ADVERTISEMENT

ಜಿಲ್ಲಾ ಪಂಚಾಯಿತಿ ನಿರಾಸಕ್ತಿ!

ಕೆ.ನರಸಿಂಹ ಮೂರ್ತಿ
Published 20 ಮಾರ್ಚ್ 2011, 9:25 IST
Last Updated 20 ಮಾರ್ಚ್ 2011, 9:25 IST

ಕೋಲಾರ:  ಸಂಪೂರ್ಣ ಸ್ವಚ್ಛತಾ ಆಂದೋಲನಕ್ಕೆ ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯ ಸಹಯೋಗ ದೊರಕಿದ್ದರೂ ಅದನ್ನು ರಾಜ್ಯದ ಜಿಲ್ಲಾ ಪಂಚಾಯಿತಿಗಳು ಬಳಕೆ ಮಾಡದಿರುವುದು ಬೆಳಕಿಗೆ ಬಂದಿದೆ.

ಆಂದೋಲನದ ಅಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲು ಉದ್ಯೋಗಖಾತ್ರಿ ಕೂಲಿಗಳು ಮತ್ತು ಅನುದಾನವನ್ನು ಬಳಸಬಹುದಾಗಿದೆ. ಶೌಚಾಲಯಗಳ ನಿರ್ಮಾಣಕ್ಕಾಗಿ ಉದ್ಯೋಗಖಾತ್ರಿ ಯೋಜನೆ ಅಡಿ ಕೂಲಿ ವೆಚ್ಚವನ್ನು ಭರಿಸಲು ಕೇಂದ್ರ ಸರ್ಕಾರ ಈಗಾಗಲೇ ಅನುಮೋದನೆಯನ್ನೂ ನೀಡಿದೆ. ಆ ನಿಟ್ಟಿನಲ್ಲಿ, ಶೌಚಾಲಯ ನಿರ್ಮಾಣಕ್ಕಾಗಿ ಉದ್ಯೋಗ ಖಾತರಿ ಯೋಜನೆಯನ್ನು ರಾಜ್ಯ ಜಿಲ್ಲಾ ಪಂಚಾಯಿತಿಗಳು ಬಳಕೆ ಮಾಡುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಕಳೆದ ಫೆ. 18ರಂದು ಎಲ್ಲ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಈ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಫೆ.16ರಂದೇ ಮಿಷನ್‌ಗೆ ಪತ್ರವನ್ನು ಬರೆದಿದ್ದಾರೆ.

ಶೌಚಾಲಯವೊಂದನ್ನು ನಿರ್ಮಿಸಲು 30 ಮಾನವ ದಿನಗಳು ಬೇಕಾಗುತ್ತವೆ ಎಂದು ಉದ್ಯೋಗಖಾತರಿ ಯೋಜನೆಯ ನಿರ್ದೇಶಕರು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. ಅದರ ಪ್ರಕಾರ, ಕೂಡಲೇ ಗ್ರಾಮ ಪಂಚಾಯಿತಿಗಳಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದು ಜಾರಿಗೊಳಿಸಬೇಕು ಎಂದು ಮಿಷನ್‌ನ ನಿರ್ದೇಶಕ ಡಾ.ಪಿ.ಬೋರೇಗೌಡ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾಲಕಾಲಕ್ಕೆ ದಿನಗೂಲಿ ಬದಲಾದಲ್ಲಿ ವೆಚ್ಚವೂ ಬದಲಾವಣೆಯಾಗುತ್ತದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು. ಈ ಸದಾವಕಾಶವನ್ನು ಉಪಯೋಗಿಸಿಕೊಂಡು ತೀವ್ರಗತಿಯಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು ಜಾರಿಗೊಳಿಸಬೇಕು ಎಂದೂ ಸೂಚಿಸಿದ್ದಾರೆ. ಅವರ ಸೂಚನೆಯ ಅನ್ವಯ, ಜಿಲ್ಲೆಗಳಲ್ಲಿ ಕೈಗೊಂಡ ಕ್ರಮಗಳ ಕುರಿತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಇಲಾಖೆಯ ಪ್ರಧಾಣ ಕಾರ್ಯದರ್ಶಿಗೆ ಮಾಹಿತಿಯನ್ನು ನೀಡಬೇಕು.

ಎಷ್ಟು?: ಪ್ರಸ್ತುತ ಉದ್ಯೋಗಖಾತರಿ ಯೋಜನೆ ಅಡಿ ಶೌಚಾಲಯ ನಿರ್ಮಿಸಿಕೊಳ್ಳಲು ಬಿಪಿಎಲ್ ಕುಟುಂಬವೊಂದಕ್ಕೆ 3 ಸಾವಿರ ರೂಪಾಯಿ ನೀಡಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಅಷ್ಟು ಹಣ ಸಾಕಾಗುವುದಿಲ್ಲ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮತ್ತು ಆಂದೋಲನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಾದ ಹಿನ್ನೆಲೆಯಲ್ಲಿ ಎರಡು ಯೋಜನೆಗಳ ಸಹಯೋಗವನ್ನು ಏರ್ಪಡಿಸಲಾಗಿದೆ.

ಈ ಯೋಜನೆ ಜಾರಿಗೆ ಬಂದರೆ, ಆಂದೋಲನದ 3 ಸಾವಿರ ರೂಪಾಯಿ ಜೊತೆಗೆ ರೂ 2.750 ರೂಪಾಯಿ ಸೇರಲಿದೆ. ಅದು ಖಾತ್ರಿ ಯೋಜನೆಯ ಅಡಿ ಕೂಲಿ ಕೆಲಸ ಮಾಡುವವರಿಗೆ ಸೇರುತ್ತದೆ. ಆಂದೋಲನ ಮತ್ತು ಖಾತ್ರಿ ಯೋಜನೆ ಅನುಷ್ಠಾನ ಮಾಡುವವರ ನಡುವಿನ ಸಮನ್ವಯ ಇಲ್ಲಿ ಅಗತ್ಯ. ಎರಡೂ ಯೋಜನೆಗಳನ್ನು ಜಿಲ್ಲಾ ಪಂಚಾಯಿತಿ ಮೂಲಕವೇ ಅನುಷ್ಠಾನಗೊಳಿಸುತ್ತಿದ್ದರೂ ಇದು ಇನ್ನೂ ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ.

ಈ ವರ್ಷ ಅಸಾಧ್ಯ: ಪ್ರಸ್ತುತ ಆರ್ಥಿಕ ವರ್ಷ ಪೂರ್ಣಗೊಳ್ಳುತ್ತಿರುವುದರಿಂದ, ಖಾತ್ರಿ ಯೋಜನೆಯನ್ನು ಆಂದೋಲನಕ್ಕೆ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹೊಸದಾಗಿ ಶೌಚಾಲಯ ನಿರ್ಮಿಸಿಕೊಳ್ಳುವವರಿಗೆ ಮಾತ್ರ ಈ ಸೌಲಭ್ಯ ದೊರಕಲಿದೆ ಎಂಬುದು ಅಧಿಕಾರಿಗಳ ನುಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.