ADVERTISEMENT

ಮರದ ಮಿಲ್‌ಗೆ ಬೆಂಕಿ: ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:45 IST
Last Updated 10 ಸೆಪ್ಟೆಂಬರ್ 2011, 10:45 IST

ಕೆಜಿಎಫ್: ರಾಬರ್ಟ್‌ಸನ್‌ಪೇಟೆ ಸ್ವರ್ಣನಗರದ ಜೋಗಮಯ್ಯ ಸಾಮಿಲ್‌ಗೆ ಶುಕ್ರವಾರ ಮುಂಜಾನೆ ಅಕಸ್ಮಿಕ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣ ಮರ ಬೆಂಕಿಗೆ ಆಹುತಿಯಾಗಿದೆ.

ಮುಂಜಾನೆ ಸುಮಾರು 3.45ಕ್ಕೆ ಮಿಲ್‌ನಲ್ಲಿ ಅಳವಡಿಸಲಾಗಿದ್ದ ಕೆಪಾಸಿಟರ್ ಸಿಡಿಯಿತು. ಅದರೊಳಗಿದ್ದ ಎಣ್ಣೆ ಹೊರ ಚೆಲ್ಲಿ ಮರಗಳ ಮೇಲೆ ಬಿದ್ದು, ಬೆಂಕಿ ಹೊತ್ತಿಕೊಂಡು ಹರಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ದುರ್ಘಟನೆಯಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ತೇಗ, ಆಸ್ಟ್ರೇಲಿಯನ್ ಹೊನ್ನೆ, ಬೀಟೆ ಮರಗಳು ಸುಟ್ಟುಹೋಗಿವೆ.

ಅಗ್ನಿಶಾಮಕದಳದ ಎರಡು ವಾಹನಗಳು ಮತ್ತು ಬೆಮಲ್ ಅಗ್ನಿಶಾಮಕದಳದ ಎರಡು ವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದವು. ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ. ಅಗ್ನಿಶಾಮಕದಳ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದ ಅಕ್ಕಪಕ್ಕದಲ್ಲಿರುವ ಎರಡು ಮರದ ಮಿಲ್‌ಗಳಿಗೆ ಬೆಂಕಿ ಹರಡುವುದನ್ನು ತಡೆಯಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ ಸ್ಥಳಕ್ಕೆ ಭೇಟಿ ನೀಡಿದ್ದರು. ಸಾಮಿಲ್‌ನ ಮಾಲೀಕ ರಾವೋಜಿರಾವ್ ರಾಬರ್ಟ್‌ಸನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.