ADVERTISEMENT

ಬರದ ನಡುವೆ ರಾಗಿ ಕೊಯ್ಲು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 9:50 IST
Last Updated 30 ಅಕ್ಟೋಬರ್ 2011, 9:50 IST

ಕೋಲಾರ: ಬರದ ನಡುವೆಯೇ ಜಿಲ್ಲೆಯಲ್ಲಿ ರಾಗಿ ಬೆಳೆ ಕೊಯ್ಲಿಗೆ ಬಂದಿದೆ. ಇನ್ನು ಮುಂದೆ ಮಳೆ ಸುರಿದರೆ ಬೆಳೆಗೆ ತೊಂದರೆಯಾಗಬಹುದು ಎಂಬ ಆಲೋಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಮುನ್ನೆಚ್ಚರಿಕೆ ಸಲುವಾಗಿ ಬಲಿತ ರಾಗಿ ತೆನೆಗಳನ್ನು ಕತ್ತರಿಸುವ ಕೆಲಸ ಶುರು ಮಾಡಿದ್ದಾರೆ. ಮುಂದಿನ ವಾರದಲ್ಲಿ ಮೊದಲ ಹಂತದ ರಾಗಿ ಕೊಯ್ಲು ಜಿಲ್ಲೆಯ ಎಲ್ಲೆಡೆ ಶುರುವಾಗುವ ಸಾಧ್ಯತೆ ಇದೆ.

ಜಿಲ್ಲೆಯ ಹಲವೆಡೆ ಮುಂಗಾರ ಆರಂಭದಲ್ಲಿ, ಜುಲೈ ಮೊದಲ ವಾರದಲ್ಲಿ ಬಿತ್ತನೆ ಮಾಡಿದ ರಾಗಿ ಈಗಾಗಲೇ ಬಲಿತಿದೆ. ತಡವಾಗಿ ಬಿತ್ತನೆ ಮಾಡಿದ ರಾಗಿ ಬೆಳೆ ಇನ್ನೂ ಕಾಳು ಬಲಿಯುವ ಹಂತದಲ್ಲಿದೆ.

ಬೆಳೆ ನಷ್ಟದ ಭೀತಿಯಲ್ಲಿರುವಾಗಲೇ ರಾಗಿ ಬಲಿತಿರುವುದು ವಿಶೇಷ. ನಷ್ಟದ ಪ್ರಮಾಣವನ್ನು ಕೃಷಿ ಇಲಾಖೆ ಈಗಾಗಲೇ ಅಂದಾಜಿಸಿದ್ದರೂ, ಮುಂಗಾರು ಆರಂಭದಲ್ಲಿ ಮತ್ತು ನಂತರದಲ್ಲಿ ಬಿತ್ತನೆ ಮಾಡಿದ ರಾಗಿ ಪೂರ್ಣ ಕೊಯ್ಲು ಆಗದ ಹೊರತು  ನಷ್ಟ ಪೂರ್ಣ ಚಿತ್ರ ದೊರಕುವುದಿಲ್ಲ.

2 ಎಕರೆಯಲ್ಲಿ ರಾಗಿ ಬೆಳೆದಿರುವ ತಾಲ್ಲೂಕಿನ ಹರಳಕುಂಟೆಯ ತಮ್ಮ ಜಮೀನಿನಲ್ಲಿ ನಾರಾಯಣಮ್ಮ ರಾಗಿ ತೆನೆಗಳನ್ನು ಮಾತ್ರ ಪ್ರತ್ಯೇಕಿಸುತ್ತಿದ್ದರು. ತೌಳು (ರಾಗಿ ತೆನೆಯ ಕೆಳಗಿನ, ಬುಡದವರೆಗಿನ ಕಾಂಡ) ಸಮೇತ ಕತ್ತರಿಸಿದರೆ ನಷ್ಟವಾಗುತ್ತದೆ. ಏಕೆಂದರೆ ಬಲಿತ ರಾಗಿ ತೆನೆಗಳ ನಡುವೆ ಇನ್ನೂ ಬಲಿಯುತ್ತಿರುವ ರಾಗಿತೆನೆಗಳೂ ಇವೆ. ಮಳೆ ಬಂದರೆ ಈ ಎರಡೂ ಹಂತದಲ್ಲಿರುವ ತೆನೆಗಳಿಗೆ ತೊಂದರೆಯಾಗಿ ನಷ್ಟವಾಗುತ್ತದೆ. ಹೀಗಾಗಿ ಬಲಿತ ರಾಗಿ ತೆನೆಗಳನ್ನು ಮಾತ್ರ ಕೀಳುತ್ತಿರುವೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಕೆಲವು ದಿನಗಳಿಂದ ಸುರಿದ ಮಳೆಗೆ ನೆಲ ತೇವವಿದೆ. ಆದರೆ ತೆನೆ ಒಣಗಿದೆ. ಕತ್ತರಿಸದಿದ್ದರೆ ತೆನೆ ಹಾಳಾಗುತ್ತದೆ. ಮತ್ತೆ ಕೈಗೆ ಸಿಗುವುದಿಲ್ಲ ಎಂಬುದು ಅವರ ಮುಂದಾಲೋಚನೆ.

ತಾಲ್ಲೂಕಿನ ದೊಡ್ನಹಳ್ಳಿಯ ರೈತ ನಾಗಪ್ಪ ಕಳೆದ ಮೂರು ದಿನದಿಂದ ತೆನೆ ಕತ್ತರಿಸುವ ಕೆಲಸವನ್ನು ಮಾಡುತ್ತಿದ್ದಾರೆ. 3 ಎಕರೆಯಲ್ಲಿ ಜುಲೈ ಮೊದಲ ವಾರದಲ್ಲಿ ಅವರ ಜಮೀನಿನಲ್ಲಿ ಚೆಲ್ಲಿದ ಇಂಡಾಫ್ 5 ತಳಿಯ ರಾಗಿ ತೆನೆ ಕೆಂಪಗೆ ಹರಳುಗಟ್ಟಿದೆ. ಅವರದೂ ಅದೇ ಚಿಂತೆ. ಮಳೆ ಬಂದರೆ ತೊಂದರೆಯಾಗಬಹುದು ಎಂಬ ಮುಂಜಾಗ್ರತೆ ಸಲುವಾಗಿ ಅವರು ರಾಗಿ ತೆನೆ ಕೀಳುವ ಕೆಲಸವನ್ನು 6 ಸಾವಿರ ರೂಪಾಯಿಗೆ ಗುತ್ತಿಗೆ ನೀಡಿದ್ದರು.

ಕೂಲಿ ಕೊರತೆ: ಕಳೆದ ಬಾರಿ ರಾಗಿ ಬೆಳೆಗಳನ್ನು ಕಾಂಡದ ಸಮೇತ ಕಿತ್ತು ರಾಶಿ ಹಾಕಿದ ಬಳಿಕ ಮಳೆ ಸುರಿದಿದ್ದರಿಂದ ಸಾಕಷ್ಟು ಬೆಳೆ ಕೈ ಬಿಟ್ಟಿತ್ತು. ಈ ಬಾರಿ ಹಾಗಾಗಬಾರದು ಎಂದು ತೆನೆಗಳನ್ನು ಮಾತ್ರ ಪ್ರತ್ಯೇಕಿಸುತ್ತಿದ್ದೇವೆ~ ಎಂದರು.

ಕಳೆದ ವರ್ಷ ನಾವೇ ತೆನೆಗಳನ್ನು ಕಿತ್ತಿದ್ದೆವು. ಆಗ ಕೂಲಿಗಳು ದೊರಕುತ್ತಿದ್ದರು. ಆದರೆ ಈ ಬಾರಿ ಕೂಲಿಗಳು ಸಿಗಲಿಲ್ಲ. ಹೀಗಾಗಿ ಗುತ್ತಿಗೆ ನೀಡಿದ್ದೇವೆ~ ಎಂದು ಅವರು ತಿಳಿಸಿದರು.

ಮುಂಗಾರು ಆರಂಭದಲ್ಲಿ ಜಿಲ್ಲೆಯ ಅಲ್ಲಲ್ಲಿ ಬಿತ್ತನೆ ಮಾಡಿದ ರಾಗಿ ಮಾತ್ರ ಈಗ ಕಟಾವಿಗೆ ಬಂದಿದೆ. ನವೆಂಬರ್ ಎರಡನೇ ವಾರದ ಹೊತ್ತಿಗೆ ರಾಗಿ ಕೊಯ್ಲು ಸಂಪೂರ್ಣವಾಗಿ ಶುರುವಾಗಲಿದೆ. ಮೊದಲಿಗೆ ಮತ್ತು ತಡವಾಗಿ ಬಿತ್ತನೆ ಮಾಡಿದ ರಾಗಿ ಬೆಳೆಗಳೆರಡೂ ಆ ಹೊತ್ತಿಗೆ ಕೊಯ್ಲಿಗೆ ಸಿದ್ಧವಾಗಿರುತ್ತದೆ ಎಂಬುದು ಕೃಷಿ ಇಲಾಖೆ ಮೂಲಗಳ ನುಡಿ. ಜಿಲ್ಲೆಯಲ್ಲಿ 60,011 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.