ಶ್ರೀನಿವಾಸಪುರ: ತಾಲ್ಲೂಕಿನ ಮಾವಿನ ತೋಟಗಳ ಕಡೆ ಹೆಜ್ಜೆ ಹಾಕಿದರೆ, ಬಣ್ಣ ಬಣ್ಣದ ಚಿಟ್ಟೆಗಳು ಕಣ್ಣಿಗೆ ರಾಚುತ್ತವೆ. ಹಾರಾಡುವ ಹೂವುಗಳು ಎಂದು ಕರೆಯಲ್ಪಡುವ ಈ ಚಿಟ್ಟೆಗಳು ಈಗ ಮಾವಿನ ಮಡಿಲಿಗೆ ಹೊಸ ಮೆರುಗನ್ನು ತಂದುಕೊಟ್ಟಿವೆ. ನೋಡುವ ಕಣ್ಣಲ್ಲಿ ಬೆರಗು ತುಂಬಿವೆ!
ಸಂಜೆಯ ಹೂ ಬಿಸಿಲಲ್ಲಿ ಮಾವಿನ ತೋಟಗಳ ಬೇಲಿ ಮತ್ತು ರಸ್ತೆ ಪಕ್ಕದ ಲಂಟಾನ ಗಿಡಗಳ ಹೂಗಳಿಂದ ಮಕರಂದವನ್ನು ಹೀರುತ್ತ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತವೆ. ಆಸಕ್ತಿಯಿಂದ ನಿಂತು ನೋಡಿದರೆ, ಪರಿಸರ ಹಾರುವ ಚಿತ್ರಶಾಲೆಯಂತೆ ಗೋಚರಿಸುತ್ತದೆ. ಈಗಂತೂ ಈ ಚಿಟ್ಟೆಗಳು ಮಿಲನೋತ್ಸವ ಆಚರಿಸಿಕೊಳ್ಳುತ್ತಿವೆ.
ಪ್ರಪಂಚದಲ್ಲಿ 1.5 ಲಕ್ಷ ಜಾತಿಯ ಚಿಟ್ಟೆಗಳಿವೆ. ಭಾರತದಲ್ಲಿ 1400 ತರದ ಚಿಟ್ಟೆಗಳಿವೆ. ಆ ಪೈಕಿ 350 ಜಾತಿಯ ಚಿಟ್ಟೆಗಳು ದಕ್ಷಿಣ ಭಾರತದಲ್ಲಿವೆ. ಪಶ್ಚಿಮ ಘಟ್ಟಗಳನ್ನು ಚಿಟ್ಟೆಗಳ ಸ್ವರ್ಗ ಎಂದು ಕರೆಯಲಾಗುತ್ತದೆ. ಆದರೆ ಬಯಲುಸೀಮೆ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ದುಂಬಿ ಜೇನ್ನೊಣಗಳಂತೆ ಚಿಟ್ಟೆಗಳೂ ಸಹ ಹೂಗಳಲ್ಲಿ ಪರಾಗಸ್ಪರ್ಶಕ್ಕೆ ನೆರವಾಗುತ್ತವೆ. ಇವುಗಳನ್ನು ಆಕರ್ಷಿಸಲೆಂದೇ ಹೂಗಳು ರಿಮಳ ಹೊರ ಸೂಸುತ್ತವೆ.
ತಾಲ್ಲೂಕಿನಲ್ಲಿ ಮಳೆಯಿಲ್ಲದೆ ಬಿರು ಬೇಸಿಗೆ ವಾತಾವರಣ ನಿರ್ಮಾಣವಾಗಿದೆ. ಹೊರಗೆ ನೀರು ಸಿಗುತ್ತಿಲ್ಲ. ವಾತಾವರಣದಲ್ಲಿ ಉಷ್ಣಾಂಶ ಒಂದೇ ಸಮನೆ ಏರುತ್ತಿದೆ. ಇದರಿಂದಲೇ ಇರಬೇಕು, ಹೂವಿಂದ ಹೂವಿಗೆ ಹಾರಬೇಕಾದ ಚಿಟ್ಟೆಗಳು ಗ್ರಾಮೀಣ ಪ್ರದೇಶದ ಬಚ್ಚಲಿನ ತೇವದ ಮೇಲೂ ಕುಳಿತುಕೊಳ್ಳುತ್ತಿವೆ.
ಹೂವಿನ ಮೇಲೆ ಮಾತ್ರವಲ್ಲದೆ ಪರಿಮಳಯುಕ್ತವಾದ ನಿಂಬೆ ಮತ್ತಿತರ ಗಿಡಗಳ ಎಲೆಗಳ ಮೇಲೂ ಕುಳಿತು, ಎದ್ದು ಹಾರಾಡುತ್ತಿವೆ. ಈ ಬಾರಿ ರಾತ್ರಿ ಹೊತ್ತು ಬಣ್ಣದಲ್ಲಿ ಅಷ್ಟೇನೂ ಆಕರ್ಷಣೆ ಇಲ್ಲದ ಪತಂಗಗಳೂ ಕಾಣಿಸಿಕೊಳ್ಳುತ್ತಿವೆ. ಅವು ವಿದ್ಯುತ್ ದೀಪದ ಬೆಳಕಿನಿಂದ ಆಕರ್ಷಿತವಾಗಿ ಕೆಳಗೆ ಬೀಳುತ್ತಿವೆ.
ಚಿಟ್ಟೆಗಳು ಸೌಂದರ್ಯಕ್ಕೆ ಹೆಸರಾಗಿದ್ದರೂ; ಅವು ಮಾಡುವ ಹಾನಿ ಅಷ್ಟಿಷ್ಟಲ್ಲ. ಅವು ಎಲೆಗಳ ಹಿಂದೆ ಮೊಟ್ಟೆಗಳನ್ನು ಇಡುವುದರಿಂದ, ಮೊಟ್ಟೆ ಒಡೆದು ಹೊರ ಬರುವ ಕಂಬಳಿ ಹುಳುಗಳು ಎಲೆ, ಹಣ್ಣು, ತರಕಾರಿಗಳನ್ನು ತಿಂದು ರೈತರಿಗೆ ಅಪಾರ ನಷ್ಟ ಉಂಟುಮಾಡುತ್ತವೆ. ಆದ್ದರಿಂದಲೇ ರೈತರು ಚಿಟ್ಟೆಯನ್ನು `ಸುಂದರ ಮೊಗದ ವಿಷ ಕನ್ಯೆ' ಎಂದು ಕರೆಯುತ್ತಾರೆ.
ಬಯಲಿನ ಮೇಲೆ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರೆ ಕೃಷಿಕರು ಬೆಚ್ಚಿ ಬೀಳುತ್ತಾರೆ. ಅವುಗಳ ಸಂತಾನವಾದ ಹುಳುಗಳು ಕೋಸು, ಟೊಮೆಟೊ, ಆಲೂಗಡ್ಡೆ ಮುಂತಾದ ತೋಟದ ಬೆಳೆಗಳಿಗೆ ಹಾನಿ ಉಂಟು ಮಾಡುತ್ತವೆ. ಅವುಗಳ ನಿವಾರಣೆಗೆ ಸಾವಿರಾರು ರೂಪಾಯಿ ಬೆಲೆಯ ಕೀಟನಾಶಕಗಳನ್ನು ಸಿಂಪರಣೆ ಮಾಡಬೇಕಾಗುತ್ತದೆ. ಈ ಕೀಟನಾಶಕಗಳು ಪರಿಸರದ ಮೇಲೆ ದುಷ್ಟರಿಣಾಮ ಬೀರುತ್ತವೆ. ಚಿಟ್ಟೆಯ ಸೌಂದರ್ಯದ ಹಿಂದೆ ಕರಾಳ ಮುಖವೂ ಇದೆ ಎಂಬುದನ್ನು ಮರೆಯುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.