ಕೋಲಾರ: ನೀಲಂ ಚಂಡಮಾರುತದ ಪ್ರಭಾವದ ಪರಿಣಾಮವಾಗಿ ಬುಧವಾರ ಮುಂಜಾನೆಯಿಂದ ಜಿಲ್ಲೆಯಾದ್ಯಂತ ಶುರುವಾದ ಜಡಿಮಳೆಯು ಜನಜೀವನಕ್ಕೆ ಉಲ್ಲಾಸ ತುಂಬಿತಾದರೂ, ದೈನಂದಿನ ಬದುಕು ಅಸ್ತವ್ಯಸ್ತಗೊಂಡಿತು.
ಶಾಲಾ ಮಕ್ಕಳು, ಉದ್ಯೋಗಸ್ಥರು, ಕಾರ್ಮಿಕರು ಸೇರಿದಂತೆ ಬಹುತೇಕರ ದಿನಚರಿಯಲ್ಲಿ ಏರುಪೇರು ಉಂಟಾಯಿತು. ಬಸ್‌ನಿಲ್ದಾಣ,ಆಟೋರಿಕ್ಷಾ ನಿಲ್ದಾಣಗಳಲ್ಲಿ ಪ್ರಯಾಣಿಕರು ವಿರಳವಾಗಿ ಕಂಡು ಬಂದರು.
ಅಂಗಡಿಗಳು ಎಂದಿನಂತೆ ನಿಗದಿತ ಸಮಯಕ್ಕೆ ಸರಿಯಾಗಿ ಬಾಗಿಲು ತೆರೆಯಲಿಲ್ಲ. ತೆರೆದ ಬಳಿಕವೂ ವ್ಯಾಪಾರ- ವಹಿವಾಟು ನಿರೀಕ್ಷೆಯಂತೆ ನಡೆಯಲಿಲ್ಲ.
ಮುಚ್ಚಿದ ಅಂಗಡಿಗಳ ಮುಂದೆ ಜನ ನಡುಗುತ್ತಾ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಮನೆಗಳಲ್ಲೇ ಉಳಿದವರು ಸ್ವೆಟರ್, ಟೋಪಿಗಳನ್ನು ಧರಿಸಿ ಮುದುಡಿ ಕೂತರು. ಹೊರಗೆ ಬರಲೇಬೇಕಾದವರು ಜರ್ಕಿನ್, ರೈನ್‌ಕೋಟ್‌ಗಳನ್ನು ಧರಿಸಿ ಸಂಚರಿಸಿದರು. ಈ ಸೌಲಭ್ಯಗಳಿಲ್ಲದೆ ನಗರ, ಪಟ್ಟಣಗಳಿಗೆ ಬಂದ ಗ್ರಾಮಸ್ಥರು ಹೆಗಲ ಮೇಲಿನ ಟವಲ್‌ಗಳಿಂದ ಮುಖಮುಚ್ಚಿಕೊಂಡು ನಡುಗುತ್ತಿದ್ದರು.
ತಾಯಂದಿರು ತಮ್ಮ ಸೆರಗಿನ ಮರೆಯಲ್ಲಿ ಮಕ್ಕಳನ್ನು ಬೆಚ್ಚಗಿಟ್ಟಿದ್ದರು. ಹೋಟೆಲ್‌ಗಳ, ಟೀಕಾಫಿ ಅಂಗಡಿಗಳಲ್ಲಿ ಕೆಲಸ ಮಾಡುವ ಬಾಲಕರು ಚಳಿ-ಮಳೆಯಲ್ಲೇ ಕಾಫಿ-ಟೀ ಸರ್ವ್ ಮಾಡುತ್ತಿದ್ದರು.
ಆಗಾಗ ಕೊಂಚ ಜೋರಾಗಿ ಸುರಿದ ಮಳೆ ಜಡಿಯಾಗಿ ಮತ್ತೆ ಮುಂದುವರಿದಿತ್ತು. ಸಂಜೆ 4ರ ಬಳಿಕ ಜಡಿಮಳೆ ಕೊಂಚ ಜೋರಾಗಿತ್ತು. ನಿರಂತರವಾಗಿ ಸುರಿಯುತ್ತಲೇ ಇತ್ತು. ಮಧ್ಯಾಹ್ನದವರೆಗೂ ಕಂಡು ಬಂದ ಜನ ಮತ್ತು ವಾಹನ ಸಂಚಾರವು ಮಧ್ಯಾಹ್ನದ ಬಳಿಕ ಇಳಿಮುಖವಾಗಿತ್ತು.
ಕೆಸರು ರಸ್ತೆ: ಅಗತ್ಯ ಕೆಲಸಗಳಿಗೆ ಅನಿವಾರ್ಯವಾಗಿ ಮನೆಗಳಿಂದ ಹೊರ ಬಂದ ಜನ ಸುಗಮವಾಗಿ ಸಂಚರಿಸಲು ಹಳ್ಳಬಿದ್ದು ಕೆಸರಿನಿಂದ ತುಂಬಿದ್ದ ರಸ್ತೆಗಳು ಅವಕಾಶ ಕೊಡಲಿಲ್ಲ. ಬೆಳಗಿನ ಜಾವದಿಂದಲೇ ಬಿದ್ದ ಮಳೆಗೆ ಕೆಸರುಮಯವಾಗಿದ್ದ ರಸ್ತೆಗಳು ಮಧ್ಯಾಹ್ನದ ವೇಳೆಗೆ ಕೆಸರು ಗುಂಡಿಗಳಾಗಿದ್ದವು.
ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕ್ಲಾಕ್‌ಟವರ್ ಸಮೀಪದ ಪ್ರದೇಶಗಳು, ಶೆಹನ್‌ಶಾ ನಗರ, ಮಹಾಲಕ್ಷ್ಮಿ ಬಡಾವಣೆ, ಮುನೇಶ್ವರ ನಗರ, ಕಾರಂಜಿಕಟ್ಟೆ ರಸ್ತೆ, ಟೇಕಲ್ ರಸ್ತೆ, ಎಂಬಿ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಹೆಚ್ಚು ತೊಂದರೆಯಾಯಿತು.
ನಗರದ ಕಾರಂಜಿಕಟ್ಟೆ ರಸ್ತೆಯ ಎರಡನೇ ಕ್ರಾಸ್ ಬಳಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶುಭಲ ಶಾಲೆಯ ವ್ಯಾನ್ ಸಂಚರಿಸುತ್ತಿದ್ದ ವೇಳೆಯಲ್ಲೇ ರಸ್ತೆ ಬದಿಯ ಹಳ್ಳದಲ್ಲಿ ಎಡಭಾಗದ ಎರಡೂ ಚಕ್ರಗಳು ದಿಡೀರನೆ ಸಿಲುಕಿ ಸ್ಥಗಿತಗೊಂಡ ಘಟನೆ ಸಂಜೆ 5.30ರ ವೇಳೆಗೆ ನಡೆದು ಆತಂಕ ಸೃಷ್ಟಿಸಿತ್ತು.
ಸುಮಾರು 30 ಮಕ್ಕಳಿದ್ದ ಬಸ್ ಕೆಸರಿನಲ್ಲಿ ಏಕಾಏಕಿ ಸಿಲುಕಿ ನಿಂತ ಪರಿಣಾಮ ಮಕ್ಕಳು ಗಾಬರಿಗೊಂಡಿದ್ದರು. ಬಸ್ ಅನ್ನು ಹಳ್ಳದಿಂದ ಮೇಲಕ್ಕೆ ನೂಕಲು ಯತ್ನಿಸಿ ವಿಫಲರಾದ ಶಾಲೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಲಾರಿಯನ್ನು ತರಿಸಿ ಹಗ್ಗದ ಮೂಲಕ ವ್ಯಾನ್ ಅನ್ನು ಹೊರಕ್ಕೆ ತೆಗೆದಯುವ ಹೊತ್ತಿಗೆ ಅರ್ಧ ಗಂಟೆಗೂ ಹೆಚ್ಚು ಕಾಲವಾಗಿತ್ತು.
ರಾತ್ರಿಯಿಡಿ ಜಡಿಮಳೆ ಬೀಳುತ್ತಿತ್ತು.
ಸತತ ಮಳೆ
ಶ್ರೀನಿವಾಸಪುರ: ನಿಲಂ ಚಂಡಮಾರುತದ ಪರಿಣಾಮವಾಗಿ ಮಂಗಳವಾರ ರಾತ್ರಿಯಿಂದ ತಾಲ್ಲೂಕಿನಲ್ಲಿ ಒಂದೇ ಸಮನೆ ಜಡಿಮಳೆ ಸುರಿಯುತ್ತಿದೆ. ಇದರಿಂದ ಇಷ್ಟು ದಿನ ಮಳೆಗಾಗಿ ಎದುರು ನೋಡುತ್ತಿದ್ದ ರೈತರಿಗೆ ಸಂತೋಷವಾಗಿದೆ.
ಈ ಬಾರಿ ತಡವಾಗಿ ಬಿತ್ತನೆ ಮಾಡಿರುವ ಅವರೆ, ತೊಗರಿ, ಜೋಳ, ಹುರುಳಿ ಮುಂತಾದ ಬೆಳೆಗಳು ಬೆಳೆಯಲು ಈಗ ಬೀಳುತ್ತಿರುವ ಮಳೆ ಸಹಕಾರಿಯಾಗಿದೆ. ಆದರೆ ಇದೇ ವಾತಾವರಣ ಒಂದೆರಡು ದಿನ ಮುಂದುವರೆದರೆ, ಆಲೂಗಡ್ಡೆ, ಕೋಸು, ಟೊಮೆಟೊದಂಥ ತೋಟದ ಬೆಳೆಗಳಿಗೆ ಹಾನಿ ಉಂಟಾಗುವ ಸಂಭವ ಇದೆ ಎಂದು ಕೋಟಿಗಾನಹಳ್ಳಿ ಗ್ರಾಮದ ರೈತ ಪಿ.ಬಾಲಕೃಷ್ಣಪ್ಪ ತಿಳಿಸಿದರು.
ಹುಳುಗಳಿಗೆ ಸೊಪ್ಪನ್ನು ಕೊಯ್ದು ತರಲೂ ಮಳೆ ನಿಲ್ಲುತ್ತಿಲ್ಲ. ಇನ್ನು ಹುಳು ಹಣ್ಣಾಗಿರುವ ರೈತರು ಚಂದ್ರಿಕೆಗೆ ಹಾಕಲು ಸಾಧ್ಯವಾಗದೆ ಪರಿತಪಿಸಿದರು. ಗ್ರಾಮೀಣ ಪ್ರದೇಶದಲ್ಲಿ ಒಣ ಹುಲ್ಲಿನ ಸಂಗ್ರಹ ಮುಗಿದಿರುವುದರಿಂದ, ಬಯಲಿನ ಮೇಲೆ ಹಸಿರು ಹುಲ್ಲನ್ನು ಸಂಗ್ರಹಿಸಿ ತರಲು ಸಾಧ್ಯವಾಗಲಿಲ್ಲ. ಹಾಗಾಗಿ ಜೋಳದ ಕಡ್ಡಿ ಬೆಳೆದಿರುವ ರೈತರಲ್ಲಿ ದುಂಬಾಲು ಬಿದ್ದು, ಒಂದು ಕಟ್ಟು ಪಡೆದುಕೊಳ್ಳಲು ಪ್ರಯತ್ನಿಸುವುದು ಸಾಮಾನ್ಯವಾಗಿತ್ತು.
ದಸರಾ ರಜೆ ಮುಗಿದು ಶಾಲೆಗಳು ಪ್ರಾರಂಭಗೊಂಡಿದ್ದರೂ, ಸತತ ಮಳೆ ಹಾಗೂ ನಡುಗಿಸುವ ಚಳಿಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ತೀರಾ ಕಡಿಮೆ ಇದ್ದಿತು. ಮಧ್ಯಾಹ್ನದ ಹೊತ್ತಿಗೆ ಕೆಲವು ಶಾಲೆಗಳು ಮಕ್ಕಳನ್ನು ಮನೆಗೆ ಕಳುಹಿಸಿದವು.
ಬರದೆ ಬರದೆ ಮಳೆ ಬರುತ್ತಿದೆ. ಕೆರೆ ಕುಂಟೆಗೆ ನೀರಾದರೂ ಬಂದರೆ ಕೊಳವೆ ಬಾವಿಗಳು ಚೇತರಿಸಿಕೊಳ್ಳುತ್ತವೆ. ಕುಡಿಯಲು ನೀರಾದರೂ ಸಿಗುತ್ತದೆ. ಇಲ್ಲವಾದರೆ ಮುಂದಿನ ಬೇಸಿಗೆಯಲ್ಲಿ ದೇವರೇ ಕಾಪಾಡಬೇಕು ಎಂದು ಪನಸಮಾಕನಹಳ್ಳಿ ಗ್ರಾಮದ ಮುನಿಯಪ್ಪ ಆಕಾಶದತ್ತ ಕೈಮುಗಿದರು.
ಮೆರವಣಿಗೆ ರದ್ದು
ಕೆಜಿಎಫ್: ನಗರದಲ್ಲಿ ಬೀಳುತ್ತಿರುವ ಜಡಿ ಮಳೆಯಿಂದಾಗಿ ಗುರುವಾರ ನಡೆಯಬೇಕಾಗಿದ್ದ ಕನ್ನಡ ರಾಜ್ಯೋತ್ಸವ ಮೆರವಣಿಗೆ ರದ್ದಾಗಿದೆ.
ಮಳೆ ಇನ್ನೂ ಎರಡು ದಿನ ಇರುತ್ತದೆ ಎಂಬ ಹವಾಮಾನ ಇಲಾಖೆಯ ವರದಿಯಂತೆ, ರಾಜ್ಯೋತ್ಸವದ ಅಂಗವಾಗಿ ನಡೆಯಬೇಕಾಗಿದ್ದ ಸ್ತಬ್ದ ಚಿತ್ರಗಳ ಮೆರವಣಿಗೆ ಹಾಗೂ ಉತ್ಸವಗಳನ್ನು ರದ್ದುಗೊಳಿಸಲಾಗಿದೆ.
ಕನ್ನಡ ಸಂಘದ ಅವರಣದಲ್ಲಿ ಪ್ರತಿವರ್ಷದಂತೆ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ಈ ಬಾರಿಯೂ ನಡೆಯುತ್ತದೆ. ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಕನ್ನಡ ಸಂಘದ ಕಾರ್ಯದರ್ಶಿ ಜಯಶಂಕರ್ ತಿಳಿಸಿದ್ದಾರೆ.
ರಾಜ್ಯೋತ್ಸವಕ್ಕೆ ಮಳೆ ಅಡ್ಡಿ
ಮಾಲೂರು: ಪಟ್ಟಣದಲ್ಲಿ ಗುರುವಾರ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಪರ ಸಂಘಟನೆಗಳ ಒಕ್ಕೂಟ ಮತ್ತು ನಾರಾಯಣಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅದ್ದೂರಿ ಮೆರವಣಿಗೆ ಮತ್ತು 3 ದಿನಗಳ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹವಾಮಾನ ವೈಪರೀತ್ಯದಿಂದ ಮುಂದೂಡಲಾಗಿದೆ ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ರಾಮಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.