ADVERTISEMENT

ಮಾವಿನ ಮಡಿಲಲ್ಲಿ ಅಣಬೆ ಸುಗ್ಗಿ

ಆರ್.ಚೌಡರೆಡ್ಡಿ
Published 8 ಅಕ್ಟೋಬರ್ 2017, 8:55 IST
Last Updated 8 ಅಕ್ಟೋಬರ್ 2017, 8:55 IST
ಶ್ರೀನಿವಾಸಪುರ ಹೊರ ವಲಯದ ಮನೆಯೊಂದರಲ್ಲಿ ಸಾಂಬಾರು ತಯಾರಿಸಲು ತೊಳೆದಿಟ್ಟಿರುವ ನೈಸರ್ಗಿಕ ಅಣಬೆ
ಶ್ರೀನಿವಾಸಪುರ ಹೊರ ವಲಯದ ಮನೆಯೊಂದರಲ್ಲಿ ಸಾಂಬಾರು ತಯಾರಿಸಲು ತೊಳೆದಿಟ್ಟಿರುವ ನೈಸರ್ಗಿಕ ಅಣಬೆ   

ಶ್ರೀನಿವಾಸಪುರ ತಾಲ್ಲೂಕಿನ ಭೌಗೋಳಿಕ ಪರಿಸರ ಅಣಬೆಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ದಟ್ಟ ಕಾಡುಗಳು ಇಲ್ಲದಿದ್ದರೂ, ವಿಶಾಲವಾದ ಮಾವಿನ ತೋಟಗಳಿವೆ. ಉತ್ತರಕ್ಕೆ ಗುಡ್ಡಗಾಡು ಹರಡಿದೆ. ಮೊಗ ಮಳೆಯಿಂದ ಹಿಡಿದು, ಸ್ವಾತಿ ಮಳೆಯ ವರೆಗೆ ಅಣಬೆ ಸಿಗುತ್ತದೆ.

ಈ ಕಾಲದಲ್ಲಿ ಮಳೆಯಾದ ಮರುದಿನ ಬೆಳಿಗ್ಗೆ ಗ್ರಾಮೀಣ ಪ್ರದೇಶದ ಜನರು ಅಣಬೆ ಹುಡುಕಿಕೊಂಡು ಮಾವಿನ ತೋಟಗಳ ಕಡೆ ಹೆಜ್ಜೆ ಹಾಕುತ್ತಾರೆ. ಸಿಕ್ಕಿದ ಅಣಬೆಯನ್ನು ಕಿತ್ತು ಮನೆಗೆ ತರುತ್ತಾರೆ. ಅಣಬೆ ಸಿಕ್ಕಿದರೆ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ನೈಸರ್ಗಿಕ ಅಣಬೆ ಸಾರಿನ ರುಚಿ ಕಂಡವರು, ಅದಕ್ಕಾಗಿ ಕಾಯುವುದು ಸಾಮಾನ್ಯ.

ಮೂರು ದಶಕಗಳ ಬಳಿಕ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರೊಂದಿಗೆ ಅಣಬೆ ಸುಗ್ಗಿಯೂ ಆರಂಭವಾಗಿದೆ. ಅಣಬೆ ತರಲು ಹೋದವರು ಬರಿಗೈಲಿ ಹಿಂದಿರುಗುತ್ತಿಲ್ಲ. ಗೆದ್ದಲಿನ ಗೂಗೆಯಿಂದ ಬರುವ ಅಣಬೆ ತಿನ್ನಲು ಯೋಗ್ಯವಾಗಿರುತ್ತದೆ. ತಿನ್ನುವ ಅಣಬೆಯಲ್ಲಿ ಬೇರಣಬೆ, ಪೆಡಮಲ್ಲೆ ಅಣಬೆ ಎಂಬ ಎರಡು ಪ್ರಕಾರಗಳಿವೆ. ಇವೆರಡೂ ಶ್ವೇತವರ್ಣದಿಂದ ಕೂಡಿದ್ದು, ಅನುಭವ ಉಳ್ಳವರು ಇವುಗಳನ್ನು ಗುರುತಿಸಲು ಸಾಧ್ಯ. ನೆಲದಲ್ಲಿ ಗೆದ್ದಲು ಇರುವ ಕಡೆ ಹಾಗೂ ಹುತ್ತಗಳ ಸಮೀಪ ಇಂಥ ಅಣಬೆ ಬೆಳೆಯುತ್ತದೆ.

ADVERTISEMENT

ಅಣಬೆಯ ಆಯಸ್ಸು ತುಂಬಾ ಕಡಿಮೆ. ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ನೆಲದಾಳದಿಂದ ಮೇಲೇಳುತ್ತದೆ. ಬೆಳಿಗ್ಗೆ ಹೊತ್ತೇರುತ್ತಿದಂತೆ ಕೀಟಗಳು, ಹುಳುಗಳು ಹಾಗೂ ಕೋತಿಗಳ ಪಾಲಾಗುತ್ತದೆ. ಛತ್ರಿಯಂತೆ ಅರಳಿದ ಅಣಬೆಗಿಂತ, ಅರಳದ ಬುಡಪೆ ತಿನ್ನಲು ರುಚಿಯಾಗಿರುತ್ತದೆ ಎಂಬುದು ಅಣಬೆ ಪ್ರಿಯರ ಅನುಭವದ ಮಾತು.

ಹಿಂದೆ ನೈಸರ್ಗಿಕ ಅಣಬೆಯನ್ನು ಮಾರುತ್ತಿರಲಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ನೈಸರ್ಗಿಕ ಅಣಬೆಯೂ ಮಾರಾಟದ ಸರಕಾಗಿದೆ. ಕೆಲವರು ಕಾಡು ಮೇಡು ಸುತ್ತಿ ಅಣಬೆ ಸಂಗ್ರಹಿಸಿ ಸಮೀಪದ ಮಾರುಕಟ್ಟೆಗೆ ಕೊಂಡೊಯ್ದು ಮಾರುತ್ತಾರೆ. ಮಧ್ಯವರ್ತಿಗಳು ಒಳ್ಳೆ ಲಾಭ ಮಾಡಿಕೊಳ್ಳುತ್ತಾರೆ.

ಮಳೆಗಾಲದಲ್ಲಿ ತಿನ್ನಲು ನೈಸರ್ಗಿಕ ಅಣಬೆ ಹುಡುಕಿಕೊಂಡು ಹೊರಟವರಿಗೆ ಒಳ್ಳೆ ಅಣಬೆ ಮಾತ್ರವಲ್ಲದೆ, ಹುಚ್ಚಣಬೆಯ ದರ್ಶನವಾಗುತ್ತದೆ. ತಿನ್ನುವ ಅಣಬೆಯ ರೂಪ ಒಂದಾದರೆ, ಹುಚ್ಚಣಬೆಯ ಆಕಾರ ಹಲವು. ಸಾವಯವ ವಸ್ತುಗಳ ಮೇಲೆ ಬೆಳೆಯುವ ಹುಚ್ಚಣಬೆಗಳು ನೋಡಲು ಸುಂದರವಾಗಿ ಕಾಣುತ್ತವೆ. ಅವು ಸ್ಥಳೀಯವಾಗಿ ಮರ ಅಣಬೆ, ಕಲ್ಲಣಬೆ ಎಂದೆಲ್ಲಾ ಕರೆಯಲ್ಪಡುತ್ತವೆ. ಬೆಳೆಯುವ ಪರಿಸರ ಆಧರಿಸಿ ಹೆಸರಿಡುವುದು ರೂಢಿ. ಹುಚ್ಚಣಬೆ ತಿನ್ನಲು ಯೋಗ್ಯವಲ್ಲ.  ಒಂದು ವೇಳೆ ಗೊತ್ತಿಲ್ಲದೆ ಸಾರು ಮಾಡಿ ತಿಂದರೂ ಆರೋಗ್ಯ ಕೆಡುತ್ತದೆ. ಅಣಬೆ ಬಗ್ಗೆ ತಿಳಿವಳಿಕೆ ಇರುವವರು ಅಣಬೆ ತರಲು ಹೋಗುತ್ತಾರೆ. ಯಾಮಾರಿದರೆ ಸಮಸ್ಯೆ ತಪ್ಪಿದ್ದಲ್ಲ.

ಗೆದ್ದಲು ಗೂಗೆಯಿಂದ ಬರುವ ತಿನ್ನಲು ಯೋಗ್ಯವಾದ ಅಣಬೆ ಸಿಗುವುದು ಕಡಿಮೆಯಾಗುತ್ತಿದೆ. ಇದಕ್ಕೆ ಆಳವಾದ ಟ್ರಾಕ್ಟರ್‌ ಉಳುಮೆ ಪ್ರಮುಖ ಕಾರಣವಾಗಿದೆ. ಆದರೆ ಸಾವಯವ ಪದಾರ್ಥಗಳ ಮೇಲೆ ಬೆಳೆಯುವ ಹುಚ್ಚಣಬೆಗೆ ಬರವಿಲ್ಲ. ಯಾವುದೇ ಕೊಳೆತ ಪದಾರ್ಥದ ಮೇಲೆ ಮಳೆಯಾದರೆ ಸಾಕು ಹುಚ್ಚಣಬೆ ಸಾಲು ಕಾಣಿಸಿಕೊಳ್ಳುತ್ತದೆ. ತಿನ್ನುವ ಅಣಬೆಯದು ಒಂದು ಬಣ್ಣವಾದರೆ, ಹುಚ್ಚಣಬೆಗೆ ಹಲವು ಬಣ್ಣ!

ಚಿಟ್ಟೆ ಬಣ್ಣದಿಂದ ಗಮನ ಸೆಳೆಯುತ್ತದೆ. ಚಿಟ್ಟೆ ರೆಕ್ಕೆಯ ಬಣ್ಣ ಕಂಡು ಮಕ್ಕಳು ಸಂತೋಷಪಡುವರು. ಸುಂದರ ಚಿಟ್ಟೆಗಳು ಎಲೆಯ ಕೆಳಗೆ ಮೊಟ್ಟೆ ಇಡುತ್ತವೆ. ಮೊಟ್ಟೆಯೊಡೆದು ಬರುವ ಹುಳುಗಳು ಬೆಳೆಯನ್ನು ತಿಂದು ತೇಗುತ್ತವೆ. ಆದ್ದರಿಂದಲೇ ಕೃಷಿಕರು ಚಿಟ್ಟೆಯನ್ನು ‘ಸುಂದರ ಮೊಗದ ವಿಷಕನ್ಯೆ’ ಎಂದು ಕರೆಯುತ್ತಾರೆ. ಹಾಗೆಯೇ ಹುಚ್ಚಣಬೆ ನೋಡಲು ಸುಂದರವಾಗಿದ್ದರೂ, ತಿಂದರೆ ಕಷ್ಟ ಕಟ್ಟಿಟ್ಟ ಬುತ್ತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.