ADVERTISEMENT

ಬಡ್ತಿ, ವರ್ಗಾವಣೆ ದೂರುಗಳೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 10:00 IST
Last Updated 27 ಜನವರಿ 2012, 10:00 IST

ಕೋಲಾರ: ಕೌನ್ಸೆಲಿಂಗ್ ಮಾಡದೇ ವರ್ಗಾವಣೆ ಪ್ರಕ್ರಿಯೆ ಮಾಡಿ ಜೇಷ್ಠತೆ ಇದ್ದರೂ ವಂಚಿಸಲಾಗಿದೆ, ಜೇಷ್ಠತೆ ಕಡೆಗಣಿಸಿ ಬಡ್ತಿ ನೀಡಲಾಗಿದೆ, ಇಂಕ್ರಿ ಮೆಂಟ್ ನೀಡುವಲ್ಲಿ ಅನ್ಯಾಯವಾಗಿದೆ. ನಿಯಮ ಮೀರಿ ವರ್ಗಾಯಿಸಲಾಗಿದೆ...

- ಆರೋಪ- ದೂರುಗಳು ಕೇಳಿ ಬಂದಿದ್ದು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಯಲ್ಲಿ. ಹತ್ತಾರು ಶಿಕ್ಷರು, ಮುಖ್ಯಶಿಕ್ಷಕರು ಇಂಥ ದೂರುಗಳನ್ನು ಸಲ್ಲಿಸಲೆಂದೇ ಅಲ್ಲಿಗೆ ಬಂದಿದ್ದರು. ಮಂಗಳವಾರ ಇಲಾಖೆ ಹಮ್ಮಿಕೊಂಡಿದ್ದ ಶಿಕ್ಷಣ ಅದಾಲತ್‌ನಲ್ಲಿ ಶೈಕ್ಷಣಿಕ ಸಮಸ್ಯೆ ಗಳಿಗಿಂತಲೂ ಶಿಕ್ಷಕರ ಸಮಸ್ಯೆಗಳ ಕುರಿತ ದೂರುಗಳೇ ಹೆಚ್ಚಿದ್ದವು.

ಕೌನ್ಸಿಲಿಂಗ್ ಮಾಡದೇ ವರ್ಗಾವಣೆ ಪ್ರಕ್ರಿಯೆ ಮಾಡಿ ಜೇಷ್ಠತೆ ಇದ್ದರೂ ವಂಚಿಸಲಾಗಿದೆ ಎಂದು ನಗರದ ವಸತಿ ಶಾಲೆಯ ಮುಖ್ಯಶಿಕ್ಷಕ ಮುನಿಯಪ್ಪ ದೂರಿದರು. ಬಿಆರ್‌ಪಿ/ಸಿಆರ್‌ಪಿ ಹುದ್ದೆಗಳಿಗೆ ಭರ್ತಿ ಮಾಡುವ ಸಂದರ್ಭದಲ್ಲಿ ಪ್ರತಿಭಾವಂತ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಮುಳಬಾಗಲು ತಾಲ್ಲೂಕಿನ ಎಮ್ಮೆನತ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಓಬಳರೆಡ್ಡಿ ದೂರು ಸಲ್ಲಿಸಿದರು. 2006- 07ನೇ ಸಾಲಿನಲ್ಲಿ ವರ್ಗಾವಣೆಗೆ ಮನವಿ ಸಲ್ಲಿಸಿದರೂ ಕೌನ್ಸಿಲಿಂಗ್ ನಡೆಸದೆ ಸುಳ್ಳು ಮಾಹಿತಿ ನೀಡಿ ವಂಚಿಸಲಾಗಿದೆ ಎಂದು ಮತ್ತೊಬ್ಬ ಶಿಕ್ಷಕರು ಮನವಿ ಸಲ್ಲಿಸಿದರು. 

ಶಿಕ್ಷಕರು, ಸಾರ್ವಜನಿಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು  41 ಅಹವಾಲು ಸ್ವೀಕರಿಸಿದರು.

ಇಲಾಖೆಯ ಅಪರ ನಿರ್ದೇಶಕ ದಿವಾಕರ್ ಮತ್ತು ನಿರ್ದೇಶಕ ದೇವ ಪ್ರಕಾಶ್ ಅಹವಾಲುಗಳನ್ನು ಆಲಿಸಿ ಕೆಲವು ದೂರುಗಳ ಕುರಿತು ತನಿಖೆಗೂ ಆದೇಶಿಸಿದರು. ಕೆಲವು ದೂರುಗಳಿಗೆ ಸ್ಥಳದಲ್ಲೆ ಪರಿಹಾರ ಕ್ರಮವನ್ನೂ ಕೈಗೊಂಡರು.

ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ 607 ಕಡಗಳು ವಿಲೇವಾರಿಯಾಗದೇ ಉಳಿದಿವೆ. 294 ಕಡತಗಳನ್ನು ನೋಡೆಲ್ ಅಧಿಕಾರಿಗಳು ನೇಮಕ ಗೊಂಡ ನಂತರ ಜ. 20ರೊಳಗೆ ವಿಲೇವಾರಿ ಮಾಡಲಾಗಿದೆ  ಉಳಿದಂತೆ 313 ಕಡತಗಳು ಬಾಕಿ ಇವೆ, ಅವುಗಳಲ್ಲಿ 85 ಪ್ರಕರಣ ನ್ಯಾಯಾಲಯದಲ್ಲಿವೆ. ಜಿಲ್ಲೆಯ ಆರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ 822 ಕಡತಗಳು ಬಾಕಿ ಇದ್ದವು, ನೋಡೆಲ್ ಅಧಿಕಾರಿಗಳು ನೇಮಕಗೊಂಡ ನಂತರ 373 ಕಡತ ಗಳನ್ನು ವಿಲೇ ವಾರಿ ಮಾಡಲಾಗಿದೆ, ಇನ್ನು 449 ಕಡತಗಳು ಬಾಕಿ ಉಳಿದಿವೆ, 37 ಕಡತಗಳು ನ್ಯಾಯಾಲಯದಲ್ಲಿವೆ ಎಂದು ದೇವ ಪ್ರಕಾಶ್ ಹೇಳಿದರು.

ಇಲಾಖೆ ಜಂಟಿ ನಿರ್ದೇಶಕ ಚವ್ಹಾಣ್, ಡಿಡಿಪಿಐ ಗೋವಿಂದಯ್ಯ, ಡಯಟ್ ಡಿಡಿ ಅಬ್ದುಲ್ ಬಷೀರ್, ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಉಪ ಸಮನ್ವ ಯಾಧಿಕಾರಿ ಜಯರಾಮರೆಡ್ಡಿ, ಶಿಕ್ಷಣಾ ಧಿಕಾರಿಗಳಾದ ನಾಗೇಂದ್ರಪ್ರಸಾದ್, ಸುಬ್ರಹ್ಮಣ್ಯಂ, ಶ್ರೀನಿವಾಸಗೌಡ, ವಿಷಯ ಪರಿವೀಕ್ಷಕರಾದ ಸಿ.ಆರ್.ಅಶೋಕ್, ಜನಾರ್ಧನನಾಯ್ಡು, ಶಿವಮಾದಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.