ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹ; ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 7:25 IST
Last Updated 2 ಮಾರ್ಚ್ 2012, 7:25 IST

ಕೆಜಿಎಫ್: ತಾಲ್ಲೂಕು ಕೇಂದ್ರವನ್ನಾಗಿ ಕೆಜಿಎಫ್ ನಗರವನ್ನು ಘೋಷಿಸಬೇಕು ಎಂಬುದೂ ಸೇರಿದಂತೆ ಎಂಟು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ನಗರದಲ್ಲಿ ಮೆರವಣಿಗೆ ನಡೆಸಿ ನಾಡಕಚೇರಿಗೆ ಮುತ್ತಿಗೆ ಹಾಕಿದರು.

ಶಾಲಾ-ಕಾಲೇಜುಗಳಿಗೆ ನಿಂತು ಹೋಗಿರುವ ವಿದ್ಯಾರ್ಥಿ ವೇತನವನ್ನು ಕೂಡಲೇ ಮಂಜೂರು ಮಾಡಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನ ಮುಂತಾದ ಸರ್ಕಾರದ ಪಿಂಚಣಿಗಳು  ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಬೇಕು. ಬಜೆಟ್‌ನಲ್ಲಿ ದಲಿತರ ಅಭಿವೃದ್ಧಿಗೆ ಶೇ. 25 ರಷ್ಟನ್ನು ಮೀಸಲಿಡಬೇಕು.
 
ಸಫಾಯಿ ಕರ್ಮಚಾರಿಗಳಿಗೆ ವಿಶೇಷ ಪಾಕೇಜ್ ನೀಡಬೇಕು. ನಗರಸಭೆಯಲ್ಲಿ ದಲಿತರ ಸಭೆಯನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಕರೆಯಬೇಕು. ಆಟೋ ಚಾಲಕರಿಗೆ ಸಾಲ ಮಂಜೂರು ಮಾಡಬೇಕು ಮತ್ತು ಕೂಳೂರಿನಲ್ಲಿ ಅಗ್ನಿ ದುರಂತದಲ್ಲಿ ಮನೆ ಕಳೆದುಕೊಂಡ ನತದೃಷ್ಟರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆಯಾಗಿತ್ತು.

ವಿಶೇಷ ತಹಶೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಲಾಯಿತು. ಡಿವೈಎಸ್ಪಿ ಎಂ.ವಿ.ಶೇಷನ್, ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಸಮಿತಿಯ ಮುಖಂಡರಾದ ಸೂಲಿಕುಂಟೆ ರಮೇಶ್, ನರಸಿಂಹ, ಕುಮಾರ್, ರವಿಕುಮಾರ್, ಮುತ್ತುಕುಮಾರ್, ಲೋಗನಾಥನ್, ಟಿ.ನಾಗರಾಜ್, ಮಸೂದ್ ಇಮ್ರಾನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.