ADVERTISEMENT

ದಲಿತ ಹೋರಾಟಕ್ಕೆ ಗಸ್ತಿ ಮಾದರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 9:50 IST
Last Updated 13 ಫೆಬ್ರುವರಿ 2011, 9:50 IST

 ಕೋಲಾರ: ‘ಲೆಟರ್‌ಹೆಡ್‌ಗಳಲ್ಲಿ ಉಳಿದಿರುವ ದಲಿತ ಸಂಘರ್ಷ ಸಮಿತಿಯ ಹೋರಾಟವು ಡಾ.ಭೀಮರಾವ್ ಗಸ್ತಿಯವರಿಂದ ಪಾಠಗಳನ್ನು ಕಲಿಯಬೇಕಿದೆ ಎಂದು ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಸಂಜೆ ಡಾ.ಎಲ್.ಬಸವರಾಜು ಪ್ರತಿಷ್ಠಾನವು ಏರ್ಪಡಿಸಿದ್ದ, ಬೆಳಗಾವಿಯ ಡಾ.ಭೀಮರಾವ್ ಗಸ್ತಿಯವರಿಗೆ ಬಸವರಾಜು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.

ಬೇಡ ಸಮುದಾಯಕ್ಕಾಗಿ ಇಡೀ ಬದುಕನ್ನು ಮುಡಿಪಿಟ್ಟು ದೀಕ್ಷಾಬದ್ಧ ಕಾಯಕಯೋಗಿಯಂತೆ ದುಡಿಯುತ್ತಿರುವ ಡಾ.ಗಸ್ತಿ ಹೋರಾಟದ ಅಪರೂಪದ ಮಾದರಿ. ದಲಿತರ ಶೋಷಣೆ ವಿರುದ್ಧದ ಹೋರಾಟವನ್ನು ಸ್ವಂತ ಲಾಭಕ್ಕೆ ಬಳಸಿಕೊಳ್ಳುವ ಹೋರಾಟಗಾರರಿಗೆ ನಿಜವಾದ ಹೋರಾಟದ ಮಾದರಿಯನ್ನು ಗಸ್ತಿ ನೀಡಿದ್ದಾರೆ. ಅದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.
ತಮ್ಮ ಸಮುದಾಯದಿಂದ ಪಡೆದಿದ್ದನ್ನು ಮತ್ತೆ ವಾಪಸು ಕೊಡುವ ಗಸ್ತಿಯವರ ಆಲೋಚನೆ ಮತ್ತು ಕಾರ್ಯವೈಖರಿಯನ್ನು ರಾಜ್ಯದ ಪ್ರತಿ ಹಳ್ಳಿಯ ಕೇವಲ ಒಬ್ಬಯುವಕ/ಯುವತಿ ಅನುಸರಿಸಿದರೂ ರಾಜ್ಯದ ಚರಿತ್ರೆಯೇ ಬದಲಾಗುವುದು ಎಂದರು.

ನಟ ಲೋಹಿತಾಶ್ವ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಡಾ.ಗಸ್ತಿಯವರು ಇದುವರೆಗಿನ ಹೋರಾಟಕ್ಕೆ ನನ್ನ ಸಮುದಾಯವೇ ಪ್ರೇರಣೆ ಎಂದು ನುಡಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಎನ್.ಬಿ.ಚಂದ್ರಮೋಹನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಗಸ್ತಿಯವರ ಕುರಿತು ಕೆ.ನಾರಾಯಣ್ವಾಮಿ ಮಾತನಾಡಿದರು.

ಪ್ರತಿಷ್ಠಾನದ ಮಾ.ವೈ.ತಮ್ಮಯ್ಯ ಸ್ವಾಗತಿಸಿದರು. ಲಕ್ಷ್ಮಿನಾರಾಯಣ ಪ್ರಶಸ್ತಿಪತ್ರ ಓದಿದರು. ಹೇಮಾರೆಡ್ಡಿ ನಿರೂಪಿಸಿದರು. ಪಿಚ್ಚಳ್ಳಿ ಶ್ರೀನಿವಾಸ್ ಜಾನಪದ ಗೀತೆ, ವಚನಗಳನ್ನು ಹಾಡಿದರು. ಲಕ್ಷ್ಮಿಪತಿ ಕೋಲಾರ, ವಿಜಯರಾಘವನ್, ಎಚ್.ಎ.ಪುರುಷೋತ್ತಂರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.