ADVERTISEMENT

ಬೆಮಲ್ ನಗರ ಆಲದ ಮರ ವೃತ್ತದಲ್ಲಿ ‘ಸಂಚಾರಿ ದೀಪ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:02 IST
Last Updated 26 ಸೆಪ್ಟೆಂಬರ್ 2013, 6:02 IST

ಕೆಜಿಎಫ್‌: ಬೆಮಲ್‌ ನಗರದ ಬಹು ದಿನದ ಬೇಡಿಕೆಯಾದ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲು ಮುಹೂರ್ತ ಕೂಡಿಬಂದಿದ್ದು, ಐದು ರಸ್ತೆಗಳು ಸೇರುವ ಆಲದ ಮರದ ಬಳಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಟ್ರಾಫಿಕ್‌ ಸಿಗ್ನಲ್‌ ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಆಲದ ಮರದ ಬಳಿ ಜನ ಮತ್ತು ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಆಟೊ ಸ್ಟ್ಯಾಂಡ್‌, ತರಕಾರಿ ಮಾರಾಟ, ನಿವೃತ್ತ ನೌಕರರ ಓಡಾಟದಿಂದಾಗಿ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಅದರಲ್ಲೂ ಬೆಮಲ್‌ ಕಾರ್ಖಾನೆಯ ಕೆಲಸದ ಅವಧಿಯಲ್ಲಿ ದಟ್ಟಣೆ ಮತ್ತಷ್ಟು ಹೆಚ್ಚಾಗಿರುತ್ತದೆ.

ಈ ಜಾಗದಲ್ಲಿ ಐದು ರಸ್ತೆಗಳು ಕೂಡುತ್ತವೆ. ಬೆಮಲ್‌ ಆಫೀಸರ್ಸ್‌ ಕ್ವಾರ್ಟರ್ಸ್, ಬೇತಮಂಗಲ, ಬಂಗಾರಪೇಟೆ ಕಡೆಗೆ ಮತ್ತು ಕೆಜಿಎಫ್‌ ಜೋಡಿ ರಸ್ತೆಗೆ ಸೇರುವ ವೃತ್ತ ಬಹಳ ಸಂಕೀರ್ಣವಾಗಿದೆ. ಯಾವ ವಾಹನ ಯಾವ ದಾರಿಯಲ್ಲಿ ಬರುತ್ತಿದೆ ಎಂದು ತಿಳಿಯುವುದೇ ಕಷ್ಟವಾಗುತ್ತಿದೆ. ಇದರಿಂದಾಗಿ ಅಪಘಾತ, ಚಾಲಕರ ನಡುವೆ ವಾಗ್ವಾದ, ಜಗಳ ಸಾಮಾನ್ಯವಾಗಿದ್ದವು.

ಈ ಹಿನ್ನೆಲೆಯಲ್ಲಿ ಇಲಾಖೆಯಿಂದ ಮಂಜೂರಾಗಿ ಬಂದ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲು ಆಲದ ಮರದ ವೃತ್ತವೇ ಸೂಕ್ತವಾದ ಜಾಗ ಎಂದು ಪೊಲೀಸರು ನಿರ್ಧರಿಸಿದ್ದರು.

ಪೊಲೀಸ್‌ ಇಲಾಖೆಗೆ ಟ್ರಾಫಿಕ್‌ ಸಿಗ್ನಲ್‌ ದೀಪಗಳನ್ನು ಸರಬರಾಜು ಮಾಡುವ ಸಿಎಂಎಸ್‌ ಟ್ರಾಫಿಕ್‌ ಸಿಸ್ಟಮ್ಸ್‌ ಲಿಮಿಟೆಡ್‌ ಕಂಪೆನಿ ಪ್ರಸ್ತುತ ದೀಪಗಳನ್ನು ಅಳವಡಿಸುವ ಬಹುತೇಕ ಕಾರ್ಯ ಮುಗಿಸಿದೆ.

ಐದು ರಸ್ತೆಗಳಲ್ಲಿ ಕಂಡು ಬರುವ ವಾಹನ ದಟ್ಟಣೆ ನೋಡಿಕೊಂಡು ದೀಪಗಳಿಗೆ ಕ್ಷಣ ಗಣನೆ ನಿಗದಿ ಮಾಡಲಾಗುವುದು. ದೀಪದಿಂದಾಗಿ ಅಪಘಾತ ನಿಯಂತ್ರಿ­ಸ­ಬಹುದು ಮತ್ತು ಟ್ರಾಫಿಕ್‌ ಪ್ರಜ್ಞೆಯನ್ನು ಸಾರ್ವಜನಿಕರಲ್ಲಿ ಮೂಡಿಸಬಹುದು ಎಂದು ಪೊಲೀಸ್‌ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್‌ ಸಫೆಟ್‌ ತರಬೇತಿಗಾಗಿ ಹೊರ ರಾಜ್ಯಕ್ಕೆ ಹೋಗಿದ್ದು, ಅವರು ಬಂದ ನಂತರ ಸಿಗ್ನಲ್‌ ದೀಪವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT