಡಲು ಅಧಿಕಾರಿಯೇ ಬಾರದಿದ್ದರೆ ಹೇಗೆ ಎಂದು ಸದಸ್ಯೆ ಲಕ್ಷ್ಮಿದೇವಮ್ಮ ಏರುದನಿಯಲ್ಲಿ ಪ್ರಶ್ನಿಸಿದರು.

ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಪಶುಪಾಲನೆ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳನ್ನು ತಪ್ಪದೇ ಆಯಾ ಪ್ರದೇಶಗಳ ತಾ.ಪಂ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಪಿ.ಶಿವರಾಮರೆಡ್ಡಿ ಮತ್ತು ಮಾಜಿ ಉಪಾಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ ಒತ್ತಾಯಿಸಿದರು.

ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಗರಿಷ್ಠ ಮಾರಾಟದರಕ್ಕಿಂತ ಹೆಚ್ಚಿನ ದರದಲ್ಲಿ ಮಾರುವ ಕುರಿತು ಕೃಷಿ ಅಧಿಕಾರಿಗಳು ಮಾರಾಟ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಗೊಬ್ಬರ ದಾಸ್ತಾನು ಹಾಗೂ ಮಾರಾಟ ಬೆಲೆಯ ಮಾಹಿತಿ ರೈತರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ನುಡಿದರು.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಆರು ಸಾವಿರ ಎಕರೆ ನೆಲಗಡಲೆ ಬಿತ್ತನೆ ಮಾಡಲಾಗಿದೆ. ಅಕಾಲಿಕ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ ಸಭೆಗೆ ಮಾಹಿತಿ ನೀಡಿದರು. ನೆಲಗಡಲೆ ಬೆಳೆ ನಷ್ಟವಾಗಿರುವ ಕುರಿತು ಕಂದಾಯ ಇಲಾಖೆಯಿಂದ ವರದಿ ತಯಾರಿಸಲಾಗುತ್ತಿದೆ ಎಂದು ನುಡಿದರು.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 27 ಡೆಂಗೆ ಪ್ರಕರಣಗಳು ವರದಿಯಾಗಿವೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದವರ ವಿವರಗಳು ಲಭ್ಯವಾಗುತ್ತಿಲ್ಲ. ಡೆಂಗೆ ಪ್ರಕರಣಗಳ ಕುರಿತು ಸರ್ಕಾರಿ ಆಸ್ಪತ್ರೆಗೆ ವಿವರ ನೀಡಲು ವೈದ್ಯಾಧಿಕಾರಿಗಳ ಮಂಡಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ನುಡಿದರು.

ಆವಣಿ ಗ್ರಾಮದ ವೈದ್ಯಾಧಿಕಾರಿಯು ರೋಗಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಸದಸ್ಯ ಶ್ರೀರಾಮಪ್ಪ ದೂರಿದರು. ನಂಗಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಸದಾ ರಜೆಯಲ್ಲಿರುತ್ತಾರೆ ಎಂದು ದೂರಿದ ಸದಸ್ಯರು ಕ್ರಮಕ್ಕೆ ಒತ್ತಾಯಿಸಿದರು. ಉಪಾಧ್ಯಕ್ಷ ಪಿ.ವಿ.ಶಿವರಾಮರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಡಾ.ವೆಂಕಟಸ್ವಾಮಿ ಹಾಜರಿದ್ದರು.

ಕೊನೆಯ ಸಭೆ: ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಬುಧವಾರಕ್ಕೆ ಮುಕ್ತಾಯಗೊಂಡಿರುವ ಕಾರಣ ಇದು ಕೊನೆಯ ಸಭೆಯಾಗಿದೆ. ಮುಂದಿನ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗಬೇಕಿದೆ. ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.