ADVERTISEMENT

ಬೆವರು ಸುರಿಸುತ್ತಿರುವ `ಸ್ವತಂತ್ರರು'

ಮಾಲೂರಿನಲ್ಲಿ ಹೆಚ್ಚಿದ ಚುನಾವಣಾ ಕಾವು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 10:48 IST
Last Updated 11 ಡಿಸೆಂಬರ್ 2012, 10:48 IST

ಮಾಲೂರು: ತಾಲ್ಲೂಕಿನಲ್ಲಿ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲ ಮುಖಂಡರು ಸ್ವತಂತ್ರ ಅಭ್ಯರ್ಥಿಗಳಾಗಿ ನಿಲ್ಲಲು ಸಕಲ ಸಿದ್ಧತೆ ಮಾಡಿಕೊಳ್ಳುವ ಜತೆಗೆ ಚುನಾವಣೆಗೆ ಮುನ್ನವೆ ಪ್ರಚಾರ ಕೈಗೊಂಡಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕಾದಾಟ, ಒಳ ಜಗಳ ತಮಗೆ ಲಾಭವಾಗುವುದೇ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಇದಕ್ಕೆ ಕಾರಣ ರಾಜ್ಯದಲ್ಲಿ ಉದಯಿಸಿರುವ `ಹೊಸ ಪಕ್ಷ' ಎನ್ನಲಾಗುತ್ತಿದೆ. ಸರ್ಕಾರ ಯಾವ ವೇಳೆಯಲ್ಲಾದರೂ ವಿಸರ್ಜನೆಯಾಗಬಹುದು ಮುಂಜಾಗ್ರತೆ ಕ್ರಮವಾಗಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿ ಇಲ್ಲಿವರೆಗೆ ಸಂತಹಳ್ಳಿ ರಾಮೇಗೌಡ ಹೊರತುಪಡಿಸಿ ಯಾವುದೇ ಸ್ವತಂತ್ರ ಅಭ್ಯರ್ಥಿ ಗೆದ್ದ ಉದಾಹರಣೆ ಇಲ್ಲ. ಆ ಗೆಲುವು ಐದು ದಶಕಗಳ ಹಿಂದಿನದು. ಈಗ ಮತ್ತೆ ಅಂಥ ಗೆಲುವಿಗಾಗಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಓರೆಗಲ್ಲಿಗೆ ಹಚ್ಚಲು ಸ್ವತಂತ್ರ ಅಭ್ಯರ್ಥಿಗಳು ಸಿದ್ಧರಾಗಿದ್ದಾರೆ.

ಎರಡು ಅವಧಿಯಿಂದ ಶಾಸಕರಾಗಿರುವ ಎಸ್.ಎನ್.ಕೃಷ್ಣಯ್ಯಶೆಟ್ಟಿ ಮತ್ತೊಮ್ಮೆ ಅಧಿಕಾರ ಪಡೆಯುವ ಉತ್ಸಾಹದಲ್ಲಿದ್ದಾರೆ. ಅದಕ್ಕಾಗಿ ಜನರನ್ನು ಸೆಳೆಯಲು `ಸಮಾಜ ಸೇವೆ' ಈಗಾಗಲೇ ಆರಂಭವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಜೆ.ಕೃಷ್ಣಸಿಂಗ್ ಬೆಂಬಲಿಗರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ.

ಇನ್ನೂ ವಕೀಲ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಲಾಗುತ್ತಿದ್ದರೂ; ಕೆಪಿಸಿಸಿ ಸದಸ್ಯರಾದ ಎಸ್.ಎನ್.ರಘುನಾಥ್, ಎಚ್.ಕೆ.ಗೋವಿಂದಪ್ಪ, ಸಿ.ಲಕ್ಷ್ಮೀನಾರಾಯಣ್, ಟಿ.ಪಿ.ಕೃಷ್ಣಪ್ಪ ಸೇರಿದಂತೆ 15 ಮಂದಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.

ಮೂರು ಬಾರಿ ಶಾಸಕರಾಗಿದ್ದ ಎ.ನಾಗರಾಜು ಮತ್ತೆ ಕಾಂಗ್ರೆಸ್‌ಗೆ ಅವಕಾಶ ನೀಡಲು ಕೋರುತ್ತಿದ್ದಾರೆ. ಆದರೆ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಇದಕ್ಕೆ ತೊಡರಾಗಿದ್ದಾರೆ ಎನ್ನುತ್ತವೆ ಮೂಲಗಳು. ಒಂದು ವೇಳೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದರೂ ನಾಗರಾಜು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.ಜೆಡಿಎಸ್‌ನಿಂದ ಟಿಕೆಟ್‌ಗಾಗಿ ಹಾತೊರೆಯುತ್ತಿರುವ ಮುಖಂಡರು ಕೂಡಾ ಒಂದು ವೇಳೆ ಅವಕಾಶ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವ ಸೂಚನೆ ನೀಡುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಆರ್.ಪ್ರಭಾಕರ್, ಕೋಡಿಹಳ್ಳಿ ಮಂಜುನಾಥ್ ತಾಲ್ಲೂಕು ಪ್ರವೇಶ ಮಾಡಿದ್ದರಿಂದ ಒಗ್ಗಟ್ಟಾಗಿದ್ದ ಜೆಡಿಎಸ್‌ನಲ್ಲೂ ಟಿಕೆಟ್‌ಗಾಗಿ ಪೈಪೋಟಿ ಎದುರಾಗಿವೆ. ಒಂದು ವೇಳೆ ಮಂಜುನಾಥ್ ಅವರಿಗೆ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲ್ಲಿದ್ದಾರೆ. ಇವರ ನಡುವೆ ಸ್ಥಳೀಯರಾಗಿರುವ ಕೆ.ವೈ.ನಂಜೇಗೌಡ, ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್‌ಗೌಡ ಟಿಕೆಟ್ ಆಕಾಂಕ್ಷಿಗಳಾಗಿರುವುದಾಗಿ ಈಚೆಗೆ ನಡೆದ ಸಭೆಯಲ್ಲಿ ಹೇಳಿಕೊಂಡಿದ್ದಾರೆ.

ಜಿ.ಪಂ. ಮಾಜಿ ಸದಸ್ಯ ಜಿ.ಇ.ರಾಮೇಗೌಡ ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಕಳೆದ ಆರೇಳು ತಿಂಗಳಿನಿಂದ ತಮ್ಮ ಟ್ರಸ್ಟ್ ಮೂಲಕ ಹಲ ಕಾರ್ಯಕ್ರಮ ಆಯೋಜಿಸುತ್ತಾ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸ್ವತಂತ್ರ ಅಭ್ಯರ್ಥಿಗಳು ಈ ಬಾರಿ ಮತದಾರರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.