ADVERTISEMENT

ನಿರ್ವಹಣೆ ಇಲ್ಲದ ಕಾಮಗಾರಿ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 9:42 IST
Last Updated 11 ಸೆಪ್ಟೆಂಬರ್ 2013, 9:42 IST

ತುರುವೇಕೆರೆ: ಯಾವುದೇ ಇಲಾ­ಖೆ­ಯೂ ನಿರ್ವಹಣೆಯ ಜವಾಬ್ದಾರಿ ಹೊತ್ತು­­ಕೊಳ್ಳದೆ ಬೇಕಾಬಿಟ್ಟಿ ಕಾಮಗಾರಿ ನಡೆಸಿ­ರುವ ಬಗ್ಗೆ ಲೋಕಾ­ಯುಕ್ತ ಎಂಜಿನಿಯರ್ ಪ್ರಸನ್ನ­ಕುಮಾರ್ ಶುಕ್ರವಾರ  ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2009ರಿಂದ 2011ರ­ವರೆಗೆ ಉದ್ಯೋಗ ಖಾತ್ರಿ ಯೋಜನೆ­ಯಡಿ ನಡೆದ ಕಾಮಗಾರಿಗಳು ಸಮ­ರ್ಪಕ­ವಾಗಿಲ್ಲ ಎಂದು ದೂರಿ ಕಲ್ಕೆರೆಯ ಚಂದ್ರಶೆಟ್ಟಿ ಎಂಬುವವರು ನೀಡಿದ್ದ ದೂರಿನ ವಿಚಾರಣೆ ಸಂದರ್ಭ ಅವರು ಮಾತನಾಡಿದರು.

ಸರ್ಕಾರಿ ಪ್ರೌಢಶಾಲೆ ಆವರಣ ಹಾಗೂ ದೇವಾಲಯದ ಮುಂಭಾಗ ಗಿಡ ನೆಡಲು ರೂ 77 ಸಾವಿರ ಖರ್ಚು ಮಾಡಲಾಗಿದೆ. ಆದರೆ ಅಲ್ಲಿ ಗಿಡಗಳೇ ಇಲ್ಲ ಎಂದು ದೂರುದಾರರು ಆಕ್ಷೇಪಿಸಿ­ದರು. ಲೋಕಾಯುಕ್ತ ಅಭಿಯಂತರರು ಈ ಬಗ್ಗೆ ವಿವರಣೆ ಕೇಳಿದಾಗ ಸಾಮಾ­ಜಿಕ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಿಡ ನೆಟ್ಟಿದ್ದು ನಿಜ, ಆದರೆ ನಿರ್ವಹಣೆ ತಮ್ಮ ಇಲಾಖೆಗೆ ಬರುವುದಿಲ್ಲ ಎಂದು ಎರಡೂ ಇಲಾಖೆಯವರು ಕೈ ಚೆಲ್ಲಿ­ದರು. ಜಲಾನಯನ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳೂ ಸಹ ನಿರ್ವಹಣೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಇದರಿಂದ ಅಸಮಾಧಾನಗೊಂಡ ಲೋಕಾಯುಕ್ತ ಎಂಜಿನಿಯರ್ ಸರ್ಕಾರದ ಹಣಕ್ಕೆ ಬೆಲೆಯೇ ಇಲ್ಲವೇ? ಎಂದು ಪ್ರಶ್ನಿಸಿದರು.

ಕಲ್ಕೆರೆಯ ಅಕ್ಷರ ದಾಸೋಹ ಕಟ್ಟಡ ನಿರ್ಮಾಣಕ್ಕೆ ರೂ.1.09 ಲಕ್ಷವನ್ನು ಉದ್ಯೋಗ ಖಾತರಿ ಯೋಜನೆಯಡಿ ಖರ್ಚು ಮಾಡಲಾಗಿದೆ. ಆದರೆ ಶಾಲೆಗೆ ಸರ್ವ ಶಿಕ್ಷಣ ಅಭಿಯಾನದಿಂದ ಬಂದ ಹಣದಲ್ಲಿ ಕಾಮಗಾರಿ ಮಾಡಲಾಗಿದೆ ಎಂದು ಚಂದ್ರಶೆಟ್ಟಿ ದೂರಿದರು.
ಸಾಮಗ್ರಿ ವೆಚ್ಚ ದಾಖಲೆಯಲ್ಲಿ ಲೋಪವಾಗಿದೆ ಎಂದು ಪ್ರಸನ್ನ­ಕುಮಾರ್ ಅಭಿಪ್ರಾಯಪಟ್ಟರು.

ಕೆಲವು ತಡೆ ಅಣೆ ಕಾಮಗಾರಿಯನ್ನು ತೆಂಗಿನ ಮರಗಳ ಮಧ್ಯೆ ನಡೆಸಲಾಗಿದೆ. ಒಂದು ಲಕ್ಷಕ್ಕೆ ಮೀರಿದ ಕಾಮಗಾರಿ­ಗಳಲ್ಲಿ ಮೇಲಧಿಕಾರಿ ಅಳತೆ ಪುಸ್ತಕವನ್ನು ಪರೀಕ್ಷಿಸಿ ಶರಾ ಬರೆದು ಸಹಿ ಹಾಕದ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ನಿವೃತ್ತಿಯಾಗಿ ನಿರಾಳ­ವಾಗಿ­ರಬಹುದು ಎಂದುಕೊಳ್ಳಬೇಡಿ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ನೀವು ಬದುಕಿರುವವರೆಗೂ ನೀವು ಅನುಷ್ಠಾನಗೊಳಿಸಿದ ಕಾಮಗಾರಿಯ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ಎಚ್ಚರಿಸಿದರು.

ದೂರುದಾರರೂ ಮಾಹಿತಿ ಹಕ್ಕು ಕಾಯಿದೆಯಡಿ ಅಗತ್ಯ ದಾಖಲೆ ಪಡೆದು ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ಖಾತರಿ ಪಡಿಸಿ­ಕೊಂಡು ದೂರು ನೀಡಬೇಕು. ಮೇಲ್ನೋ­ಟಕ್ಕೆ ಕಾಮಗಾರಿಯ ಗುಣ­ಮಟ್ಟದ ಬಗ್ಗೆ ದೂರುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.

ಪಂಚಾಯಿತಿ ವ್ಯಾಪ್ತಿಯ ಸುಮಾರು ರೂ.29.41 ಲಕ್ಷ ಮೌಲ್ಯದ 36 ಕಾಮಗಾರಿಗಳ ದಾಖಲೆಗಳನ್ನು ಪರಿಶೀಲಿಸಿ­ದರು. ಹಲವು ಕಾಮಗಾರಿ­ಗಳನ್ನು ಖುದ್ದಾಗಿ ಪರಿಶೀಲಿಸಿ ಅಧಿಕಾರಿಗಳಿಂದ ವಿವರಣೆ ಪಡೆದರು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ, ವಿವಿಧ ಇಲಾಖೆಗಳ ಅಧಿಕಾರಿಗಳು ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.