ADVERTISEMENT

ಜಿಲ್ಲೆಯಲ್ಲಿ ಮಾವು ಉತ್ಪಾದನೆ ಹೆಚ್ಚಳದ ನಿರೀಕ್ಷೆ

ಕೋಲಾರ: ಭರ್ಜರಿ ಕಾಯಿ ಕಟ್ಟಿದ ಮಾವಿನ ಮರಗಳು: ರೈತರ ಮೊಗದಲ್ಲಿ ಮೂಡಿದ ಸಂತಸ

ಜೆ.ಆರ್ ಗಿರೀಶ್
Published 31 ಮಾರ್ಚ್ 2018, 11:36 IST
Last Updated 31 ಮಾರ್ಚ್ 2018, 11:36 IST
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮಾವಿನ ತೋಪಿನ ಮರಗಳಲ್ಲಿ ಕಾಯಿ ಕಟ್ಟಿರುವುದು
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮಾವಿನ ತೋಪಿನ ಮರಗಳಲ್ಲಿ ಕಾಯಿ ಕಟ್ಟಿರುವುದು   

ಕೋಲಾರ: ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿಗೆ ಪ್ರಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಈ ಬಾರಿ ಮಾವಿನ ಮರಗಳು ಭರ್ಜರಿಯಾಗಿ ಕಾಯಿ ಕಟ್ಟಿದ್ದು, ಹೆಚ್ಚಿನ ಉತ್ಪಾದನೆ ನಿರೀಕ್ಷಿಸಲಾಗಿದೆ.ಹಿಂದಿನ ವರ್ಷ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಮಾವಿನ ಮರಗಳಿಗೆ ತೇವಾಂಶ ಮತ್ತು ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿ ದೊರೆತಿದೆ. ಭೂಮಿಯಲ್ಲಿನ ತೇವಾಂಶದಿಂದಾಗಿ ಮರಗಳು ಸೊಂಪಾಗಿ ಬೆಳೆದಿದ್ದು, ಮಾವಿನ ತೋಪುಗಳಲ್ಲಿ ಹಸಿರು ನಳನಳಿಸುತ್ತಿದೆ.

ಜಿಲ್ಲೆಯಲ್ಲಿ ಮಾವು ಬೆಳೆಗೆ ಅನುಕೂಲಕರ ವಾತಾವರಣವಿದ್ದು, ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾವು ಬೆಳೆಯ ವಿಸ್ತೀರ್ಣ ಸುಮಾರು 1,600 ಹೆಕ್ಟೇರ್‌ ಹೆಚ್ಚಳವಾಗಿದೆ. ಇದರಿಂದ ಮಾವು ಉತ್ಪಾದನೆ ಶೇ 5ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ 2016ರಲ್ಲಿ ಮಾವು ಬೆಳೆ ವಿಸ್ತೀರ್ಣ 48,824 ಹೆಕ್ಟೇರ್ ಇತ್ತು. ಈಗ 50,432 ಹೆಕ್ಟೇರ್ ಪ್ರದೇಶದಲ್ಲಿ ಮಾವು ಇದೆ.ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಮ್‌, ರಸಪುರಿ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳಿವೆ. ಜಿಲ್ಲೆಯಿಂದ ಗುಜರಾತ್‌, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ರಾಜ್ಯಕ್ಕೆ ಪ್ರತಿ ವರ್ಷ ಮಾವಿನ ಹಣ್ಣು ರಫ್ತಾಗುತ್ತದೆ. ಅಲ್ಲದೇ, ಯುರೋಪ್‌, ಅಮೆರಿಕ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅರಬ್‌ ರಾಷ್ಟ್ರಗಳಿಗೂ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ.

ಒಂದು ತಿಂಗಳು ತಡ: ಸಾಮಾನ್ಯವಾಗಿ ಡಿಸೆಂಬರ್‌ ಅಂತ್ಯದಲ್ಲಿ ಅಥವಾ ಜನವರಿ ಆರಂಭದಲ್ಲಿ ಮಾವಿನ ಮರಗಳಲ್ಲಿ ಹೂವು ಕಾಣಿಸಿಕೊಳ್ಳುತ್ತದೆ. ಆದರೆ, ಈ ಬಾರಿ ಮರಗಳು ಫೆಬ್ರುವರಿಯಲ್ಲಿ ಹೂವು ಬಿಟ್ಟಿವೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಆರಂಭವಾಗುವ ಮಾವಿನ ಸುಗ್ಗಿ ಜುಲೈವರೆಗೂ ಮುಂದುವರಿಯುತ್ತದೆ. ಬಹುತೇಕ ಮಾವಿನ ತಳಿಗಳ ಹಣ್ಣುಗಳು ಮೇ ತಿಂಗಳಲ್ಲಿ ಸಮೃದ್ಧವಾಗಿ ಬರುತ್ತವೆ. ಈ ವರ್ಷ ಹೂವು ಒಂದು ತಿಂಗಳು ತಡವಾಗಿರುವುದರಿಂದ ಜೂನ್‌ನಲ್ಲಿ ಮಾವಿನ ಹಣ್ಣುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ADVERTISEMENT

‘ಈ ವರ್ಷ ಮಾವಿನ ಮರಗಳು ಕಾಯಿ ಕಟ್ಟುವ ಸಂದರ್ಭದಲ್ಲಿ ಮಳೆ ಆಗಿರುವುದರಿಂದ ಗುಣಮಟ್ಟದ ಕಾಯಿಗಳು ಬರುತ್ತವೆ. ಪ್ರತಿ ವರ್ಷ ಸಾಮಾನ್ಯವಾಗಿ ಹೆಕ್ಟೇರ್‌ಗೆ 8 ಟನ್‌ ಮಾವು ಇಳುವರಿ ಬರುತ್ತಿತ್ತು. ಈ ಬಾರಿಯೂ ಅಷ್ಟೇ ಪ್ರಮಾಣದ ಇಳುವರಿ ನಿರೀಕ್ಷಿಸಲಾಗಿದೆ. ಆದರೆ, ಒಟ್ಟಾರೆ ಮಾವು ಬೆಳೆ ವಿಸ್ತಾರ ಹೆಚ್ಚಿರುವುದರಿಂದ ಹಣ್ಣಿನ ಉತ್ಪಾದನೆ ಏರಿಕೆಯಾಗಲಿದೆ’ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಕೆ.ಬಿ.ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.‘ಜಿಗಿ ಹುಳು ಮತ್ತು ವಾಟೆ ಕೊರಕ ಹುಳುಗಳ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಬೇಕು. ಒಂದು ಲೀಟರ್‌ ನೀರಿಗೆ 0.5 ಮಿ.ಲೀ ಇಮೀಡಾ ಮಿಶ್ರಣ ಮಾಡಿ ಸಿಂಪಡಿಸಬೇಕು. ಇದರಿಂದ ಹುಳು ಬಾಧೆ ಹತೋಟಿಗೆ ಬರುತ್ತದೆ’ ಎಂದು ಹೇಳಿದ್ದಾರೆ.

ಮಾವಿನ ಗುಣ: ಒಂದು ವರ್ಷ ಕಡಿಮೆ ಹಾಗೂ ಮತ್ತೊಂದು ವರ್ಷ ಹೆಚ್ಚು ಇಳುವರಿ ನೀಡುವುದು ಮಾವಿನ ಮರದ ಗುಣ. 2014ರಲ್ಲಿ ಮಾವಿನ ಫಸಲು ಕಡಿಮೆ ಇತ್ತು. 2015 ಪೂರ್ಣ ಇಳುವರಿ ವರ್ಷವಾದರೂ ಮಳೆ ಮತ್ತು ಗಾಳಿಗೆ ಮಾವಿನ ಈಚು ಉದುರಿ ಬೆಳೆಗಾರರು ನಷ್ಟ ಅನುಭವಿಸಿದ್ದರು. 2016ರ ವರ್ಷವು ಕಡಿಮೆ ಇಳುವರಿ ವರ್ಷವಾದರೂ ಉತ್ತಮ ಫಸಲು ಬಂದಿತ್ತು. 2017ರಲ್ಲೂ ಇಳುವರಿ ಭರ್ಜರಿಯಾಗಿತ್ತು. ಈ ಬಾರಿಯೂ ಉತ್ತಮ ಫಸಲಿನ ನಿರೀಕ್ಷೆಯಿದ್ದು, ಮಾವಿನ ಮರಗಳಲ್ಲಿನ ಕಾಯಿ ಗೊಂಚಲುಗಳು ರೈತರ ಮೊಗದಲ್ಲಿ ಸಂತಸ ಮೂಡಿಸಿವೆ.

ಇಳುವರಿ ಹೆಚ್ಚಳಕ್ಕೆ ಹೂಗಳ ಸಂರಕ್ಷಣೆ

ಹೂವುಗಳ ಸಂರಕ್ಷಣೆಯು ಇಳುವರಿ ಹೆಚ್ಚಳಕ್ಕೆ ಉತ್ತಮ ಉಪಾಯ. ಮೊಗ್ಗಿನ ರಕ್ಷಣೆಗಾಗಿ ರೈತರು ಈಗಾಗಲೇ ಕೀಟನಾಶಕ ಸಿಂಪಡಿಸಿ ಬೂದು ರೋಗ ಹಾಗೂ ಕಪ್ಪು ಚುಕ್ಕೆ ರೋಗ ನಿಯಂತ್ರಿಸಿದ್ದಾರೆ. ಬಹುತೇಕ ಕಡೆ ಮರಗಳು ಕಾಯಿ ಕಟ್ಟಿದ್ದು, ರೈತರು ಬೇಸಿಗೆಕಾರಣ ಮರಗಳಿಗೆ ನೀರು ಹಾಯಿಸಲು ಸಿದ್ಧತೆ ಮಾಡಿಕೊಂಡಿದ್ದರು. ಜಿಲ್ಲೆಯಲ್ಲಿ ಎರಡು ವಾರದ ಹಿಂದೆ ಉತ್ತಮ ಮಳೆಯಾಗಿದ್ದರಿಂದ ನೀರು ಹಾಯಿಸುವ ಸಮಸ್ಯೆ ತಪ್ಪಿದೆ.

**

ಮಳೆಯಿಂದ ಮರಗಳು ಚೆನ್ನಾಗಿ ಕಾಯಿ ಕಟ್ಟಿವೆ. ರೈತರು ಇಳುವರಿ ನಿರ್ವಹಣೆ, ಬಲಿತ ಕಾಯಿ ಗುರುತಿಸುವಿಕೆ ಹಾಗೂ ಕೊಯ್ಲಿನ ಬಗ್ಗೆ ಕಾಳಜಿ ವಹಿಸಬೇಕು – ಗೋಪಾಲಕೃಷ್ಣ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.