ADVERTISEMENT

ಗ್ರಾಮ ನೈರ್ಮಲ್ಯ ಕಾಪಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 8:58 IST
Last Updated 5 ಅಕ್ಟೋಬರ್ 2015, 8:58 IST

ಶ್ರೀನಿವಾಸಪುರ: ಆರೋಗ್ಯ ಮತ್ತು ಸ್ವಚ್ಛತೆ ಒಂದೇ ನಾಣ್ಯದ ಎರಡು ಮುಖಗಳು. ಸ್ವಚ್ಛತೆ ಹೊರತಾಗಿ ಆರೋಗ್ಯ ಇರಲು ಸಾಧ್ಯವಿಲ್ಲ. ಆದ್ದರಿಂದ ಗ್ರಾಮ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆರ್‌.ಮಂಜುನಾಥ ಪ್ರಸಾದ್‌ ಹೇಳಿದರು.

ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮದಲ್ಲಿ ಸ್ವಚ್ಛತಾ ಆಂದೋಲನದ ಅಂಗವಾಗಿ ಈಚೆಗೆ ನಡೆದ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಚುನಾಯಿತ ಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೆಹರ್‌ತಾಜ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವಲ್ಲಿ ಎಲ್ಲರ ಸಹಕಾರ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಉಪಾಧ್ಯಕ್ಷ ಎಂ.ಆರ್‌.ರಾಜಣ್ಣ ಮಾತನಾಡಿ, ಗ್ರಾಮಾಭಿವೃದ್ಧಿ ಮೇಲೆ ರಾಷ್ಟ್ರಾಭಿವೃದ್ಧಿ ಸೌಧ ನಿಂತಿದೆ. ಹಳ್ಳಿಗಳ ಉದ್ಧಾರ ಮಹಾತ್ಮಾಗಾಂಧಿ ಅವರ ಮನದಾಳದ ಬಯಕೆಯಾಗಿತ್ತು. ರಾಮ ರಾಜ್ಯದ ಕಲ್ಪನೆ ಸಾಕಾರಗೊಳ್ಳಬೇಕಾದರೆ ಹಳ್ಳಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು. ಪರಿಸರ ಮಾಲೀನ್ಯ ನಿಯಂತ್ರಣಕ್ಕೆ ಬರಬೇಕು ಎಂದು ಹೇಳಿದರು.

ಶ್ರಮದಾನದ ಮೂಲಕ ಗ್ರಾಮ ಸ್ವಚ್ಛತೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಕಾಡುದೇವಂಡಹಳ್ಳಿ ವೆಂಕಟೇಶಪ್ಪ, ತೆರ್ನಹಳ್ಳಿ ಟಿ.ಸಿ.ನಾಚಪ್ಪ, ಗೌಡಹಳ್ಳಿ ವೆಂಕಟರೆಡ್ಡಿ, ಬಂಗವಾದಿ ನಂಜುಂಡಗೌಡ, ಬಗಲಹಳ್ಳಿ ನಾರಾಯಣಸ್ವಾಮಿ, ಗಾಂಡ್ಲಹಳ್ಳಿ ಚೌಡೇಗೌಡ, ಕಾರ್ಯದರ್ಶಿ ಎಸ್‌.ಬಿ.ಮಂಜುನಾಥ, ಸಿಬ್ಬಂದಿ ಮುನಿಯಪ್ಪ, ಶಂಕರಪ್ಪ, ರಾಮಪ್ಪ, ಮಾಜಿ ಸದಸ್ಯರಾದ ನಾರಾಯಣಸ್ವಾಮಿ, ನಂಜುಂಡಪ್ಪ, ಬಿ.ನಾರಾಯಣಸ್ವಾಮಿ, ಹುಲ್ಲೇಗೌಡ, ಮುಖಂಡರಾದ ನಜೀರ್‌ ಅಹ್ಮದ್‌, ಶಿವಕುಮಾರ್‌, ನಾಗರಾಜಪ್ಪ, ಶ್ರೀನಾಥ್‌, ಮಂಜು, ರಾಮಕೃಷ್ಣ, ವೆಂಕಟಮುನಿ ಹಾಗೂ ಸಮಾರಂಭದಲ್ಲಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.