ಕೋಲಾರ: ಬಿಳಿ ಮಾಂಜಿ, ಕಪ್ಪು ಮಾಂಜಿ, ಬೂತಾಯಿ, ಬಂಗುಡೆ, ಕಟ್ಲ, ರೊಹು, ಅಂಜಲ್‌ತುಂಡು, ಮದ್ಮಲ್, ಮುಡ್ಡಾವ್, ಏರಿ, ಸೀಗಡಿ, ಕಾಣೆ, ಮಲ್ಲೆಟ್, ಬರಕೂಡ, ಇವೆಲ್ಲದ್ದರ ಜೊತೆಗೆ ಏಡಿ, ಕೆರೆ ಮೀನುಗಳು...!
-ಎಷ್ಟೊಂದು ಬಗೆಯ, ಕರಾವಳಿ ಪ್ರದೇಶಗಳಲ್ಲಿ ಮಾತ್ರ ದೊರಕುವ ಈ ಮೀನುಗಳು ಬರದ ನಾಡಾದ ನಗರದಲ್ಲಿಯೂ ಸಿಗುತ್ತವೆಯೇ? ಅದರಲ್ಲೂ ತಾಜಾ ಮೀನುಗಳು ? ಅನುಮಾನ ಬೇಡ. ಅದೂ ಸುಲಭದರಲ್ಲಿ ಮತ್ತು ಸ್ವಚ್ಛ ವಾತಾವರಣದಲ್ಲಿ!ಬೇಕೆಂದವರು ತಾ.ಪಂ. ಕಚೇರಿ ಎದುರಿಗಿರುವ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಳಿಗೆಗೆ ಬಂದರೆ ಸಾಕು. ತಂಪು ಹವೆಯಿಂದ ಕೂಡಿ ಮಳಿಗೆಯಲ್ಲಿ ನಗುಮುಖದ ಯುವಕರು ನಿಮಗೆ ಬೇಕೆಂದ ಮೀನುಗಳನ್ನು ಸ್ವಚ್ಛಗೊಳಿಸಿ ಕೊಡುತ್ತಾರೆ. ಅಲ್ಲಿ ಮುಸುರುವ ನೊಣಗಳಿಲ್ಲ. ಕೊಳಕು ವಾತಾವರಣವಿಲ್ಲ. ನೇರ ಮಂಗಳೂರಿನಿಂದಲೇ ಈ ಮೀನುಗಳನ್ನು ತರಿಸುವುದು ವಿಶೇಷ. ಅದು ಸುಸಜ್ಜಿತ, ಆಧುನಿಕ, ಹವಾನಿಯಂತ್ರಿತ ಮಳಿಗೆ.
ಮಾಂಸದ ಮಾರುಕಟ್ಟೆಯಲ್ಲಿ ಒಂದೆರಡು ಬಗೆಯ ಮೀನುಗಳು ಮಾತ್ರ ದೊರಕುತ್ತವೆ ಅಷ್ಟೆ. ಬಹುತೇಕ ಸಂದರ್ಭಗಳಲ್ಲಿ ಅಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿರುತ್ತದೆ. ವೈವಿಧ್ಯ ಮೀನು, ಸುಲಭ ಬೆಲೆ ಮತ್ತು ಸ್ವಚ್ಛತೆ ಕಾರಣಕ್ಕೆ ನಿಗಮದ ಮೀನು ಮಳಿಗೆ ಇತ್ತೀಚೆಗೆ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ ಎಂಬುದೂ ಗಮನಾರ್ಹ.
ರೂ 35ರಿಂದ ಶುರು: ಕೋಳಿ, ಕುರಿ ಮೇಕೆ ಮಾಂಸ ಬೇಕೆಂದರೆ ಕನಿಷ್ಠ 100 ರೂಪಾಯಿ ಬೇಕೇಬೇಕು. ಆದರೆ ಇಲ್ಲಿ ಕೇವಲ 35 ರೂಪಾಯಿಗೂ ಸಿಗುತ್ತದೆ. ನಿದರ್ಶನಕ್ಕೆ ಬೂತಾಯಿ ಹೆಸರಿನ ಮೀನು ಕೆಜಿ 1ಕ್ಕೆ ಕೇವಲ 35 ರೂಪಾಯಿ. ಕಡಿಮೆ ಎಂದರೂ 15ರಿಂದ 20 ಮೀನುಗಳು ದೊರಕುತ್ತವೆ. ಸಣ್ಣ ಕುಟುಂಬವೊಂದಕ್ಕೆ ಅದು ಪುಷ್ಕಳ ಆಹಾರವನ್ನು ಪೂರೈಸುತ್ತದೆ.
ಇತರೆ ಮೀನುಗಳ ಬೆಲೆ ದುಬಾರಿ ಎಂಬುದನ್ನು ಮರೆಯುವಂತಿಲ್ಲ. ಕಪ್ಪು ಮಾಂಜಿ-ರೂ 265, ಬಿಳಿ ಮಾಂಜಿ-ರೂ 350, ಸೀಗಡಿ-ರೂ 140, ಕೊಳಿಚ್ಚಿ-ರೂ 140. ಬಂಗಡೆ ಮೀನು ಕೆಜಿಗೆ ಕೇವಲ ರೂ 80.
ಭರ್ಜರಿ ವ್ಯಾಪಾರ: ಮಾ.4ಕ್ಕೆ ಮಳಿಗೆ ಆರಂಭವಾದಾಗ ಇದ್ದ ಬೇಡಿಕೆ ಈಗ ದುಪ್ಪಟ್ಟಾಗಿದೆ. ನಿತ್ಯ ಸರಾಸರಿ 8ರಿಂದ 10 ಸಾವಿರ ರೂಪಾಯಿಯಷ್ಟು ವ್ಯಾಪಾರ ನಡೆಯುತ್ತಿದೆ. ಭಾನುವಾರ ಮಾತ್ರ ಅತ್ಯಧಿಕ ಬೇಡಿಕೆ . ಹೀಗಾಗಿ ಈಗ ಟೋಕನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂಬುದು ಮಳಿಗೆಯ ಮಾರಾಟ ವ್ಯವಸ್ಥಾಪಕ ತಿಪ್ಪಣ್ಣ ಅವರ ನುಡಿ. ಮಳಿಗೆಯ ಆವರಣದಲ್ಲಿ ಫ್ರೀಜರ್ ಕೊಠಡಿಯನ್ನೂ ಸ್ಥಾಪಿಸಲಾಗಿದೆ. ಅಲ್ಲಿ ಮೀನುಗಳು ಕೆಡದಂತೆ ದಾಸ್ತಾನಿಡಬಹುದು. ದೊಡ್ಡ ಪ್ರಮಾಣದ ಮೀನುಗಳನ್ನು ತರಿಸಿದಾಗದ ಸಂಗ್ರಹಿಸಿಡುವ ಸಮಸ್ಯೆ ಇಲ್ಲ ಎನ್ನುತ್ತಾರೆ ಅವರು.
ಕ್ಯಾಂಟೀನ್ ಶೀಘ್ರ: ಮಳಿಗೆಯಲ್ಲಿ ಮೀನು ಮಾತ್ರ ದೊರಕುವುದಿಲ್ಲ. ಬದಲಿಗೆ, ಇನ್ನು ಕೆಲವೇ ದಿನಗಳಲ್ಲಿ ಮೀನು ಆಹಾರವೂ ಕೂಡ ದೊರೆಯಲಿದೆ. ಈ ತಿಂಗಳ ಅಂತ್ಯದವೇಳೆಗೆ ಕ್ಯಾಂಟಿನ್ ಶುರು ಮಾಡಲು ಎಲ್ಲ ಸಿದ್ಧತೆಗಳೂ ನಡೆದಿವೆ. ಸದ್ಯಕ್ಕೆ ನಗರದಲ್ಲಿ ಮೀನು ಆಹಾರ ಕ್ಯಾಂಟೀನ್‌ಗಳಿಲ್ಲ. ಆ ಕೊರತೆಯನ್ನೂ ನಿಗಮ ನೀಗಿಸಲಿದೆ.
ಏಡಿಯೂ ಉಂಟು: ಮೀನುಗಳ ಜೊತೆಗೆ ಏಡಿಯೂ ದೊರೆಯುತ್ತದೆ. ಆದರೆ ಬೇಡಿಕೆ ಆಧರಿಸಿ ಕೆಲವು ಕೆಜಿಗಳಷ್ಟು ಏಡಿಯನ್ನು ಮಾತ್ರ ತರಿಸಲಾಗುತ್ತಿದೆ ಎಂಬುದು ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ ರೇಣುಕಾರಾಧ್ಯ ಅವರ ನುಡಿ. ಮನೆಯ ಅಲಂಕಾರಕ್ಕಾಗಿ ವಿವಿಧ ವಿನ್ಯಾಸದ ಅಕ್ವೇರಿಯಂಗಳು, ಬಣ್ಣದ ಮೀನುಗಳು ಮತ್ತು ಪೂರಕ ಸಾಮಗ್ರಿಗಳೂ ಕೂಡ ಕೆಲವೇ ದಿನಗಳಲ್ಲಿ ಇದೇ ಮಳಿಗೆಯಲ್ಲಿ ದೊರೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.