ADVERTISEMENT

ಭ್ರಷ್ಟಾಚಾರಕ್ಕೆ ಕಂದಾಯ ಅಧಿಕಾರಿಗಳೇ ಕಾರಣ

ಸಭೆಯಲ್ಲಿ ವಿಧಾನಸಭಾ ಅಧ್ಯಕ್ಷ ರಮೇಶ್‌ಕುಮಾರ್ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 11:32 IST
Last Updated 13 ಜೂನ್ 2018, 11:32 IST

ಕೋಲಾರ: ‘ಸಾಂಕ್ರಾಮಿಕ ಕಾಯಿಲೆಯಂತೆ ಹರಡಿರುವ ಪೋಡಿ ಮತ್ತು ಭ್ರಷ್ಟಾಚಾರ ಸಮಸ್ಯೆಗೆ ಕಂದಾಯ ಇಲಾಖೆ ಅಧಿಕಾರಿಗಳೇ ಕಾರಣ. ಸಮಸ್ಯೆ ಬಗೆಹರಿಸಲು ಹೇಳಿದರೆ ತಲಹರಟೆ ಮಾಡುತ್ತಾ ಕುಳಿತಿರುತ್ತಾರೆ’ ಎಂದು ವಿಧಾನಸಭಾ ಅಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಸಿಡಿಮಿಡಿಗೊಂಡರು.

ನಗರದಲ್ಲಿ ಮಂಗಳವಾರ ನಡೆದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕಂದಾಯ ಅಧಿಕಾರಿಗಳು ನೆಟ್ಟಗೆ ಕೆಲಸ ಮಾಡುವುದಿಲ್ಲ. ಊರಿನ ಉಸಾಬರಿ ಮಾಡುತ್ತಾ ಕಾಲ ಕಳೆಯುವ ಅವರಿಗೆ ಕಚೇರಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶ್ರೀನಿವಾಸಪುರ ಕ್ಷೇತ್ರದಲ್ಲಿ ಪೋಡಿ, ಭ್ರಷ್ಟಾಚಾರ ಸಮಸ್ಯೆ ಬಗೆಹರಿಯಬೇಕು. ಇಡೀ ಜಿಲ್ಲೆಯದ್ದಕ್ಕೆ ನಾನೇನು ಮಾಡಲಾರೆ. ನನ್ನ ಕ್ಷೇತ್ರದಲ್ಲಿ ಎಲ್ಲಾ ಸರಿಹೋಗಬೇಕಷ್ಟೆ. ನಾನು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ ಜನರ ಋಣ ತೀರಿಸಬೇಕಿದೆ. ನನ್ನನ್ನು ಅತಿ ಕೆಟ್ಟವನಾಗಿ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಕೋಲಾರ ತಾಲ್ಲೂಕಿನಲ್ಲಿ ಈವರೆಗೆ ಆಡಳಿತ ಹೇಗಿತ್ತು ಎನ್ನುವುದು ನನಗೆ ಬೇಕಿಲ್ಲ. ಸಮಸ್ಯೆ ಇದ್ದರೆ ನೇರವಾಗಿ ತಿಳಿಸಿ. ಕ್ಷೇತ್ರದ ಶಾಸಕ ಶ್ರೀನಿವಾಸಗೌಡರಿಗೂ ಹೇಳಿ ಬಗೆಹರಿಸೋಣ. ಅದನ್ನು ಬಿಟ್ಟು ಇಲ್ಲಸಲ್ಲದ ಕಾರಣ ಹೇಳಿಕೊಂಡು ಜನರ ಕೆಲಸ ಮಾಡಿಕೊಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದರು.

52 ಕಡತ ಬಾಕಿ: ‘ಶ್ರೀನಿವಾಸಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪೋಡಿ ಸಮಸ್ಯೆಗೆ ಸಂಬಂಧಿಸಿದಂತೆ 152 ಕಡತಗಳು, 1,025 ಪ್ರಕರಣಗಳು ಬಾಕಿ ಇವೆ’ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್‌, ‘ತ್ರಿಲೋಕಚಂದ್ರ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ 5 ಕಂದಾಯ ತಾಲ್ಲೂಕಿಗಳಿಗೂ ಭೇಟಿ ನೀಡಿ ಪೋಡಿ ವಿಚಾರವಾಗಿ 1ರಿಂದ 10 ಮತ್ತು 1ರಿಂದ 5ರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸಲಹೆ ನೀಡಿದ್ದೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಇದಕ್ಕೆಲ್ಲಾ ಭ್ರಷ್ಟಾಚಾರವೇ ಕಾರಣ. ಸಮಸ್ಯೆ ಬಗೆಹರಿಸಿದರೆ ಅಧಿಕಾರಿಗಳಿಗೆ ಲಾಭ ಬರುವುದಿಲ್ಲ. ಹೀಗಾಗಿ ಸಮಸ್ಯೆ ಜೀವಂತವಾಗಿಟ್ಟಿದ್ದಾರೆ’ ಎಂದು ಕಿಡಿಕಾರಿದರು.

‘ಅರ್ಹ ಫಲಾನುಭವಿಗಳಿಗೆ ಅಂಚೆ ಮೂಲಕ ಸಾಗುವಳಿ ಚೀಟಿ ಕಳುಹಿಸುವಂತೆ ಜನವರಿ ತಿಂಗಳಲ್ಲೇ ಸೂಚಿಸಿದ್ದೆ. ಆದರೂ ಕಳುಹಿಸಿಲ್ಲ. ಚಲನ್‌ ಇನ್ನೊಂದು, ಮತ್ತೊಂದು ಕಾರಣ ಹೇಳುತ್ತಾ ಸತಾಯಿಸಬೇಡಿ. ಸಿದ್ಧವಿರುವುದನ್ನು ಕಳುಹಿಸಿ. ಸ್ಮಶಾನ ಜಾಗಗಳಿಗೆ ಸಂಬಂಧಿಸಿದಂತೆ ಬಾಕಿ ಕೆಲಸಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

ನೋಟಿಸ್‌ ನೀಡಬೇಕು: ‘ಸ್ಮಶಾನದ ಜಾಗ ಒತ್ತುವರಿಯಾಗಿದ್ದರೆ ಸರ್ವೆ ಅಧಿಕಾರಿಗಳೊಂದಿಗೆ ತೆರಳಿ ಜಾಗ ಗುರುತಿಸಬೇಕು. ಒತ್ತುವರಿದಾರರಿಗೆ ನೋಟಿಸ್‌ ನೀಡಬೇಕು. ಸ್ಮಶಾನಗಳ ಒತ್ತುವರಿದಾರರ ಪಟ್ಟಿ ತಯಾರಿಸಬೇಕು. ಯಾವುದೇ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದಿದ್ದರೆ ಪರ್ಯಾಯವಾಗಿ ಜಮೀನು ಖರೀದಿಸಿ ಸ್ಮಶಾನಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

ಶಿಕ್ಷಣ ಇಲಾಖೆ, ತೋಟಗಾರಿಕೆ, ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಯಿತು. ಕೋಚಿಮುಲ್ ಅಧ್ಯಕ್ಷ ಎನ್‌.ಜಿ.ಬ್ಯಾಟಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ ಹಾಜರಿದ್ದರು.

ಭೂಮಿ ಇಲ್ಲದ ಪರಿಶಿಷ್ಟರು ಭೂಮಿ ಕೇಳಿದರೆ ಅಧಿಕಾರಿಗಳು ಸರ್ಕಾರಿ ಜಾಗ ಲಭ್ಯವಿಲ್ಲ ಎಂದು ಹೇಳುತ್ತಾರೆ. ಅದೇ ಭೂಗಳ್ಳರು ಕೇಳಿದರೆ ವಾರದಲ್ಲೇ ಮಂಜೂರು ಮಾಡುತ್ತಾರೆ
ಕೆ.ಆರ್‌.ರಮೇಶ್‌ಕುಮಾರ್‌, ವಿಧಾನಸಭಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.