ADVERTISEMENT

ಜಲಮೂಲ ಸಂರಕ್ಷಣೆಗೆ ಆದ್ಯತೆ ಅನಿವಾರ್ಯ

ನರೇಗಾ ಯೋಜನೆಯ ಉದ್ಯೋಗ ಖಾತ್ರಿ ಕೆಲಸಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 5:29 IST
Last Updated 15 ಜೂನ್ 2017, 5:29 IST
ಗ್ರಾಮಸ್ಥರು ಕೆರೆ ಸ್ವಚ್ಚಗೊಳಿಸಿದರು.
ಗ್ರಾಮಸ್ಥರು ಕೆರೆ ಸ್ವಚ್ಚಗೊಳಿಸಿದರು.   

ಮುಳಬಾಗಿಲು: ತಾಲ್ಲೂಕಿನ ಎಲ್ಲ ಕೆರೆಗಳ ಜಲಮೂಲ ಮತ್ತು ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಹರಿವಿಗೆ ಅನುಕೂಲವಾಗುವಂತೆ ಸ್ವಚ್ಛವಾಗಿಡ ಬೇಕು ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ಗೀತಮ್ಮ ಸಲಹೆ ನೀಡಿದರು.

ತಾಲ್ಲೂಕಿನ ಮಲ್ಲಪನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಜನವಾದಿ ಮಹಿಳಾ ಸಂಘಟನೆ ಮತ್ತು ಎಸ್‌ಎಫ್‌ಐ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ ನರೇಗಾ ಯೋಜನೆಯ ಉದ್ಯೋಗ ಖಾತ್ರಿ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಳಬಾಗಿಲು ತಾಲ್ಲೂಕಿನಲ್ಲಿ ಹೆಚ್ಚು ಕೆರೆಗಳಿವೆ. ಆದರೆ ಈಗ ಕೆರೆಗಳೆಲ್ಲ ಕುಂಟೆಗಳಾಗಿವೆ. ರಾಜ ಕಾಲುವೆಗಳು ಮುಚ್ಚಿ ಹೋಗಿವೆ. ಕೆರೆಗಳಲ್ಲಿನ ಗಿಡ ಗಂಟಿಗಳನ್ನು ಸ್ವಚ್ಛಗೊಳಿಸಿದರೆ ಮಳೆ ನೀರು ಸಂಗ್ರಹಕ್ಕೆ ಉಪಯುಕ್ತವಾಗುತ್ತದೆ ಎಂದರು.

ಹಿಂದಿನ ಕಾಲದಲ್ಲಿ ಪ್ರತಿ ಊರಿನಲ್ಲಿ ಗುಂಡು ತೋಪು, ಗೋಮಾಳ, ಗೋಕುಂಟೆ, ಕೆರೆ ಕಟ್ಟೆಗಳ ಮೇಲೆ ಸಾಲು ಮರಗಳು ಇರುತ್ತಿದ್ದವು. ಆದರೆ ಈಗ ಅವುಗಳನ್ನೆಲ್ಲ ಒತ್ತುವರಿ ಮಾಡಲಾಗುತ್ತಿದೆ. ಕೆರೆಗಳೆಲ್ಲ ಬತ್ತಿ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರದಿಂದ ಜಾರಿಯಾಗುತ್ತಿದ್ದ ಕೆರೆಗಳ ಅಭಿವೃದ್ಧಿ ಯೋಜನೆಗಳು ಕೆಲ ಖಾಸಗಿ ಹಾಗೂ ಬಲಿಷ್ಠರ ಕೈ ಸೇರುತ್ತಿದ್ದವು. ನರೇಗಾ ಯೋಜನೆಯಲ್ಲಿ ಜನ ಸಾಮಾನ್ಯರಿಗೆ ಸಿಗಬೇಕಾದ ಕೂಲಿ ಹಣ ಕೆಲವರ ಕೈ ಸೇರುತ್ತಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿ ಆಯಾ ಗ್ರಾಮದ ಕೆರೆ ಕುಂಟೆಗಳಲ್ಲಿ ಹೂಳೆತ್ತಲು ಜನಪ್ರತಿನಿಧಿಗಳು ಜೆಸಿಬಿ ಬಳಸಿ ಜನರ ಹಣವನ್ನು ಲೂಟಿ ಮಾಡುವುದನ್ನು ನಿಲ್ಲಿಸಲು ಜನವಾದಿ ಮಹಿಳಾ ಸಂಘಟನೆ ಮುಂದಾಗಿದೆ ಎಂದು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡುವ ಪುರುಷರಿಗೂ ಮತ್ತು ಮಹಿಳೆಯರಿಗೂ ಸಮಾನ ಕೂಲಿಯನ್ನು ನೀಡಲಾಗುತ್ತದೆ. ದಿನಕ್ಕೆ ₹ 236 ನೀಡಲಾಗುತ್ತದೆ. ಕೆಲಸದ ಸಾಮಾಗ್ರಿಗಳನ್ನು ಸ್ವತಃ ತಂದರೆ ಹೆಚ್ಚಿನದಾಗಿ ₹ 10 ನೀಡಲಾಗುವುದು.

ಒಟ್ಟಾರೆ ₹ 246 ಕೊಡಲಾಗುವುದು.ಈ ಯೋಜನೆಯನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು. ನೀರು ಸಂಗ್ರಹಣೆಗೂ ಹೆಚ್ಚಿನ ಆದ್ಯತೆ ನೀಡುವುದು ಅತಿ ಮುಖ್ಯ ಎಂದು ಸಲಹೆ ನೀಡಿದರು.

ಎಸ್‌ಎಫ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ವಾಸುದೇವರೆಡ್ಡಿ ಮಾತನಾಡಿ, 65 ವರ್ಷ ಮೇಲ್ಪಟ್ಟ ವೃದ್ಧ ಹಾಗೂ ಅಂಗವಿಕಲರು ಮಾಮೂಲಿ ಜನರು ಮಾಡುವ ಕೆಲಸದಲ್ಲಿ ಅರ್ಧ ಕೆಲಸ ಮಾಡಿದರೆ ಅವರಿಗೂ ಒಂದೇ ರೀತಿಯ ಕೂಲಿ ನೀಡಲಾಗುವುದು. ಇಲ್ಲಿ ಕೆಲಸ ಮಾಡುವವರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಎಂದು ತಿಳಿಸಿದರು.

ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಅಂಬ್ಲಿಕಲ್ ಎನ್.ಶಿವಪ್ಪ, ವಿಜಯ್‌ ಕುಮಾರಿ, ದೇವರಾಯಸಮುದ್ರ ಗ್ರಾಮ ಪಂಚಾಯಿತಿ ಪಿಡಿಒ ಕೃಷ್ಣಪ್ಪ, ಗೀತಮ್ಮ, ಸುಬ್ಬಮ್ಮ, ಬೆಂಗಳೂರಮ್ಮ, ಗೌರಮ್ಮ, ಲಕ್ಷ್ಮಮ್ಮ, ವೆಂಕಟಪ್ಪ, ಶಾಂತಮ್ಮ, ನಾಗವೇಣಿ, ಮಂಗಮ್ಮ, ಗೋವಿಂದಗೌಡ, ರಾಮಚಂದ್ರ, ನಾರಾಯಣಸ್ವಾಮಿ, ಸೀನಪ್ಪ ಹಾಜರಿದ್ದರು.

ADVERTISEMENT

*
ಕೆರೆ, ಕಟ್ಟೆಗಳನ್ನು ಸ್ವಚ್ಛ ಮಾಡುವ ಜೊತೆಗೆ ಜಲ ಮೂಲವನ್ನು ಅಭಿವೃದ್ಧಿ ಮಾಡುವುದೂ ಅಷ್ಟೇ ಮುಖ್ಯ. ಕೆರೆಗೆ ಹರಿದು ಬಂದ ನೀರು ವ್ಯರ್ಥವಾಗದಂತೆ ರಕ್ಷಿಸಿ.
-ಗೀತಮ್ಮ, ಅಧ್ಯಕ್ಷೆ,
ಜನವಾದಿ ಮಹಿಳಾ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.