ಶ್ರೀನಿವಾಸಪುರ: ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಾವಿನ ಗಿಡಗಳಿಗೆ ಕೀಟಬಾಧೆ ಕಾಣಿಸಿಕೊಂಡಿದ್ದು, ಚಿಕ್ಕ ಗಾತ್ರದ ಕೀಟಗಳು ಚಿಗುರನ್ನು ಕತ್ತರಿಸಿ ತಿನ್ನುತ್ತಿವೆ. ಕೀಟದ ಹಾವಳಿಗೆ ತುತ್ತಾದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತಿದೆ.
ತಾಲ್ಲೂಕಿನಲ್ಲಿ ಮಾವಿನ ಬೆಳೆಯ ವಿಸ್ತರಣೆ ಮುಂದುವರಿದಿದೆ. ನಾಟಿ ಮಾಡಿದ ಮತ್ತು ಎರಡು ಮೂರು ವರ್ಷದ ಗಿಡಗಳಲ್ಲಿ ಈ ಹಾವಳಿ ಹೆಚ್ಚಾಗಿ ಕಂಡುಬಂದಿದೆ. ಅದು ದೊಡ್ಡ ಮರಗಳಲ್ಲಿನ ಚಿಗುರಿಗೂ ಮಾರಕವಾಗಿದೆ. ಮಾವು ಪುಕ್ಕಟೆ ಬೆಳೆ ಎಂಬ ನಂಬಿಕೆ ರೈತರಲ್ಲಿತ್ತು. ಅಂದರೆ ಯಾವುದೇ ರೋಗಕ್ಕೆ ತುತ್ತಾಗದೆ ಫಸಲನ್ನು ಕೊಡುವುದಾಗಿತ್ತು. ಆದರೆ ಈಗ ಮಾವಿನ ಬೆಳೆಗೂ ಹಲವು ರೋಗ ಹಾಗೂ ಕೀಟಗಳು ಮುತ್ತಿಗೆ ಹಾಕಿವೆ.
ಕೊಂಬೆ ಕೊರಕ ಹುಳುವಿನ ಹಾವಳಿ ಇದ್ದದ್ದೆ. ಚಿಗುರೊಡೆದ ಕೊಂಬೆಯ ಮೂಲಕ ಒಳಗೆ ಪ್ರವೇಶಿಸುವ ಹುಳುಗಳು, ಕೊಂಬೆಯ ಮಧ್ಯ ಭಾಗದಲ್ಲಿನ ತಿರುಳನ್ನು ತಿಂದು ಕೊಂಬೆ ಒಣಗುವಂತೆ ಮಾಡುತ್ತಿವೆ. ಇದರಿಂದ ಬಂದ ಚಿಗುರು ಒಣಗುವುದರ ಜೊತೆಗೆ ಸತ್ತ ಕೊಂಬೆಯ ಸುತ್ತ ಹಲವು ಕೊಂಬೆಗಳು ಬೆಳೆಯುತ್ತಿವೆ. ಈ ಪ್ರಕ್ರಿಯೆ ಮುಂದುವರಿಯುವುದರಿಂದ ಗಿಡ ಮರಗಳಲ್ಲಿ ಕೊಂಬೆಗಳ ದಟ್ಟಣೆ ಹೆಚ್ಚಿ ಗಾಳಿ ಮತ್ತು ಬೆಳಕು ಸರಾಗವಾಗಿ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಒಳ ಭಾಗದ ಕೊಂಬೆ ಹಾಗೂ ಎಲೆಗಳು ರೋಗಪೀಡಿತವಾಗುತ್ತವೆ. ಇದು ಕಾಯಿ ಇಳುವರಿಯ ಮೇಲೂ ದುಷ್ಟರಿಣಾಮ ಬೀರುತ್ತದೆ.
ಇನ್ನು ಕಾಂಡ ಕೊರಕ ಹುಳುವಿನ ಬಾಧೆ ತಾಲ್ಲೂಕಿನಲ್ಲಿ ಸಾಮಾನ್ಯವಾಗಿದೆ. ಕಾಂಡದ ಮೂಲಕ ಒಳಗೆ ಪ್ರವೇಶಿಸಿ ಮರವನ್ನು ಕೊರೆದು ತಿನ್ನುವ ದೊಡ್ಡ ಗಾತ್ರದ ಹುಳುಗಳು ಮರಗಳ ಸಾವಿಗೆ ಕಾರಣವಾಗಿವೆ. ಬಾದಾಮಿ ಜಾತಿಯ ಮಾವಿನ ಮರಗಳಲ್ಲಿ ಇದರ ಹಾವಳಿ ಹೆಚ್ಚಾಗಿ ಕಂಡುಬರುತ್ತದೆ. ಇಷ್ಟಾದರೂ ಹೆಚ್ಚಿನ ಸಂಖ್ಯೆಯ ಮಾವು ಬೆಳೆಗಾರರು ಹೂವಿನ ರಕ್ಷಣೆಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟರೆ ಇತರ ರೋಗ, ಹುಳು ಹಾಗೂ ಕೀಟಬಾಧೆ ನಿವಾರಣೆಯತ್ತ ಗಮನ ಕೊಡುವುದಿಲ್ಲ. ಇದರಿಂದ ಇವುಗಳ ಹಾವಳಿ ಹೆಚ್ಚುತ್ತಿದೆ.
ತೋಟಗಾರಿಕಾ ಇಲಾಖೆಯಿಂದ ರೋಗ ಹಾಗೂ ಕೀಟ ನಿವಾರಣೆಗೆ ಸಲಹೆ ಲಭ್ಯವಿದ್ದರೂ, ಅದರ ಪ್ರಯೋಜನ ಪಡೆದುಕೊಳ್ಳುವವರ ಸಂಖ್ಯೆ ತೀರಾ ಕಡಿಮೆ. ಮಾವಿನ ಬೆಳೆ ವಿಸ್ತರಣೆ ಹಾಗೂ ಹಳೆ ಗಿಡಗಳ ಪುನ:ಶ್ಚೇತನಕ್ಕೆ ಇಲಾಖೆಯಿಂದ ಪ್ರೋತ್ಸಾಹ ಸಿಗುತ್ತಿರುವುದರಿಂದ ವಿಸ್ತರಣೆಯ ವೇಗ ಹೆಚ್ಚಿದೆ. ಹಾಗೆಯೇ ಬೆಳೆಯ ಸುತ್ತ ಸಮಸ್ಯೆಗಳೂ ಸುತ್ತಿಕೊಳ್ಳುತ್ತಿವೆ.
-ಆರ್.ಚೌಡರೆಡ್ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.